ಬಾಗಲಕೋಟೆ: ಗ್ರಾಮೀಣ ಭಾಗದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಳ ಹಾಗೂ ಅವರ ಕಲಿಕಾ ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯದ ವಿವಿಧ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.
ತಾಲೂಕಿನ ಶೀಗಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕ್ರೀಡೆ, ಪಠ್ಯೇತರ ವಿಷಯಗಳನ್ನು ಒಳಗೊಂಡಂತೆ ಪ್ರವಾಸಗಳ ಅನುಭವ ಪಡೆಯುವಂತಾಗಲು ಗತಕಾಲದ ವೈಭವ ಸಾರುವ ಹಂಪಿಯ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಶೀಗಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಒಂದು ದಿನದ ಪ್ರವಾಸ ಕಲ್ಪಿಸಲಾಗುವುದು ತಿಳಿಸಿದರು.
ಮಕ್ಕಳ ಬೇಡಿಕೆಗೆ ಅನುಗುಣವಾಗಿ ಅವರ ಆಸೆ-ಆಕಾಂಕ್ಷೆ ತಿಳಿದುಕೊಂಡು ರಜಾ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಬಾಲ ಭವನ ಯೋಜನೆಯಡಿ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು, ಈ ಶಿಬಿರದಲ್ಲಿ ಚಿತ್ರಕಲೆ, ಮೆಹಂದಿ, ಯೋಗ, ಕರಾಟೆ, ವಿಜ್ಞಾನ, ಸಮೂಹ ನೃತ್ಯ, ಹೊರಾಂಗಣ ಮತ್ತು ಒಳಾಂಗಣ ಆಟಗಳ ಜೊತೆಗೆ ಒಂದು ದಿನದ ಪ್ರವಾಸವು ಸಹ ಹಮ್ಮಿಕೊಳ್ಳುವುದಾಗಿ ಮಾನಕರ ತಿಳಿಸಿದರು.
ಪ್ರತಿ ವರ್ಷ ಬೇಸಿಗೆ ಶಿಬಿರವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಮಾತ್ರ ಹಮ್ಮಿಕೊಳ್ಳಲಾಗುತ್ತಿದ್ದು, ಈ ವರ್ಷ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಲ್ಲಿರುವ ಶಾಲೆಯ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ಆಯಾ ತಾಲೂಕಾ ಮಟ್ಟದಲ್ಲಿಯೂ ಸಹ ಒಂದು ಗ್ರಾಮ ಆಯ್ಕೆ ಮಾಡಿಕೊಂಡು ಆ ಗ್ರಾಮದ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ತರಬೇತಿ ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರನ್ನೇ ಬಳಸಲಾಗುತ್ತಿತ್ತು, ಆದರೆ ಈ ಬಾರಿ ನಿರುದ್ಯೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇಸಿಗೆ ಶಿಬಿರ ತರಬೇತಿಗೆ ನಿರುದ್ಯೋಗ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಜಯಮಾಲಾ ದೊಡಮನಿ ಮಾತನಾಡಿ, ಜಿಪಂ ಸಿಇಒ ಅವರ ಮಾರ್ಗದರ್ಶನದಂತೆ ಜಿಲ್ಲಾ ಬಾಲಭವನ ಯೋಜನೆಯಡಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಬಿರ ನಡೆಸಲಾಗಿದೆ. ತಾಲೂಕಿನ ಶಿಗಿಕೇರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮೇ 19ರಿಂದ ಜೂ. 2ವರೆಗೆ ಶಿಬಿರ ನಡೆಸಿದ್ದು, ಮುಂದೆಯೂ ಕೂಡಾ ಶಾಲಾ ಅವಧಿಯ ನಂತರ ಗ್ರಾಮೀಣ ಭಾಗದ ಕಲೆಗಳಿಗೆ ಪ್ರೋತ್ಸಾಹಿಸಲಾಗುವುದು ಎಂದರು.
ಮುಖ್ಯಾಧ್ಯಾಪಕಿ ಆರ್.ಜಿ. ಮುಲ್ಲಾ ಮಾತನಾಡಿ, ನಮ್ಮ ಶಾಲೆಯ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು, ಸಂತೋಷ ತಂದಿದೆ. ಇದೇ ರೀತಿ ಬೇರೆ ಬೇರೆ ಶಾಲೆಯ ಮಕ್ಕಳಿಗೂ ಈ ಶಿಬಿರದ ಸದುಪಯೋಗವಾಗುವಂತಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರಿವೀಕ್ಷಣಾಧಿಕಾರಿ ಎಸ್.ಎನ್. ಕೋರವಾರ, ಅಕ್ಷರ ದಾಸೋಹ ಅಧಿಕಾರಿ ಎನ್.ಬಿ. ಗೊರವರ ಉಪಸ್ಥಿತರಿದ್ದರು. ನಂತರ ಜಿಪಂ ಸಿಇಒ ಗಂಗೂಬಾಯಿ ಮಾನಕರ ಶಾಲಾ ಮಕ್ಕಳ ಹಾಗೂ ಶಿಕ್ಷಕರ ಹಾಜರಾತಿ ಪರಿಶೀಲಿಸಿದರು. ಬಿಸಿ ಊಟದ ಕೋಣೆಗೆ ಭೇಟಿ ನೀಡಿ ಮಕ್ಕಳಿಗೆ ಉತ್ತಮ ಆಹಾರ ಪೂರೈಸಬೇಕು. ಸ್ವಚ್ಚತೆಗೆ ಹೆಚ್ಚು ಒತ್ತು ನೀಡುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು. ನಂತರ ಮಕ್ಕಳೊಂದಿಗೆ ಬಿಸಿಯೂಟ ಸವಿದರು.