Advertisement

ಗಾಯಗೊಂಡ ಕಡವೆಗೆ ಚಿಕಿತ್ಸೆ

11:58 PM Jun 25, 2019 | mahesh |

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಅರಣ್ಯ ಇಲಾಖೆ ವಿಭಾಗಕ್ಕೆ ಸೇರಿದ ಸುಬ್ರಹ್ಮಣ್ಯ ಮೀಸಲು ಅರಣ್ಯ ವ್ಯಾಪ್ತಿಯ ಪದೇಲ ಬಳಿ ಕೃಷಿ ಜಮೀನಿನ ಪಕ್ಕ ಗಾಯಗೊಂಡ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾದ ಕಡವೆ ಯನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ರಕ್ಷಿಸಿದ್ದು, ಮಂಗಳವಾರ ಚಿಕಿತ್ಸೆ ನೀಡಿದೆ.

Advertisement

ಇಲ್ಲಿನ ಪದೇಲ ಎಂಬಲ್ಲಿ ಕೃಷಿಕ ರಮಾನಂದ ಅವರಿಗೆ ಸೇರಿದ ಕೃಷಿ ತೋಟದ ಪಕ್ಕದಲ್ಲಿ ಅಳವಡಿಸಿದ ತಂತಿ ಬೇಲಿಯಲ್ಲಿ ಹೆಣ್ಣು ಕಡವೆಯೊಂದು ಸೋಮವಾರ ಸಿಲುಕಿತ್ತು. ಅದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಕಡವೆಯ ಕಾಲಿಗೆ ಸಿಕ್ಕಿಕೊಂಡಿದ್ದ ಬೇಲಿ ಪರದೆಗಳನ್ನು ಬಿಡಿಸಿದ್ದರು. ಅದು ಮಲಗಿದಲ್ಲಿಂದ ತನ್ನ ಪಾಡಿಗೆ ಎದ್ದು ಹೋಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಮಂಗಳವಾರ ಬೆಳಗ್ಗೆ ನೋಡಿದಾಗಲೂ ಕಡವೆ ಅಲ್ಲಿಯೇ ಮಲಗಿದ್ದುದನ್ನು ಕಂಡ ಸ್ಥಳೀಯರು ಮತ್ತೆ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.

ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ಸಿಬಂದಿ ಕಡವೆಯನ್ನು ಅರಣ್ಯ ಇಲಾಖೆಯ ದೇವರಹಳ್ಳಿ ಸಸ್ಯಪಾಲನ ಕ್ಷೇತ್ರಕ್ಕೆ ಪಿಕಪ್‌ ವಾಹನದಲ್ಲಿ ಕರೆತಂದು, ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಗುತ್ತಿಗಾರು ಕೇಂದ್ರದ ಪಶು ವೈದ್ಯಾಧಿಕಾರಿ ಡಾ| ವೆಂಕಟಾಚಲಪತಿ ಕಡವೆಗೆ ಚಿಕಿತ್ಸೆ ನೀಡಿದರು. ಕಡವೆ ದೇಹದ ಮೇಲೆ ಆಗಿರುವ ಗಾಯಗಳಿಗೆ ಔಷಧ ಹಚ್ಚಿ, ಚುಚ್ಚುಮದ್ದು ನೀಡಿದ್ದಾರೆ. ಕಡವೆ ಬಳಲಿದ್ದು, ಓಡಾಡಲು ಶಕ್ತವಾಗಿಲ್ಲ. ಈಗ ಅದು ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗಾಯಗೊಂಡು ಪತ್ತೆಯಾದ ಕಡವೆ ಗರ್ಭ ಧರಿಸಿರುವ ಸಾಧ್ಯತೆ ಇದೆ ಎನ್ನುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಸ್ಕ್ಯಾನಿಂಗ್‌ ಇತ್ಯಾದಿ ಪರೀಕ್ಷೆಗಳ ಬಳಿಕವಷ್ಟೇ ಖಚಿತವಾಗಿ ಹೇಳಲು ಸಾಧ್ಯ ಎಂದು ವೈದ್ಯರು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next