ಬಳ್ಳಾರಿ: ದಿನೇದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಈಗಾಗಲೇ ಅಗತ್ಯ ಕ್ರಮಕೈಗೊಂಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆಯಿಂದಾಗಿ ಬಹುತೇಕರು ಗುಣಮುಖರಾಗಿದ್ದಾರೆ. ಈ ನಡುವೆ ಸೋಂಕು ನಿಯಂತ್ರಣಗೊಳ್ಳದೆ ಮತ್ತಷ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಯ್ದ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲು ಮುಂದಾಗುತ್ತಿದೆ.
ಕೋವಿಡ್ ಎಂಬುದು ಹೊಸದೊಂದು ರೋಗವಾಗಿದೆ. ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಉಳ್ಳವರಿಗೆ ಈ ರೋಗ ಬಂದಿದ್ದೇ ಗೊತ್ತಾಗುವುದಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆಯುಳ್ಳ ವೃದ್ಧರು, ಚಿಕ್ಕ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಲ್ಲಿ ಕೂಡಲೇ ದುಷ್ಪರಿಣಾಮ ಬೀರುತ್ತದೆ. ಹೀಗೆ ಜ್ವರ, ಶೀತ, ನೆಗಡಿ, ಕೆಮ್ಮು, ವಿಪರೀತ ಸುಸ್ತಾದ ಲಕ್ಷಣಗಳುಳ್ಳ ಕೋವಿಡ್ ವೈರಸ್ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಾಣಿಸಿಕೊಂಡು ಹಲವರು ಸಾವಿಗೀಡಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆದು ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ನಿಯಂತ್ರಿಸುವುದರ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಪಡಿಸುತ್ತಿದೆ. ಆದರೂ, ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಗುರುತಿಸಿದ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎಂಟು ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸುವರ್ಣಾ ಆರೋಗ್ಯ ಟ್ರಸ್ಟ್ ಅಡಿ ಒಪ್ಪಂದ ಮಾಡಿಕೊಂಡಿದ್ದ ಆರೋಗ್ಯಧಾಮ ಆಸ್ಪತ್ರೆ, ಜಿಲ್ಲೆಯ ತೋರಣಗಲ್ಲುನಲ್ಲಿರುವ ಜಿಂದಾಲ್ ಸಂಸ್ಥೆ ಸಂಜೀವಿನಿ ಆಸ್ಪತ್ರೆ, ಹೊಸಪೇಟೆಯ ಡ್ಯಾಮ್ ರಸ್ತೆಯ ಸಿಟಿ ಆಸ್ಪತ್ರೆ, ಹೊಸಪೇಟೆಯ ದೀಪಾಲಿ ಆಸ್ಪತ್ರೆ, ಹರಪನಹಳ್ಳಿಯ ಮಹೇಶ್ ನರ್ಸಿಂಗ್ ಹೋಂ, ಹೊಸಪೇಟೆಯ ಉಮಾಕಾಂತ್ ಕಣ್ಣಿನ ಆಸ್ಪತ್ರೆ, ಕೆಎಲ್‌ಎಸ್ ಆಸ್ಪತ್ರೆ, ಕಂಪ್ಲಿಯ ಅಭಯ್ ಆಸ್ಪತ್ರೆ ಸೇರಿ ಒಟ್ಟು 8 ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾಡಳಿತಕ್ಕೆ ಮಾಹಿತಿ ಕಡ್ಡಾಯ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಗುರುತಿಸಲಾಗಿರುವ ಖಾಸಗಿ ಆಸ್ಪತ್ರೆಗಳು, ಜಿಲ್ಲಾಡಳಿತ, ಆರೋಗ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಖಾಸಗಿ ಆಸ್ಪತ್ರೆಯಲ್ಲಿನ ರೋಗಿಗೆ ಕೋವಿಡ್ ಟೆಸ್ಟ್ ನ್ನು ಸರ್ಕಾರಿ ಆಸ್ಪತ್ರೆಯಲ್ಲೇ ಮಾಡಿಸಬೇಕು. ಕೋವಿಡ್ ಸೋಂಕಿತರೆಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆಯೇ ನಿರ್ಧರಿಸಿ ಸೂಚಿಸಿದಾಕ್ಷಣ ರೋಗಿಗೆ ಚಿಕಿತ್ಸೆ ಆರಂಭಿಸಬೇಕು. ರಾಜ್ಯ ಸರ್ಕಾರದ ಆದೇಶದಂತೆ ಬದಲಾಗುವ ನಿಯಮಾವಳಿ ಪ್ರಕಾರ ಚಿಕಿತ್ಸೆ ನೀಡಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಸೋಂಕು ಆಯುಷ್ಮಾನ್ ಕಾರ್ಡ್ ವ್ಯಾಪ್ತಿಗೆ: ಕೋವಿಡ್ ಸೋಂಕನ್ನು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳಿಗೆ ಒಂದುವೇಳೆ ಕೋವಿಡ್ ಸೋಂಕು ಇರುವುದು ದೃಢವಾದಲ್ಲಿ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಕೋವಿಡ್-19 ನಿರ್ವಹಣಾ ಪ್ಯಾಕೇಜ್ ವತಿಯಿಂದ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಮರುಪಾವತಿಯಾಗಲಿದೆ. ಅಲ್ಲದೇ, ಈ ಕುರಿತು ದರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸೂಕ್ತ ಮಾರ್ಗದರ್ಶನ ಬರಬೇಕಿದೆ.
ಸುವರ್ಣ ಆರೋಗ್ಯ ಟ್ರಸ್ಟ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದ ಜಿಲ್ಲೆಯ 8 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಒಂದುವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಆಗಲ್ಲ ಎಂದಾದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೇ ನೀಡಲಾಗುವುದು. ಈ ಕುರಿತು ದರಗಳ ಕುರಿತು ಸರ್ಕಾರದಿಂದ ನಿರ್ದೇಶನ ಬರಬೇಕಿದೆ. –
ಎಸ್.ಎಸ್. ನಕುಲ್, ಜಿಲ್ಲಾಧಿಕಾರಿ
-ವೆಂಕೋಬಿ ಸಂಗನಕಲ್ಲು