Advertisement

ವ್ಯಕ್ತಿಯನ್ನು ದೇವರಂತೆ ಕಾಣುವುದು ಪ್ರಜಾಪ್ರಭುತ್ವವಲ್ಲ: ಮಲ್ಲಿಕಾರ್ಜುನ ಖರ್ಗೆ

11:19 PM Jan 08, 2023 | Team Udayavani |

ಚಿತ್ರದುರ್ಗ: ನರೇಂದ್ರ ಮೋದಿಯನ್ನು ದೇವರಂತೆ ಬಿಂಬಿಸಲಾಗುತ್ತಿದೆ. ಒಬ್ಬ ವ್ಯಕ್ತಿಯನ್ನು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದೇವರಂತೆ ಕಾಣುವು ದರಿಂದ ಸರ್ವಾಧಿಕಾರ ಬರುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

Advertisement

ಕೆಪಿಸಿಸಿಯಿಂದ ಚಿತ್ರದುರ್ಗದ ಜಯದೇವ ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಏಕತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರಜಾತಂತ್ರ, ಸಂವಿಧಾನ ಉಳಿಸುವ ಗುರಿ ಇಟ್ಟುಕೊಳ್ಳಬೇಕು. ಇವೆರಡೂ ಇಲ್ಲದಿದ್ದರೆ ಮೀಸ ಲಾತಿ, ಎಂಎಲ್‌ಎ, ಮಂತ್ರಿ ಯಾವುದೂ ಆಗುವುದಿಲ್ಲ. ಆದರೆ ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಎಲ್ಲವನ್ನೂ ಧಿಕ್ಕರಿಸುತ್ತಿದೆ ಎಂದರು.

ಎಸ್ಸಿ, ಎಸ್ಟಿ ಸಮುದಾಯಗಳಲ್ಲಿ ಸಂಘಟನೆ ಇಲ್ಲದಿದ್ದರೆ ಛಿದ್ರ ಛಿದ್ರವಾಗುತ್ತೇವೆ. ಶಕ್ತಿ ಹಾಗೂ ಒಗ್ಗಟ್ಟಿದ್ದಾಗ ಮಾತ್ರ ಬೆಲೆ. ಒಗ್ಗಟ್ಟಿಲ್ಲ ಅಂದರೆ ನಿಮ್ಮನ್ನು ಒಡೆದು ಆಳುತ್ತಾರೆ ಎಂದರು.

ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಸದ್ಯ 30 ಲಕ್ಷ ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಈ ಬಗ್ಗೆ ರಾಹುಲ್‌ ಗಾಂಧಿ ಹೋರಾಡುತ್ತಿದ್ದಾರೆ. ಉಳಿದ ಯಾರಿಗೂ ಈ ಬಗ್ಗೆ ಕಾಳಜಿ ಇಲ್ಲ. ಖಾಲಿಯಿ ರುವ ಹುದ್ದೆಗಳನ್ನು ಭರ್ತಿ ಮಾಡಿದರೆ ಎಸ್ಸಿ, ಎಸ್ಟಿ, ಒಬಿಸಿಗಳಿಗೆ 15 ಲಕ್ಷ ನೌಕರಿ ಸಿಗುತ್ತವೆ ಎಂದರು.

ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ನೀಡುವು ದಾಗಿ ಅಧಿಕಾರಕ್ಕೆ ಬಂದರು. ಈವರೆಗೆ 18 ಕೋಟಿ ಜನರಿಗೆ ಉದ್ಯೋಗ ಸಿಗಬೇಕಾಗಿತ್ತು. ಯಾರಿಗೂ ಸಿಕ್ಕಿಲ್ಲ. ಇದನ್ನು ಯಾರೂ ಪ್ರಶ್ನಿಸುವುದಿಲ್ಲ. ಮೋದಿ, ಅಮಿತ್‌ ಶಾ ಬಂದಾಗ ಅವರಿಗೆ ಜೈಕಾರ ಹಾಕುತ್ತೀರಾ. ರೈತರ ಆದಾಯ ದುಪ್ಪಟ್ಟಾಗಲಿಲ್ಲ. ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಮೌಲಾನಾ ಆಜಾದ್‌ ವಿದ್ಯಾರ್ಥಿ ವೇತನವನ್ನೂ ಸ್ಥಗಿತಗೊಳಿಸಲಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಜನ ಯಾಕೆ ಹೋರಾಟ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ಬೀದಿಗಿಳಿದು ಹೋರಾಟ: ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೀಸಲಾತಿಗೆ ಕಾನೂನು ರಕ್ಷಣೆ ಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಜ.30ರೊಳಗೆ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸದಿದ್ದರೆ ಕಾಂಗ್ರೆಸ್‌ ಬೀದಿಗಿಳಿದು ಹೋರಾಟ ಮಾಡುತ್ತದೆ. ಆಡಳಿತಾರೂಢ ಬಿಜೆಪಿ ಎಂದೂ ಸಾಮಾಜಿಕ ನ್ಯಾಯ, ಮೀಸಲಾತಿಯಲ್ಲಿ ನಂಬಿಕೆ, ಬದ್ಧತೆ ಹೊಂದಿಲ್ಲ. ಇತಿಹಾಸವನ್ನು ಗಮನಿಸಿ ದಾಗ ದೇಶಕ್ಕೆ ಅಂಬೇಡ್ಕರ್‌ ನೇತೃತ್ವದಲ್ಲಿ ರಚನೆ ಯಾದ ಸಂವಿಧಾನವನ್ನು ಸಂಘ ಪರಿವಾರದವರು ಮಾನಸಿಕವಾಗಿ ಒಪ್ಪಿಲ್ಲ. ಅವರಿಗೆ ಸಮ ಸಮಾಜದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು.

