ವಾಡಿ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುತ್ತೈದೆಯರಿಗೆ ಉಡಿತುಂಬಿ ಸತ್ಕರಿಸುವಂತೆ ಅನ್ನ ಬೆಳೆಯುವ ರೈತರನ್ನು ಮತ್ತು ಧರ್ಮ ಸಂಸ್ಕೃತಿ ಬೋಧಿ ಸುವ ಶರಣ, ಸಂತರನ್ನೂ ಗೌರವಿಸಿ ಎಂದು ನಾಲವಾರ ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಶ್ರೀ ಡಾ|ಸಿದ್ಧ ತೋಟೇಂದ್ರ ಮಹಾಸ್ವಾಮೀಜಿ ನುಡಿದರು.
ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವೀರಶೈವ ಲಿಂಗಾಯಿತ ಸಮಾಜ, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಶ್ರಾವಣ ಸಮಾರೋಪ ಸಮಾರಂಭ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ನಾವು ತಿನ್ನುವ ಅನ್ನದಲ್ಲಿ ರೈತರ ಬೆವರಿದೆ. ಅವರ ಶ್ರಮದಿಂದ ಉತ್ಪತ್ತಿಯಾದ ಆಹಾರಕ್ಕೆ ಬೆಲೆ ಕಟ್ಟಲಾಗದು. ಹವಾಮಾನದ ಏರಿಳಿತದ ಹೊಡೆತಕ್ಕೆ ಸಿಲಕಿ ಸಂಕಷ್ಟಗಳನ್ನು ಎದುರಿಸಿ ರೈತರು ಅನ್ನ ಬೆಳೆಯುತ್ತಾರೆ. ನಾವೆಲ್ಲರೂ ಸುಖವಾಗಿರಲು ಅನ್ನದಾತರು ಪ್ರಮುಖ ಕಾರಣರಾಗಿದ್ದಾರೆ. ಆದ್ದರಿಂದ ಅವರನ್ನು ಗೌರವಿಸುವ ಕಾರ್ಯ ಪ್ರತಿಯೊಂದು ವೇದಿಕೆಯಲ್ಲೂ ನಡೆಯಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ರಾವೂರ ಶ್ರೀಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿ ಕಾರಿ ಶ್ರೀಸಿದ್ದಲಿಂಗ ದೇವರು ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಮುತ್ತೈದೆಯರಿಗೆ ಉಡಿತುಂಬಿ ಆಶೀರ್ವದಿಸಿದರು.
ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೀರಣಗಿ, ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಡಾ|ಶಿವಾನಂದ ಇಂಗಳೇಶ್ವರ, ಮುಖಂಡರಾದ ಶಂಕ್ರಯ್ಯಸ್ವಾಮಿ ಮದ್ರಿ, ಅರವಿಂದ ಚವ್ಹಾಣ, ಅಣ್ಣಾರಾವ್ ಪಸಾರೆ, ಮಹಾದೇವ ಗಂವ್ಹಾರ, ಸದಾಶಿವ ಕಟ್ಟಿಮನಿ, ಸಂಗಣ್ಣ ಇಂಡಿ, ಪರುತಪ್ಪ ಕರದಳ್ಳಿ, ಚಂದ್ರಶೇಖರ ಗೋಳಾ, ಗುರುಮೂರ್ತಿ ಸ್ವಾಮಿ, ಶಿವಶಂಕರ ಕಾಶೆಟ್ಟಿ, ವೀರಣ್ಣ ಯಾರಿ, ಚಂದ್ರಶೇಖರ ಹಾವೇರಿ, ರಾಜಶೇಖರ ಧೂಪದ, ರಾಹುಲ್ ಸಿಂಧಗಿ ಹಾಗೂ ಸಾವಿರಾರು ಪಾಲ್ಗೊಂಡಿದ್ದರು. ಸಿದ್ಧಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿ, ವಂದಿಸಿದರು. ದೇವಸ್ಥಾನದಲ್ಲಿ ಶಿವಲಿಂಗಕ್ಕೆ ವಿಶೇಷ ಅಭಿಷೇಕ ನಡೆಯಿತು. ಕಲಬುರಗಿಯ ಪ್ರಶಾಂತ ಬ್ರಿಜೇಶಪುರ ಕುಟುಂಬಸ್ಥರಿಂದ ಅನ್ನದಾಸೋಹ ನಡೆಯಿತು.