ಕಲಬುರಗಿ: ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ನೀಡುವ ಚಿಕಿತ್ಸೆ ವೆಚ್ಚದ ಬೋರ್ಡ್‌ಗಳನ್ನು ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಪ್ರದರ್ಶಿಸಬೇಕು. ಆ ಮೂಲಕ ನಡೆಯುತ್ತಿರುವ ಸುಲಿಗೆ ತಪ್ಪಿಸಬೇಕು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ್ ಪ್ರಕಾಶ್ ಪಾಟೀಲ್ ಸೂಚಿಸಿದರು.
ನಗರದಲ್ಲಿ ಶನಿವಾರ ಜಿಮ್ಸ್ ಆವರಣದಲ್ಲಿ ನಿರ್ಮಾಣಗೊಂಡಿರುವ ಟ್ರಾಮಾ ಕೇರ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳ ಬಗ್ಗೆ ಯಾವುದೇ ವಿರೋಧವಿಲ್ಲ. ಆದರೆ ಚಿಕಿತ್ಸೆ ಹೆಸರಿನಲ್ಲಿ ಬಡವರು ಹಾಗೂ ಅಶಕ್ತರನ್ನು ಸುಲಿಗೆ ಮಾಡುವಂತಹ ಕೆಲಸಗಳು ನಡೆಯುತ್ತಿದೆ. ದಿನೇದಿನೆ ಈ ಕುರಿತು ದೂರುಗಳು ಬರುತ್ತಿವೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ನೀಡಲಾಗುತ್ತಿದೆ. ಅದರ ವೆಚ್ಚ ಎಷ್ಟಾಗುತ್ತದೆ. ಯಾವ-ಯಾವ ಸೇವೆಗಳಿಗೆ ಎಷ್ಟು ಹಣವನ್ನು ಪಡೆಯಲಾಗುತ್ತದೆ ಎನ್ನುವ ವಿವರಗಳನ್ನು ರೋಗಿ ಮತ್ತು ರೋಗಿಯ ಸಂಬಂಧಿಕರಿಗೆ ಮೊದಲು ತಿಳಿಸಬೇಕು ಎಂದರು.
ನಾಲ್ಕನೇ ಟ್ರಾಮಾ ಸೆಂಟರ್
ಅಪಘಾತಗಳು ಸಂಭವಿಸಿದಾಗ ತುರ್ತು ಆರೋಗ್ಯ ಸೇವೆ ನೀಡಲು ರಾಜ್ಯದಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಎರಡು ಮತ್ತು ಮೈಸೂರಿನಲ್ಲಿ ಒಂದು ಟ್ರಾಮಾ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಅದರೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ತುರ್ತು ಚಿಕಿತ್ಸೆ ನೀಡುವಂಥ ಕೇಂದ್ರದ ಆವಶ್ಯಕತೆ ಇತ್ತು. ಆದ್ದರಿಂದ ಕಲಬುರಗಿಯಲ್ಲಿ ನಾಲ್ಕನೆಯ ಟ್ರಾಮಾ ಕೇರ್ ಸೆಂಟರ್ ಉದ್ಘಾಟನೆಯಾಗಿದೆ ಎಂದರು.
ಈಗಾಗಲೇ ಜಯದೇವ ಆಸ್ಪತ್ರೆಯನ್ನು ವಿಸ್ತರಿಸಲಾಗುತ್ತಿದೆ. ಅದರೊಂದಿಗೆ ಶೀಘ್ರದಲ್ಲಿಯೇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲು ಹಣಕಾಸು ಇಲಾಖೆಯ ಅನುಮೋದನೆ ಸಿಕ್ಕಿದೆ. ಇನ್ನಷ್ಟೇ ಕೆಲಸ ಆರಂಭಿಸಬೇಕಾಗಿದೆ. ಅಂದುಕೊಂಡಂತೆ ಎಲ್ಲವೂ ಆದರೆ ಜೂನ್‌ದೊಳಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂದರು.
ಕಲಬುರಗಿಯಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ಘಟಕವನ್ನೂ ಆರಂಭಿಸಲು ಯೋಜಿಸಲಾಗಿದೆ. ಅಲ್ಲದೇ 15 ಕೋಟಿ ರೂ. ವೆಚ್ಚದ ಸುಟ್ಟ ಗಾಯಗಳ ಚಿಕಿತ್ಸಾ ಘಟಕಕ್ಕಾಗಿ ಈಗಾಗಲೇ ಸಂಪುಟದ ಅನುಮೋದನೆಯೂ ದೊರೆತಿದೆ ಎಂದರು.