ಬಿಜೆಪಿ ಸಾಮಾಜಿಕ ನ್ಯಾಯದ ಪರವಾಗಿದ್ದಿದ್ದರೆ ಸಾಕಷ್ಟು ಸಲ ಮೀಸಲಾತಿಯನ್ನು ವಿರೋಧಿಸಿದ್ದು ಯಾಕೆ? ಎಷ್ಟು ವರ್ಷ ಮೀಸಲಾತಿ ಇರಬೇಕು ಎಂದು ಪದೇಪದೆ ಯಾಕೆ ಕೇಳುತ್ತಾರೆ? ಮೀಸಲಾತಿ ಭಿಕ್ಷೆ ಅಲ್ಲ. ಅದು ಶೋಷಿತರ ಹಕ್ಕು ಎಂದು ಬಾಬಾ ಸಾಹೇಬರು ಹೇಳಿದ್ದಾರೆ. ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಲೇಬೇಕು ಎಂದರು.

136 ಸ್ಥಾನದಲ್ಲಿ ಕಾಂಗ್ರೆಸ್‌ ಗೆಲುವು: ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ 136 ಸ್ಥಾನ ಗಳಿಸಿ ಕಾಂಗ್ರೆಸ್‌ ಅ ಧಿಕಾರಕ್ಕೆ ಬರಲಿದೆ. ಈ ಸಮಾವೇಶದ ನಿರ್ಣಯಗಳಿಗೆ ಕಾಂಗ್ರೆಸ್‌ ಬದ್ಧವಾಗಿದೆ. ಬಿಜೆಪಿಯ ಸುಳ್ಳಿನ ಕಂತೆಗೆ ನೀವು ಬಲಿಯಾಗಬೇಡಿ. ಅವರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಹಿಮಾಚಲ ಪ್ರದೇಶ ಮೂಲದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಅವರ ರಾಜ್ಯದಲ್ಲೇ ಸೋಲಾಗಿದೆ. ಅಲ್ಲಿ ಸಲ್ಲದ ನಡ್ಡಾ ಇಲ್ಲಿ ಬಂದು ತಿರುಗಾಡುತ್ತಿದ್ದಾರೆ.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಸಮಾವೇಶದ 10 ನಿರ್ಣಯ
1. ನ್ಯಾ| ನಾಗಮೋಹನ್‌ದಾಸ್‌ ವರದಿಯನ್ನು ಒಪ್ಪಿ, ಅವರ ಶಿಫಾರಸಿನಂತೆ ಸಂವಿಧಾನದ 9ನೇ ಷಡ್ನೂಲ್‌ಗೆ ಸೇರಿಸಲು ಆಗ್ರಹಿಸಲಾಯಿತು.
2. ನ್ಯಾ| ಸದಾಶಿವ ಆಯೋಗದ ವರದಿಯನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲಿಯೇ ಮಂಡಿಸಿ ಎರಡೂ ಸದನಗಳ ಒಪ್ಪಿಗೆ ಪಡೆದು, ಪರಿಶಿಷ್ಟ ಜಾತಿ ಎಲ್ಲ ಜಾತಿಗಳ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ಸಿಗುವಂತೆ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಬದ್ಧ.
3. ಎಸ್‌ಸಿಪಿ ಟಿಎಸ್‌ಪಿ ಕಾಯ್ದೆಯ ಕಲಂ 7 ಡಿಗೆ ತಿದ್ದುಪಡಿ ತಂದು ಆ ವರ್ಷದ ಅನುದಾನವನ್ನು ಅದೇ ವರ್ಷ ಜನರ ಅಭಿವೃದ್ಧಿಗೆ ಸಂಪೂರ್ಣ ವೆಚ್ಚ ಮಾಡುವುದು ಹಾಗೂ ಕಾಲ್ಪನಿಕ ವೆಚ್ಚವನ್ನು ಶೇ.5ಕ್ಕೆ ಮಿತಗೊಳಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು.
4. ಪಿಟಿಸಿಎಲ್‌ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಎಸ್ಸಿ, ಎಸ್ಟಿ ಸಮುದಾಯಕ್ಕೆ ದರಕಾಸ್ತ್ ಮೂಲಕ ಸರಕಾರ ನೀಡಿರುವ ಜಮೀನುಗಳನ್ನು ಶಾಶ್ವತವಾಗಿ ಅವರಿಗೆ ಉಳಿಯುವಂತೆ ಕಾನೂನು ರಕ್ಷಣೆ ನೀಡಲಾಗುವುದು.
