Advertisement

ದೇಶದ್ರೋಹ-ಭಯೋತ್ಪಾದಕತೆ ದೇಶ ಬಿಟ್ಟು ತೊಲಗಲಿ

03:20 PM Aug 14, 2017 | Team Udayavani |

ದಾವಣಗೆರೆ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡದೆ ಅಧಿಕಾರದಲ್ಲಿ ಇರುವರು ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಿಪಿಐ(ಎಂ)
ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ್‌ ಲೇವಡಿ ಮಾಡಿದ್ದಾರೆ.

Advertisement

ಕ್ವಿಟ್‌ ಇಂಡಿಯಾ ಚಳವಳಿಯ 75, ಸ್ವಾತಂತ್ರ್ಯ ದಿನದ 70ನೇ ವರ್ಷದ ಅಂಗವಾಗಿ ಭಾರತ ಕಮ್ಯುನಿಸ್ಟ್‌ ಪಕ್ಷ(ಮಾರ್ಕ್ಸ್ವಾದಿ) ಭಾನುವಾರ ಏರ್ಪಡಿಸಿದ್ದ ಜಿ.ಎನ್‌. ನಾಗರಾಜ್‌ರವರ ತೊಲಗು ತೊಲಗಾಚೆ ಪರದೇಶಿ ಸುಲಿಗೆಗಾರ… ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡದೇ ಇದ್ದವರು ಇಂದು ಒಂದೇ ಉಡುಪು, ಭಾಷೆ, ಆಹಾರದ ಹೆಸರಲ್ಲಿ ದೇಶಪ್ರೇಮದ ಬಗ್ಗೆ
ಮಾತನಾಡುತ್ತಾರೆ. ಒಂದು ದೇಶ ಒಂದೇ ತೆರಿಗೆ ಎನ್ನುವರು ರೈತರ ಬೆಳೆಗಳಿಗೆ ಒಂದೇ ಬೆಲೆ, ಎಲ್ಲಾ ಕಾರ್ಮಿಕರಿಗೆ ಒಂದೇ ವೇತನ ಯಾಕೆ ಜಾರಿ ಮಾಡಲಿಕ್ಕಾಗದು ಎಂದು ಪ್ರಶ್ನಿಸಿದರು.

500, 1 ಸಾವಿರ ರೂಪಾಯಿ ನೋಟು ಅಮಾನ್ಯ ಮಾಡಿರುವುದೇ ದೇಶಪ್ರೇಮ ಎಂದುಕೊಂಡಿರುವರು ಅದೇ ನೋಟು ಅಮಾನ್ಯದಿಂದ ಮದುವೆ ನಿಂತಿರುವ, ಮನೆ ಕಟ್ಟಲಿಕ್ಕಾಗದೇ ಇರುವುದು, ರೈತರು, ಕಾರ್ಮಿಕರು ಅನುಭವಿಸಿದ ಸಂಕಷ್ಟದ ಬಗ್ಗೆ ಯೋಚಿಸುವುದೇ ಇಲ್ಲ. ಎಂದಿಗೂ ದನ ಕಾಯದೇ ಇರುವರು ಜಾನುವಾರು ಮಾರಾಟ ಮತ್ತು ನಿಷೇಧ ಕಾಯ್ದೆ ಮೂಲಕ ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ದೂರಿದರು.

ದೇಶದ ಪ್ರತಿಯೊಬ್ಬರು ಒಳ್ಳೆಯ ಶಿಕ್ಷಣ, ಉದ್ಯೋಗ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂಬ ಮಹತ್ತರ ಕನಸಿಗಾಗಿ ಜಾತಿ, ವರ್ಗ, ಧರ್ಮ ಯಾವುದೇ ಭೇದ ಇಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದರು. ಆದರೆ, ಈ ಕ್ಷಣಕ್ಕೂ ಆ ಮಹಾನೀಯರ ಕನಸು ಈಡೇರಿಲ್ಲ. ಈಚೆಗೆ ಸರ್ಕಾರಗಳು ಜಾರಿಗೊಳಿಸಿರುವ ಕಾರ್ಪೋರೇಟ್‌ ಪರ ನೀತಿಯಿಂದ ಈವರೆಗೆ 2.50 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದ ಶೇ. 58 ರಷ್ಟು ಆಸ್ತಿಯು ಶೇ. 1 ರಷ್ಟು ಜನರ ಕೈಯಲ್ಲಿ ಇದೆ ಎಂದು ತಿಳಿಸಿದರು. 

