Advertisement

ನರ್ಸರಿ ಯಾತ್ರೆ

10:21 AM Mar 17, 2020 | mahesh |

ಒಂದು ಕಾಲಕ್ಕೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಕೃಷಿಯನ್ನೂ ಒಳಗೊಂಡಂತೆ. ಅದಕ್ಕೆ ಉದಾಹರಣೆ ನಾಗರತ್ನ. ಅವರು ಶುರು ಮಾಡಿರುವ ನರ್ಸರಿ ಈಗ ಉದ್ಯಮವಾಗಿ ಬೆಳೆದು ನಿಂತಿದೆ. ಕೊಪ್ಪಳ ಜಿಲ್ಲೆಯ, ಗಂಗಾವತಿ ತಾಲೂಕಿನ ಬೂದಗುಂಪ ಗ್ರಾಮದಲ್ಲಿ ಪತಿ ಮತ್ತು ಮೂರು ಮಕ್ಕಳೊಂದಿಗೆ ವಾಸವಿರುವ ನಾಗರತ್ನ ಅವರು ಓದಿರುವುದು ಕೇವಲ ಹತ್ತನೇ ತರಗತಿಯಾದರೂ, ಕೃಷಿ ಬಗ್ಗೆ ಅವರಿಗಿರುವ ಜ್ಞಾನ ಮಾತ್ರ ಅಪಾರವಾದದ್ದು.

Advertisement

ನರ್ಸರಿ ಬೆಳೆದು ಬಂದ ರೀತಿ
ಕೆಲವು ವರ್ಷಗಳ ಕಾಲ ಇತರರ ನರ್ಸರಿಗಳಲ್ಲಿ ಕೆಲಸ ಮಾಡಿದ ಅನುಭವ ನಾಗರತ್ಮ ಅವರ ಬೆನ್ನಿಗಿತ್ತು. ಅದರ ಬಲದಿಂದಲೇ ಸ್ವಂತ ನರ್ಸರಿ ಶುರುಮಾಡುವ ಧೈರ್ಯ ತೋರಿದರು. ಮೊದಲು ಒಂದು ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ನೆಲವನ್ನು ಸಮತಟ್ಟಾಗಿಸಿದರು. ಉಷ್ಣಾಂಶದ ನಿಯಂತ್ರಣಕ್ಕೆ, ಮೇಲೆ ಕಪ್ಪು ಬಣ್ಣದ ಪ್ಲಾಸ್ಟಿಕ್‌ ಹೊದಿಕೆಯನ್ನು ಅಳವಡಿಸಿದರು. ನಂತರ ಸುತ್ತಲೂ ವೈರಸ್‌ ನಿಯಂತ್ರಣಕ್ಕಾಗಿ ಹಸಿರು ಬಣ್ಣದ ನೆಟ್‌ ಅಳವಡಿಸಿ, ಸಸಿ ಬೆಳೆಸುವ ಟ್ರೇಗಳಲ್ಲಿ ಮಣ್ಣಿನ ಜೊತೆಗೆ ನೀರನ್ನು ಹೆಚ್ಚು ಹಿಡಿದಿಟ್ಟುಕೊಳ್ಳುವಂಥ ಕೊಕೊ ಪೀಟ್‌ (ಕೊಳೆತ ತೆಂಗಿನ ನಾರು) ಬಳಸಿ ಸಸಿಗಳನ್ನು ಬೆಳೆಸುತ್ತಾ ಬಂದರು. ಹೀಗೆ, ನರ್ಸರಿಗೆ ಬೇಕಾದ ಎಲ್ಲಾ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಗ್ರೀನ್‌ ಹೌಸ್‌ ನರ್ಸರಿಗೆ ಚಾಲನೆ ನೀಡಿದರು. ಆರಂಭದಲ್ಲಿ ಒಂದು ಎಕರೆಯಿಂದ ಪ್ರಾರಂಭವಾದ ಇವರ ನರ್ಸರಿ, ಸದ್ಯಕ್ಕೆ ಎರಡು ಎಕರೆಗೆ ವಿಸ್ತರಣೆಗೊಂಡಿದೆ. ಒಂದು ಎಕರೆ ನರ್ಸರಿಗೆ ಹನ್ನೊಂದು ಲಕ್ಷ ಬಂಡವಾಳ ಹೂಡಿದ್ದಾರೆ. ಇದರಿಂದ ವರ್ಷಕ್ಕೆ ನಾಲ್ಕೈದು ಲಕ್ಷ ಲಾಭ ಸಿಗುತ್ತಿದೆ ಎನ್ನುತ್ತಾರೆ ನಾಗರತ್ನ.

