ಮೊನ್ನೆ ಆಕಸ್ಮಿಕವಾಗಿ ಪ್ರಶಸ್ತಿ ವಿಜೇತ ಕಿರುಚಿತ್ರ ವನ್ನು ನೋಡುವ ಅವಕಾಶ ಸಿಕ್ಕಿತು. ಆ ಕಿರುಚಿತ್ರದ ಹೆಸರು- Made in Madras. ಸ್ಲಂನಲ್ಲಿ ಬೆಳೆದ ಹುಡುಗಿಯೊಬ್ಬಳು, ಫುಟ್‌ಬಾಲ್ ಆಟಕ್ಕೆ ಮರುಳಾಗಿ ಆಟ ಕಲಿಯುವುದು, ಅನಂತರದಲ್ಲಿ queen of soccer ಅನ್ನಿಸಿ ಕೊಳ್ಳುವುದು ಈ ಚಿತ್ರದ ಒನ್ ಲೈನ್ ಸ್ಟೋರಿ. 7 ನಿಮಿಷಗಳ ಅವಧಿಯ ಆ ಕಿರುಚಿತ್ರ ವೀಕ್ಷಿಸಿದ ಅನಂತರ ಸಂಗೀತಾ ಶೇಖರ್ ಎಂಬ ಹೆಣ್ಣುಮಗಳ ಬಗ್ಗೆ ಬರೆಯಲೇಬೇಕು ಅನ್ನಿಸಿತು. ಅಂದಹಾಗೆ ಆ ಕಿರುಚಿತ್ರದ ಕಥಾನಾಯಕಿಯ ಹೆಸರೇ ಸಂಗೀತಾ ಶೇಖರ್.
ಚೆನ್ನೈ ಯ ಜಾರ್ಜ್ ಟೌನ್‌ನಲ್ಲಿ, ಪಿಳ್ಳೆಯಾರ್ ಕೋಯಿಲ್ ಸ್ಟ್ರೀಟ್ ಎಂಬ ಪ್ರದೇಶವಿದೆ. ಅಲ್ಲಿ ಹೆಚ್ಚಾಗಿ, ಆರ್ಥಿಕವಾಗಿ ದುರ್ಬಲರಾಗಿರುವ ಜನರೇ ಇದ್ದಾರೆ. ಇದರ ಜತೆಗೆ ರಸ್ತೆಯ ಉದ್ದಕ್ಕೂ ಕೊಳೆಗೇರಿ ಇದೆ. ಅಲ್ಲಿ ಜನ ವಾಸಿಸುವುದಾದರೂ ಹೇಗೆ ಗೊತ್ತೇ? ರಸ್ತೆಯ ಬದಿಯಲ್ಲಿ ಫುಟ್‌ಪಾತ್ ಎಂದು ಜಾಗ ಮಾಡಿರುತ್ತಾರಲ್ಲ; ಅಲ್ಲಿಯೇ ತಮ್ಮ ವಸ್ತುಗಳನ್ನು ಗುಡ್ಡೆ ಹಾಕಿಕೊಂಡು, ಪರದೆ ಕಟ್ಟಿಕೊಂಡು, ಪ್ಲಾಸ್ಟಿಕ್ ಶೀಟ್‌ನಿಂದ ತಮ್ಮನ್ನು ಮರೆಮಾಡಿಕೊಂಡು ಉಳಿದು ಬಿಟ್ಟಿದ್ದಾರೆ! ಫುಟ್ ಪಾತ್‌ನಲ್ಲಿಯೇ ಒಂದು ಪಾತ್ರೆಯಲ್ಲಿ ನೀರು ಕಾಯಿಸಿ ಸ್ನಾನ ಮಾಡುತ್ತಾರೆ. ಅಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿ ಅದೇ ಸ್ಲಂನ ವ್ಯಕ್ತಿಯೊಬ್ಬ ಮೆಕ್ಯಾನಿಕ್ ಕೆಲಸ ಮಾಡುತ್ತಾನೆ. ಇನ್ನೊಬ್ಬ ಪಾತ್ರೆಗಳಿಗೆ ಪಾಲಿಶ್ ಹಾಕುತ್ತಾನೆ. ಮಗದೊಬ್ಬ ತಳ್ಳುಗಾಡಿಯ ಮೇಲೆ ಗೋಬಿ ಮಂಚೂರಿ ತಯಾರಿಸುತ್ತಾನೆ. ಪರಿಣಾಮ ಆ ಇಡೀ ಪ್ರದೇಶ ಗದ್ದಲದಿಂದ, ಹೊಗೆಯಿಂದ, ಕೊಳಕಿನಿಂದ ತುಂಬಿ ಹೋಗಿರುತ್ತದೆ. ಇಂಥ ಏರಿಯಾದಲ್ಲಿ ಸೆಲ್ವಿ ಎಂಬಾಕೆಯ ಕುಟುಂಬವೂ ಇದೆ. ಈ ಸೆಲ್ವಿಯ ಮಗಳೇ ಸಂಗೀತಾ ಶೇಖರ್.
