Advertisement

ಭೈರವನದುರ್ಗ ಬೆಟ್ಟದಲ್ಲಿ ನಿಧಿ ಶೋಧ

05:13 PM Dec 09, 2019 | Suhan S |

ಕುದೂರು: ಐತಿಹಾಸಿಕ ಪ್ರಸಿದ್ಧ ಕುದೂರು ಭೈರವನ ದುರ್ಗ ಬೆಟ್ಟದಲ್ಲಿ ಕಿಡಿಗೇಡಿಗಳು ಶನಿವಾರ ರಾತ್ರಿ ನಿಧಿ ಶೋಧನೆ ನಡೆಸಿದ ಶಂಕೆ ವ್ಯಕ್ತವಾಗಿದೆ. ಭೈರವನದುರ್ಗ ಬೆಟ್ಟ ಹತ್ತುವ ದಾರಿಯಲ್ಲಿ ಸಿಗುವ ಆಂಜನೇಯ ಸ್ವಾಮಿ ಮೂರ್ತಿಯನ್ನು ದೊಡ್ಡದಾದ ಬಂಡೆಯಲ್ಲಿ ಕೆತ್ತಲಾಗಿದೆ. ಆಂಜನೇಯ ಸ್ವಾಮಿಯ ಮುಂದೆ ಇರುವ ನಾಲ್ಕು ಕಾಲಿನ ಕಲ್ಲಿನ ಮಂಟಪಗಳನ್ನು ಕೆಡವಿ,ಅದರ ಮುಂದೆ ನಿಧಿ ಶೋಧನೆ ಮಾಡಲಾಗಿದೆ.

Advertisement

ಕುದೂರು ಗ್ರಾಮದ ಭಗತ್‌ಸಿಂಗ್‌ ಕರಾಟೆ ತಂಡವು ವಾರದಲ್ಲಿ ಒಂದು ದಿನ ಭೈರವನದುರ್ಗ ಬೆಟ್ಟ ಹತ್ತಿ ಅಭ್ಯಾಸಕ್ಕೆ ನಡೆಸುತ್ತಾರೆ. ಎಂದಿನಂತೆ ಇಂದು ಕೂಡ ಅಭ್ಯಾಸಕ್ಕೆ ತೆರಳಿದಾಗ ಶಿಕ್ಷಕ ರಮೇಶ್‌ ಆಂಜನೇಯನ ಬಳಿ ಗುಂಡಿ ತೊಡಿರುವುದನ್ನು ಗಮನಿಸಿದ್ದಾರೆ. ನಂತರ ಆಂಜನೇಯ ಮೂರ್ತಿ ಬಳಿ ತೆರಳಿ ನೋಡಿದಾಗ ಕಿಡಿಗೇಡಿಗಳು ದೇವರ ವಿಗ್ರಹದ ಕೆಳಗೆ ಸುಮಾರು 10 ಅಡಿ ಆಳದವರೆಗೂ ಅಗೆದಿದ್ದಾರೆ.ಅಲ್ಲದೇ ದೇವಾಲಯ ಮಂಟಪದ ಕಲ್ಲುಗಳನ್ನು ಕೂಡ ಹಾನಿ ಮಾಡಿದ್ದಾರೆ ಎಂದು ರಮೇಶ್‌ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಗಂ.  ದಯಾನಂದ್‌ ಸುದ್ದಿಗಾರರಿಗೆ ಭೈರವನದುರ್ಗ ಬೆಟ್ಟದ ಬಗ್ಗೆ ಮಾಹಿತಿ ನೀಡಿ, ಕೆಂಪೇಗೌಡರ ಕಾಲದಲ್ಲಿ ಭೈರವನ  ದುರ್ಗದ ಬೆಟ್ಟದಲ್ಲಿ ಆಡಳಿತ ನೆಡೆಸಲಾಗುತ್ತಿತ್ತು. ಭೈರವನ ದುರ್ಗದ ಬೆಟ್ಟದಲ್ಲಿ ಕುದುರೆಗಳಿಗೆ ಲಾಳ ಕಟ್ಟುತ್ತಿದ್ದರು, ಅದರಿಂದ ಗ್ರಾಮಕ್ಕೆ ತುರಗಪುರಿ ಎಂದು ಹೆಸರಿತ್ತು. ನಂತರದ ದಿನಗಳಲ್ಲಿ ಕುದೂರು ಎಂದು ಹೆಸರಾಯಿತು ಎಂದು ತಿಳಿಸಿದರು.

ಬೆಟ್ಟದ ಮಧ್ಯ ಭಾಗದಲ್ಲಿರುವ ದೊಡ್ಡ ಬಂಡೆಯಲ್ಲಿ ಆಂಜನೇಯನ ಮೂರ್ತಿ ಕೆತ್ತಲಾಗಿದೆ. ಇಂತಹ ದೊಡ್ಡ ಬಂಡೆಯ ಕೆಳಗೆ ಕೀಡಿಗೇಡಿಗಳು ನಿಧಿ ಆಸೆಗಾಗಿ ಗುಂಡಿ ತೋಡಿ ಅದರ ಸ್ವರೂಪವನ್ನೇ ಹಾಳು ಗೆಡವಿದ್ದಾರೆ. ಇಲ್ಲಿರುವ ಮರಗಳನ್ನು ಸಹ ಕಡಿದು ಸಾಗಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕುದೂರು ಭೈರವನ  ದುರ್ಗ ಬೆಟ್ಟದಲ್ಲಿ ನೆಡೆಯುತ್ತಿರುವ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಅಗ್ರಹಿಸಿದರು.

ಮಾಗಡಿ ತಾಲೂಕಿನಲ್ಲಿ ಎಗ್ಗಿಲ್ಲದೆ ನಿಧಿ ಶೋಧನೆ ಮಾಡಲಾಗುತ್ತಿದ್ದು, ಪುರಾಣ ಪ್ರಸಿದ್ಧ ಹಳೇ ದೇವಾ ಸ್ಥಾನದ ಅಕ್ಕ ಪಕ್ಕದಲ್ಲಿ ನಿಧಿ ಶೋಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಸಾವನದುರ್ಗದ ಬೆಟ್ಟದ ಮೇಲೆ ಮೇಲಿರುವ ಬಸವಣ್ಣ ಗೋಪುರದ ಕೆಳಗೆ ನಿಧಿ ಶೋಧನೆ ಮಾಡಲಾಗಿದೆ, ಅದೇ ರೀತಿ ಹಲಸಬೆಲೆ ಬೆಲೆ ಸಮೀಪದ ಬಸವನಗುಡಿ ಪಾಳ್ಯದ ಬಸವಣ್ಣ ದೇವಾಸ್ಥಾನದ ವಿಗ್ರಹವನ್ನೇ ಹೊಡೆದು ಹಾಕಿ ದೇವಾಲಯದ ಮುಂಭಾಗವೇ ನಿಧಿ ಶೋಧನೆ ನೆಡೆಸಿದ್ದಾರೆ. ಪೋಲಿಸರು ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಯಿಸಿ ನಿಧಿ ಕಳ್ಳರನ್ನು ಪತ್ತೆ ಹಚ್ಚ  ಬೇಕು. ಇಲ್ಲವಾದರೆ ನಿಧಿ ಆಸೆಗೆ ಪುರಾತನವಾದ ವಿಗ್ರಹಗಳು ಹಾನಿಗೊಳಗಾಗುವ ಭೀತಿ ಇದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next