Advertisement

ಸಂಪತ್ತು ಸರ್ವರಿಗೂ ಸೇರಬೇಕು

12:23 PM Mar 12, 2018 | Team Udayavani |

ಬೆಂಗಳೂರು: “ಜಾತಿ, ಧರ್ಮ ಮತ್ತು ಮತ ತಾರತಮ್ಯವವಿಲ್ಲದೆ ದೇಶದ ಸಂಪತ್ತು ಮತ್ತು ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಹೀಗಾಗಿ ಕೆಲವರು ಪದೇ ಪದೆ ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತಾರೆ,” ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಭಾನುವಾರ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಕಾರು, ಟ್ಯಾಕ್ಸಿ, ಗೂಡ್ಸ್‌ ವಾಹನ ಖರೀದಿ ಸಹಾಯಧನ ಯೋಜನೆ ಫ‌ಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.

ಸಂವಿಧಾನದ ಆಶಯದಂತೆ ದೇಶದ ಸಂಪತ್ತು ಮತ್ತು ಅಧಿಕಾರವನ್ನು ಜಾತಿ, ಧರ್ಮ ಮತ್ತು ಮತ ತಾರತಮ್ಯ ಇಲ್ಲದೇ ಹಂಚಿಕೆ ಮಾಡುವುದು ಪ್ರತಿ ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಹೀಗಾಗಿಯೇ ಕೆಲವರು ಸಂವಿಧಾನ ತಿದ್ದುಪಡಿಯ ಮಾತನಾಡುತ್ತಾರೆ. ಅವರಿಗೆ ಸಮಾನತೆ ಬೇಕಾಗಿಲ್ಲ ಎಂದರು.

ಅನಕ್ಷರತೆ, ನಿರುದ್ಯೋಗ ಮತ್ತು ಬಡತನ ಇದ್ದಲ್ಲಿ ಕಂದಾಚಾರಗಳನ್ನು ಬಿತ್ತಿ, ಮೂಢನಂಬಿಕೆ ಬೆಳೆಸಿ ಜನರನ್ನು ಶೋಷಣೆ ಮಾಡುತ್ತಾರೆ. ಎಲ್ಲರೂ ಆರ್ಥಿಕ ಸ್ವಾವಲಂಬಿಗಳಾದಾಗ ಶೋಷಣೆ ತಪ್ಪಿಸಲು ಸಾಧ್ಯ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಡೋಂಗಿ ಮಾತನಾಡಿದರೆ ಸಮಾನತೆ ಬರುವುದಿಲ್ಲ. ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.

500 ವಾಹನ ವಿತರಣೆ: 2017-18ರ ಆಯವ್ಯಯದಲ್ಲಿ ಘೋಷಿಸಿದಂತೆ ಅಲ್ಪಸಂಖ್ಯಾತರ ನಿಗಮದಿಂದ ಆ ಸಮುದಾಯಗಳ ನಿರುದ್ಯೋಗಿಗಳಿಗೆ 500 ವಾಹನಗಳನ್ನು ತಲಾ 3 ಲಕ್ಷ ಸಬ್ಸಿಡಿಯೊಂದಿಗೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರು ಮತ್ತು ರಾಮನಗರ ಭಾಗಕ್ಕೆ 100 ವಾಹನ ವಿತರಣೆ ಮಾಡಲಿದ್ದೇವೆ. ಅಲ್ಪಸಂಖ್ಯಾತರಲ್ಲಿ ಶಿಕ್ಷಣ ಸ್ವಲ್ಪ ಕಡಿಮೆ. ಆದರೆ, ಮೆಕಾನಿಕ್‌ ಹಾಗೂ ಚಾಲನೆ ವೃತ್ತಿಯಲ್ಲಿ ಪ್ರವೀಣರಾಗಿರುತ್ತಾರೆ. ಈ ಯೋಜನೆಯಿಂದ 500 ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

Advertisement

ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್‌  ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ವಾಹನಗಳನ್ನು ಸಬ್ಸಿಡಿ ದರದಲ್ಲಿ ನೀಡುವ ಯೋಜನೆಗೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ. ಕ್ರಿಶ್ಚಿಯನ್‌ ಅಭಿವೃದ್ಧಿ ನಿಮಗದ ಮೂಲಕ ಇನ್ನಷ್ಟು ವಾಹನಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಸಚಿವರಾದ ಎಚ್‌.ಎಂ.ರೇವಣ್ಣ, ರೋಷನ್‌ ಬೇಗ್‌, ವಿಧಾನ ಪರಿಷತ್‌ ಸದಸ್ಯರಾದ ರಿಜ್ವಾನ್‌ ಹರ್ಷದ್‌, ಸಲೀಂ ಅಹ್ಮದ್‌ , ಶಾಸಕ ಜಮೀರ್‌ ಅಹಮ್ಮದ್‌, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮ್ಮದ್‌ ಮೊಹಿಸಿನ್‌, ವ್ಯವಸ್ಥಾಪಕ ನಿರ್ದೇಶಕ ಇಸ್ಲಾವುದ್ದೀನ್‌ ಜೆ.ಗದ್ಯಾಳ್‌, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫ‌ೂರ್‌ ಮೊದಲಾದವರು ಉಪಸ್ಥಿತರಿದ್ದರು.

ಸಮೂಹ ಸಾರಿಗೆ ಆದ್ಯತೆ: ಕಾರ್ಯಕ್ರಮಕ್ಕೆ ಎಲೆಕ್ಟ್ರಿಕ್‌ ಮೊಬಿಲಿಟಿ ಆಟೋ ರಿಕ್ಷಾದಲ್ಲಿ ಆಗಮಿಸಿದ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ, ಪ್ರತಿ ತಿಂಗಳ 2ನೇ ಭಾನುವಾರ ಬಸ್‌ ಡೇ ಆಚರಿಸುತ್ತಿದ್ದೇವೆ. ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಬೆಂಗಳೂರು ವಾಯುಮಾಲಿನ್ಯದಲ್ಲಿ 6ನೇ ಸ್ಥಾನದಲ್ಲಿದೆ. 50 ಲಕ್ಷ ಖಾಸಗಿ ವಾಹನಗಳು ಸೇರಿ 78 ಲಕ್ಷ ವಾಹನಗಳು ನಿತ್ಯ ನಗರದಲ್ಲಿ ಸಂಚರಿಸುತ್ತವೆ. ವಾಯುಮಾಲಿನ್ಯ ಹೆಚ್ಚಾದಂತೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಹೀಗಾಗಿಯೇ ಸಮೂಹ ಸಾರಿಗೆಗೆ ಉತ್ತೇಜನ ನೀಡುತ್ತಿದ್ದು, 45 ಎಲೆಕ್ಟ್ರಿಕ್‌ ಬಸ್‌ಗಳು ಶೀಘ್ರವೇ ರಸ್ತೆಗಿಳಿಯಲಿವೆ. ಹೆಚ್ಚುವರಿ 45 ಬಸ್‌ಗಳ ಖರೀದಿಗೆ ಈಗಾಗಲೇ ಪರವಾನಗಿ ಸಿಕ್ಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next