ಯಾವ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದು 75 ವರ್ಷಗಳ ಹಿಂದೆ ಚಳವಳಿ ನಡೆಸಲಾಗಿತ್ತು. ಈಗ ಕ್ವಿಟ್‌ ಇಂಡಿಯಾ ಬದಲಿಗೆ ವೆಲ್‌ಕಂ ಇಂಡಿಯಾ… ಎಂದು ವಿದೇಶಿ ಬಂಡವಾಳಗಾರರನ್ನು ಆಹ್ವಾನಿಸಲಾಗುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ಮುಂದಿನ ದಿನಗಳು ಗಂಭೀರವಾಗಲಿವೆ ಎಂದು ಎಚ್ಚರಿಸಿದರು.

Advertisement

ಕೋಮುವಾದದ ಮೂಲಕ ಜನರನ್ನು ವಿಭಜನೆ ಮಾಡುವ ದೇಶದ್ರೋಹ, ಭಯೋತ್ಪಾದಕತೆ, ಹಣ ಸುಲಿಗೆ ಮಾಡುವ  ಖಾಸಗಿ ಶಿಕ್ಷಣ ಸಂಸ್ಥೆಗಳು ಈ ದೇಶ ಬಿಟ್ಟು ತೊಲಗಬೇಕು. ಜಾತಿ, ವರ್ಗದ ಹೆಸರಲ್ಲಿ ದೇಶದ ವಿಘಟನೆಯನ್ನು ಬಲವಾಗಿ ವಿರೋಧಿಸುವ ಮೂಲಕ ಐಕ್ಯ ಭಾರತ…ನಿರ್ಮಾಣ
ಮಾಡಬೇಕು. ಅದು ಈಗಿನ ಅನಿವಾರ್ಯತೆ ಮತ್ತು ಅವಶ್ಯಕತೆ ಎಂದು ತಿಳಿಸಿದರು. ಕೃತಿ ಬಿಡುಗಡೆಗೊಳಿಸಿದ ವಿರಕ್ತ ಮಠದ
ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ದೇಶದ ಸ್ವಾತಂತ್ರ್ಯ ನಂತರ ಭ್ರಷ್ಟಾಚಾರ ಅಸಮಾನತೆ, ಮೌಡ್ಯತೆ ಎಂಬ ಗಂಭೀರ ಸಮಸ್ಯೆ ದೇಶವನ್ನು ಕಾಡುತ್ತಿವೆ. ಎಲ್ಲೇ ಹೋದರೂ ಹಣ ಪೀಕಲಾಗುತ್ತದೆ. ಕೋಟ್ಯಾಂತರ ಮೊತ್ತದ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮೋಸ ಮಾಡದೇ ಇರುವುದು ಸಹ ನಿಜವಾದ ದೇಶ ಮತ್ತು ದೇವರ ಸೇವೆ. ಹಾಗಾಗಿ ಯಾರೂ ಕೂಡಾ ಮೋಸ ಮಾಡಬಾರದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ಅಹಿಂಸಾ ಮಾರ್ಗದಲ್ಲಿ ದೇಶದ ಸ್ವಾತಂತ್ರ್ಯ ಪಡೆದ ನಂತರ ದೇಶದ ವಿಘಟನೆ, ಗಾಂಧೀಜಿಯವರ ಹತ್ಯೆಯಂತಹ ಹಿಂಸಾಚಾರಗಳು ನಡೆದವು. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದಂತಹವ ಒಂದು ಕನಸು ಈಡೇರಿಲ್ಲ. ಮೋದಿ ನೇತೃತ್ವದ ಸರ್ಕಾರ ವಿದೇಶಿ ಬಂಡವಾಳಶಾಹಿಗಳನ್ನ ಸ್ವಾಗತಿಸುತ್ತಿದೆ. ಕಾರ್ಪೋರೇಟ್‌ ಸಂಸ್ಥೆಗಳು ತಮ್ಮವರ ಮೂಲಕ ಸರ್ಕಾರ ನಡೆಸುತ್ತಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಮ್ಮವರ ಕಡಿಮೆ ಆಗುತ್ತಿದೆ ಎಂದರು.

ಸಿಐಟಿಯು ಜಿಲ್ಲಾ ಗೌರವ ಅಧ್ಯಕ್ಷ ಕೆ.ಎಲ್‌. ಭಟ್‌ ಅಧ್ಯಕ್ಷತೆ ವಹಿಸಿದ್ದರು. ಟಿ.ವಿ. ರೇಣುಕಮ, ಬಿ. ವೀರಣ್ಣ ಇತರರು ಇದ್ದರು. ಇ. ಶ್ರೀನಿವಾಸ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next