ಮದ್ಯವ್ಯಸನಿಯಾಗಿದ್ದ ಸೆಲ್ವಿಯ ಗಂಡ ತುಂಬಾ ಹಿಂದೆಯೇ ಹೆಂಡತಿ- ಮಕ್ಕಳನ್ನು ಬಿಟ್ಟು ಎಲ್ಲಿಗೋ ಹೋಗಿಬಿಟ್ಟನಂತೆ. ಈ ಸ್ಟೋರಿಯ ಕಥಾನಾಯಕಿ ಸಂಗೀತಾಗೆ ಆಗ 4 ವರ್ಷ ವಯಸ್ಸು. ಅಂದಿನಿಂದ, ಮನೆ ನಿರ್ವಹಣೆಯ ಜವಾಬ್ದಾರಿ ಸೆಲ್ವಿಯ ಮೇಲೆ ಬಿತ್ತು. ಆಕೆ, ಶ್ರೀಮಂತರ ಮನೆಯಲ್ಲಿ ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಕೆಲಸ ಮಾಡುತ್ತಲೇ ತನ್ನ ಜವಾಬ್ದಾರಿ ನಿರ್ವಹಿಸಿದಳು. ಈ ದುಡಿಮೆಯಿಂದ ಎಲ್ಲರ ಹೊಟ್ಟೆ ತುಂಬುವುದಿಲ್ಲ ಅನ್ನಿಸಿದಾಗ, ಹಿರಿಯ ಮಗಳನ್ನೂ ಪಾತ್ರೆ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಸಿದ್ದಾಯಿತು. ಆನಂತರ ಏನೇನಾಯಿತು ಎಂಬುದನ್ನು ಸಂಗೀತಾಳ ಮಾತುಗಳಲ್ಲಿಯೇ ಕೇಳಬೇಕು…
“ನಾನು 9 ನೇ ತರಗತಿಗೆ ಬರುವ ವೇಳೆಗೆ ಅಮ್ಮನ ಆರೋಗ್ಯ ಹದಗೆಟ್ಟಿತು. ದೃಷ್ಟಿ ಮಂದವಾಯಿತು. ಪರಿಣಾಮ, ಮನೆ ಕೆಲಸಗಳಿಂದ ಆಕೆ ದೂರ ಉಳಿಯಬೇಕಾಗಿ ಬಂತು. ಅಕ್ಕನ ಸಂಪಾದನೆ ಯಿಂದ ಸಂಸಾರ ನಿರ್ವಹಣೆ ಕಷ್ಟವಾದಾಗ, ನಾನೂ ಸ್ಕೂಲ್ ಬಿಟ್ಟು ಪಾತ್ರೆ ತಯಾರಿಸುವ ಫ್ಯಾಕ್ಟರಿಯಲ್ಲಿಯೇ ಕೆಲಸಕ್ಕೆ ಸೇರಿಕೊಂಡೆ. ಹಳೆಯ ಪಾತ್ರೆಗಳಿಗೆ ಪಾಲಿಶ್ ಮಾಡುವುದು ನನ್ನ ಕೆಲಸ ವಾಗಿತ್ತು. ಮೂರ್ನಾಲ್ಕು ತಿಂಗಳು ಈ ಕೆಲಸ ಮಾಡಿದೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆಯೇ ಕರುಣಾಲಯ ಎಂಬ ಎನ್‌ಜಿಒ ನ ಜನ ನಮ್ಮ ಫ್ಯಾಕ್ಟರಿಗೆ ಬಂದರು. ಬಾಲಕಾರ್ಮಿಕ ರಿಂದ ಕೆಲಸ ಮಾಡಿಸುತ್ತಿದ್ದಾರೆ ಎಂಬ ಕಾರಣ ಹೇಳಿ ನನ್ನನ್ನು ಅಲ್ಲಿಂದ ಬಿಡಿಸಿದರು. ನಮ್ಮ ಮನೆಯ ಕಷ್ಟದ ಬಗ್ಗೆ ಹೇಳಿ ಕೊಂಡಾಗ, ಕರುಣಾಲಯದ ಹಾಸ್ಟೆಲ್ ಗೆ ಬಂದುಬಿಡು, ನಾವು ನೋಡಿಕೊಳ್ಳುತ್ತೇವೆ ಎಂದರು. ಅಷ್ಟೇ ಅಲ್ಲ, ಶಾಲೆಗೂ ಬಂದು, ನನ್ನ ಪರವಾಗಿ ಮಾತನಾಡಿ, ಮತ್ತೆ ಅಡ್ಮಿಷನ್ ಮಾಡಿಸಿದರು. ಸಂಜೆಯ ಹೊತ್ತು ಟ್ಯೂಷನ್ ಮಾಡುವ ಮೂಲಕ ಓದಿನ ಬಗ್ಗೆ ಒಂದಷ್ಟು ಆಸಕ್ತಿ ಬರುವಂತೆಯೂ ಮಾಡಿದರು.
