ನವದೆಹಲಿ: ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ 11ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ (ಮೇ 06) ತಿಳಿಸಿದೆ.
ಇದನ್ನೂ ಓದಿ:ತೆಲಂಗಾಣದ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಎಷ್ಟು ಬಾರಿ ಧ್ವನಿ ಎತ್ತಿದ್ದೀರಿ: ರಾಹುಲ್ ಗೆ TRS
ಕಳೆದ 137 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರೂ ಕೂಡಾ ಈವರೆಗೂ ಮಧ್ಯಂತರ ಜಾಮೀನು ಕುರಿತು ಆದೇಶ ವಿಳಂಬವಾಗಿರುವುದಕ್ಕೆ ಇದೊಂದು “ ನ್ಯಾಯದ ಅವಹೇಳನ” ಎಂದು ಸುಪ್ರೀಂಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಅಜಂ ಖಾನ್ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಗುರುವಾರ (ಮೇ 05) ಕಾಯ್ದಿರಿಸಿರುವುದಾಗಿ ಖಾನ್ ಪರ ವಕೀಲರು ಜಸ್ಟೀಸ್ ಎಲ್ ನಾಗೇಶ್ವರ್ ರಾವ್ ನೇತೃತ್ವದ ಪೀಠಕ್ಕೆ ತಿಳಿಸಿದ್ದಾರೆ.
“ಅಜಂ ಖಾನ್ ವಿರುದ್ಧ ದಾಖಲಾಗಿರುವ 87 ಪ್ರಕರಣಗಳ ಪೈಕಿ 86 ಪ್ರಕರಣಗಳಿಗೆ ಜಾಮೀನು ದೊರಕಿದೆ. ಈ ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ 11ರಂದು ನಡೆಸುತ್ತೇವೆ. 86 ಪ್ರಕರಣಗಳಲ್ಲಿ ಅಜಂ ಖಾನ್ ಜಾಮೀನು ಪಡೆದಿದ್ದು, ಕೇವಲ ಒಂದು ಪ್ರಕರಣದ ಜಾಮೀನು ಇಷ್ಟು ವಿಳಂಬವಾಗಿರುವುದು ನ್ಯಾಯದ ಅವಹೇಳನವಾದಂತೆ. ಈ ಕುರಿತು ನಾವು ಹೆಚ್ಚಾಗಿ ಏನನ್ನೂ ಹೇಳಬಯಸುವುದಿಲ್ಲ. ಮೇ 11ರಂದು ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ಜಸ್ಟೀಸ್ ಎಲ್ ನಾಗೇಶ್ವರ್ ರಾವ್ ಮತ್ತು ಜಸ್ಟೀಸ್ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂಕೋರ್ಟ್ ಪೀಠ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಅಜಂ ಖಾನ್ ವಿರುದ್ಧ 87 ಪ್ರಕರಣಗಳು ದಾಖಲಾಗಿದ್ದು, ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ಅರ್ಜಿ ಬಾಕಿ ಉಳಿದಿತ್ತು. ಹಲವಾರು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ 2020ರ ಫೆಬ್ರುವರಿಯಿಂದ ಅಜಂ ಖಾನ್ ಸೀತಾಪುರ್ ಜೈಲಿನಲ್ಲಿದ್ದಾರೆ. ಅಜಂ ಖಾನ್ ವಿರುದ್ಧ ಭೂ ಕಬಳಿಕೆ ಹಾಗೂ ಸಾರ್ವಜನಿಕ ಆಸ್ತಿ ನಷ್ಟ ಮಾಡಿದ ಆರೋಪದಡಿ ರಾಂಪುರ್ ನ ಅಜೀಮ್ ನಗರ್ ಪೊಲೀಸ್ ಠಾಣೆಯಲ್ಲಿ ಹಲವಾರು ದೂರು ದಾಖಲಾಗಿತ್ತು.