5. ರಾಜ್ಯದ ಸಾಮಾಜಿಕ, ಆರ್ಥಿಕ ಸಮೀಕ್ಷೆ ವರದಿ ಪ್ರಕಾರ ಎಸ್ಸಿ, ಎಸ್ಟಿ ವರ್ಗಗಳಿಗೆ ಕ್ರಮವಾಗಿ 2.54 ಹಾಗೂ 1.32 ಲಕ್ಷ ವಸತಿ ರಹಿತ ಕುಟುಂಬಗಳಿದ್ದು, ಐದು ವರ್ಷಗಳಲ್ಲಿ ಎಲ್ಲ ವಸತಿರಹಿತರಿಗೆ ಮನೆ ನಿರ್ಮಾಣಕ್ಕೆ ಕಾರ್ಯ ಯೋಜನೆ.
6.ಸಮೀಕ್ಷೆ ವರದಿ ಪ್ರಕಾರ ಲಕ್ಷಾಂತರ ಎಸ್ಸಿ,ಎಸ್ಟಿ ಕುಟುಂಬಗಳು ಭೂರಹಿತ ವಾಗಿವೆ. ಪ್ರತಿ ಕುಟುಂಬಕ್ಕೆ 2 ಎಕ್ರೆ ಒಣಭೂಮಿಯನ್ನು ನೀಡುವುದು, ಗಂಗಾ ಕಲ್ಯಾಣ ಯೋಜನೆ ನೀಡುವುದು.
7. ಪ್ರತಿ ವರ್ಷ ರಾಜ್ಯದ 10 ಸಾವಿರ ಎಸ್ಸಿ,ಎಸ್ಟಿ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಐರಾವತ ಯೋಜನೆಯಡಿ ಟ್ಯಾಕ್ಸಿ, ಗೂಡ್ಸ್‌ ಟ್ಯಾಕ್ಸಿ, ತ್ರಿಚಕ್ರ ಮತ್ತಿತರ ವಾಹನ ಖರೀದಿಸಲು ಧನ ಸಹಾಯ.
8. ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಮಂಜೂರಾಗಿರುವ ಹುದ್ದೆಗಳಲ್ಲಿ 2.54 ಲಕ್ಷ ಖಾಲಿ ಹುದ್ದೆಗಳಿವೆ. 5 ವರ್ಷಗಳಲ್ಲಿ ಬ್ಯಾಕ್‌ಲಾಗ್‌ ಸಹಿತ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ.
9. ಕೋವಿಡ್‌ ಮತ್ತಿತರ ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ರಾಜ್ಯದ ಅನೇಕ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಇವರಿಗಾಗಿ ಸಾವಿತ್ರಿಬಾಯಿ ಪುಲೆ ವಿದ್ಯಾ ಯೋಜನೆ ರೂಪಿಸಲಾಗುವುದು. ನಿರಂತರವಾಗಿ ಶಾಲೆಗೆ ಬರುವಂತೆ ಮಾಡಲು 1-5ನೇ ತರಗತಿವರೆಗೆ ಮಾಸಿಕ 150, 6-10ನೇ ತರಗತಿಯವರಿಗೆ 300 ರೂ. ಪ್ರೋತ್ಸಾಹ ಧನ ನೀಡಿ, ಮಕ್ಕಳ ತಾಯಂದಿರ ಖಾತೆಗೆ ಜಮೆ ಮಾಡಲಾಗುವುದು.
10. ಮಕ್ಕಳ ಭವಿಷ್ಯ ರೂಪಿಸುವ ಸಲುವಾಗಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ವಿದ್ಯಾರ್ಥಿ ವೇತನ ಯೋಜನೆ ರೂಪಿಸಿ ಎಲ್ಲ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪುನರಾರಂಭಿಸಲಾಗುವುದು. ರಾಜ್ಯವ್ಯಾಪಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯ ಒದಗಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next