ದಿನವೂ ಶಾಲೆ ಮುಗಿದ ಅನಂತರ ಕರುಣಾಲಯದ ಹಾಸ್ಟೆಲ್‌ಗೆ ಹೋಗುವುದು, ಅಲ್ಲಿ ಟ್ಯೂಷನ್ ಮಗಿಸಿಕೊಂಡು ಮನೆಗೆ ವಾಪಸಾಗುವುದು ನನ್ನ ರೂಟೀನ್ ಆಗಿತ್ತು. ಇದೆಲ್ಲಾ 2014 ರ ಮಾತು. ಅದೊಂದು ದಿನ, ಕರುಣಾಲಯದ ಪಕ್ಕದಲ್ಲಿಯೇ ಇದ್ದ ಅಂಗಳದಲ್ಲಿ ಹತ್ತಾರು ಹುಡುಗರು ಫುಟ್‌ಬಾಲ್ ಆಟ ಆಡುತ್ತಿದ್ದರು. ಹತ್ತಿಪ್ಪತ್ತು ನಿಮಿಷಗಳ ಕಾಲ ಆ ಆಟವನ್ನೇ ತದೇ ಕಚಿತ್ತಳಾಗಿ ನೋಡಿದೆ. ಯಾಕೆ ಹಾಗನ್ನಿಸಿತೋ ಗೊತ್ತಿಲ್ಲ; ನಾನೂ ಈ ಆಟವನ್ನು ಕಲಿಯಬೇಕು. ನಾನೂ ಫುಟ್‌ಬಾಲ್ ಆಡಬೇಕು ಅನ್ನಿಸಿಬಿಟ್ಟಿತು. ತತ್‌ಕ್ಷಣವೇ ಕರುಣಾಲಯದ ಮುಖ್ಯಸ್ಥರ ಬಳಿಗೆ ಹೋಗಿ ನನ್ನ ಆಸೆ ಹೇಳಿಕೊಂಡೆ. ಅವರು ನಸುನಗುತ್ತಾ- “ನೀನು ಫುಟ್‌ಬಾಲ್ ಆಡಬೇಕಾ? ಸರಿ, ಅದಕ್ಕೆ ಖಂಡಿತ ವ್ಯವಸ್ಥೆ ಮಾಡೋಣ. ಆದರೆ ಒಂದು ಕಂಡೀಶನ್. ನೀನು ಚೆನ್ನಾಗಿ ಓದಿದರೆ ಮಾತ್ರ ಫುಟ್‌ಬಾಲ್ ಆಡಲು ಕಲಿಸಿಕೊಡ್ತೇವೆ’ ಅಂದರು!