ವರ್ಷಪೂರ್ತಿ ಉದ್ಯೋಗಾವಕಾಶ
ನರ್ಸರಿಯಲ್ಲಿ ಟ್ರೇಗಳಲ್ಲಿ ಕೊಕೊ ಪೀಟ್‌ ತುಂಬಲು, ಬೀಜಗಳನ್ನು ನಾಟಿ ಮಾಡಲು, ಟ್ರೇಗಳನ್ನು ಜೋಡಿಸಲು, ಸಸಿ ಬಂದ ಮೇಲೆ ಅವುಗಳಿಗೆ ನೀರು ಸಿಂಪಡಿಸಲು, ಕಳೆ ತೆಗೆಯಲು ಅವುಗಳ ಪಾಲನೆ ಪೋಷಣೆಗೆಂದೇ ವರ್ಷಪೂರ್ತಿ ನಾಲ್ಕರಿಂದ ಐದು ಕೆಲಸಗಾರರು ಬೇಕಾಗುತ್ತಾರೆ. ಅವರಿಗೂ ಕಾಯಂ ಉದ್ಯೋಗ ದೊರಕಿದಂತಾಗಿದೆ.

ರೈತಸ್ನೇಹಿ ನರ್ಸರಿ
ಒಂದು ಎಕರೆ ನರ್ಸರಿಯಲ್ಲಿ, ಒಂದು ಟ್ರೇನಲ್ಲಿ ಗರಿಷ್ಠ ನೂರು ಸಸಿಗಳನ್ನು ಬೆಳೆಸಬಹುದಾದಂಥ 14,000 ಟ್ರೇಗಳಲ್ಲಿ ಹದಿನಾಲ್ಕು ಲಕ್ಷ ವಿವಿಧ ಬಗೆಯ ಸಸಿಗಳನ್ನು ಬೆಳೆಸಿದ್ದಾರೆ. ಎಲ್ಲ ತರಹದ ತರಕಾರಿ, ಹೂವು, ವಾಣಿಜ್ಯ, ತೋಟಗಾರಿಕೆ ಸಸಿಗಳನ್ನು 30 ದಿನಗಳ ಕಾಲ ಗ್ರೀನ್‌ ಹೌಸ್‌ನಲ್ಲಿ ಬೆಳೆಸಿ ನಂತರ ರೈತರನ್ನು ಸಂಪರ್ಕಿಸುತ್ತಾರೆ. ವಿಶ್ವಾಸಾರ್ಹ ಸಸಿಗಳನ್ನು ಒದಗಿಸುವ ಕಾರಣ 4,500 ರೈತರು ಅವರ ಗ್ರಾಹಕರಾಗಿದ್ದಾರೆ. ಇನ್ನೊಂದು ವಿಶೇಷ ಅಂದರೆ, ಯಾರೇ ರೈತ ಇವರ ಬಳಿ ಒಂದು ಸಾವಿರ ಸಸಿ ಕೊಂಡರೆ, ನೂರು ಸಸಿಗಳನ್ನು ಉಚಿತವಾಗಿ ನೀಡುತ್ತಾರೆ.

ಉಚಿತ ಮಾರ್ಗದರ್ಶನ
ನಾಗರತ್ನರವರು ತಮ್ಮ ನರ್ಸರಿಯಲ್ಲಿ ಸಸಿ ಕೊಂಡ ರೈತರ ಹೊಲಗಳಿಗೆ ಭೇಟಿ ನೀಡಿ, ಉಚಿತ ಮಾರ್ಗದರ್ಶನ ನೀಡುತ್ತಾರೆ. ಸಸಿಗಳನ್ನು ಹೇಗೆ ಪೋಷಿಸಬೇಕೆಂಬುದರ ಬಗ್ಗೆಯೂ ತಿಳಿಸಿಕೊಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ- 7619144498

Advertisement

– ಫೈರ್ಮಾನ್‌ ಕೆ. ಪಟ್ಟನಾಯಕನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next