ಮರುದಿನದಿಂದಲೇ ಫುಟ್ ಬಾಲ್ ಆಟದ ತರಬೇತಿ ಶುರು ವಾಗಿಯೇ ಬಿಟ್ಟಿತು. ನನಗೆ ಕೋಚ್ ಆಗಿ ಸಿಕ್ಕವರು- ಕಣ್ಣಾದಾಸ್. ಅನಂತರ ನಡೆದಿದ್ದನ್ನು ಹೇಳಲು ನನಗೆ ದೊಡ್ಡ ಖುಷಿ. ಸ್ಟ್ರೀಟ್ ಚೈಲ್ಡ್ ಯುನೈಟೆಡ್ ಎಂಬ ಎನ್‌ಜಿಒ, ಸ್ಲಂ ಮಕ್ಕಳಿಗಾಗಿ ಸ್ಟ್ರೀಟ್ ಚೈಲ್ಡ್ ಸಾಕರ್ ವಿಶ್ವಕಪ್ ಹೆಸರಿನ ಟೂರ್ನಮೆಂಟ್ ನಡೆಸುತ್ತದೆ. ಇಂಥದೊಂದು ಪಂದ್ಯದಲ್ಲಿ, ಭಾರತವನ್ನು ಪ್ರತಿನಿಧಿಸುವ ಅವಕಾಶ ನನಗೆ ಸಿಕ್ಕಿತು. ಈ ಪಂದ್ಯ ನಡೆದದ್ದು ಸ್ಕಾಟ್ಲೆಂಡ್‌ನಲ್ಲಿ. ಅದುವರೆಗೂ ಚೆನ್ನೈ ಬಿಟ್ಟು ಬೇರೊಂದು ನಗರವನ್ನೇ ನಾನು ನೋಡಿರಲಿಲ್ಲ. ಅಷ್ಟೇ ಅಲ್ಲ; ರೈಲು ಪ್ರಯಾಣವನ್ನೂ ಮಾಡಿರಲಿಲ್ಲ. ಅಂಥವಳಿಗೆ ಈಗ ಇದ್ದಕ್ಕಿದ್ದಂತೆಯೇ ಸ್ಕಾಟ್ಲೆಂಡ್‌ಗೆ ವಿಮಾನದಲ್ಲಿ ಹೋಗಿ ಬರುವ ಅವಕಾಶ ಸಿಕ್ಕಿಬಿಟ್ಟಿತ್ತು.
ಸ್ಕಾಟ್ಲೆಂಡ್‌ನಲ್ಲಿ ನಮ್ಮ ತಂಡ ಕಪ್ ಗೆದ್ದಿತು. ಜತೆಗೆ ಸರಣಿಯ ಆಟಗಾರ್ತಿ ಎಂಬ ಪ್ರಶಸ್ತಿಯೂ ನನಗೆ ಸಿಕ್ಕಿತು. ಎರಡು ವರ್ಷಗಳ ನಂತರ ರಷ್ಯಾ ದ ರಾಜಧಾನಿ ಮಾಸ್ಕೋದಲ್ಲಿ ನಡೆದ ಸ್ಟ್ರೀಟ್ ಚಿಲ್ಡ್ರನ್ ಫುಟ್ ಬಾಲ್ ವರ್ಲ್ಡ್ ಕಪ್‌ನಲ್ಲಿ ನಾಯಕಿಯಾಗಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ನನ್ನದಾಯಿತು. ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯ ನಡೆಯುತ್ತದಲ್ಲ; ಅಷ್ಟೇ ದೊಡ್ಡದಾಗಿ ಸ್ಟ್ರೀಟ್ ಚಿಲ್ಡ್ರನ್ ಫುಟ್ ಬಾಲ್ ವರ್ಲ್ಡ್ ಕಪ್ ಕೂಡ ನಡೆಯುತ್ತದೆ. ಫೈನಲ್‌ನಲ್ಲಿ, ಅತ್ಯಂತ ಪ್ರಬಲ ತಂಡ ಅನ್ನಿಸಿಕೊಂಡಿದ್ದ ಮೆಕ್ಸಿಕೋವನ್ನು ಸೋಲಿಸಿ ವಿಶ್ವಕಪ್ ಗೆದ್ದೆವು. ಆಗ ಗೆಲುವಿನ ಗೋಲ್ ಹೊಡೆದವಳು ನಾನೇ ಅನ್ನುವುದು ನನ್ನ ಪಾಲಿಗೆ ಹೆಮ್ಮೆಯ, ಸಂತೋಷದ ಸಂಗತಿ ಅನ್ನುತ್ತಾಳೆ ಸಂಗೀತಾ.
ಪರಿಶ್ರಮವೊಂದು ಜತೆಗಿದ್ದರೆ ಸ್ಲಂನಲ್ಲಿ ಬೆಳೆದ ಮಕ್ಕಳೂ ಸ್ಕಾಟ್ಲೆಂಡ್ ತಲುಪಬಹುದು, ವಿಶ್ವಕಪ್ ಕೂಡ ಗೆಲ್ಲಬಹುದು ಎಂಬುದನ್ನು ಸಾಧಿಸಿ ತೋರಿಸಿದ ಸಂಗೀತಾಗೆ ಸಲಾಂ.
– ಎ.ಆರ್.ಮಣಿಕಾಂತ್