Advertisement

ಒಂದು ಕೋಟೆ ಯಾನ

10:13 AM Mar 15, 2020 | Lakshmi GovindaRaj |

ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಕೋಟೆಯನ್ನು ಕಂಡಾಗ, ತಾಳೆಯಾಗಿ ನಿಲ್ಲುವುದು ಮಧ್ಯಪ್ರದೇಶದ ಗ್ವಾಲಿಯರ್‌ನ ಕೋಟೆ. ಎರಡೂ ಕೋಟೆಗಳ ಆಂತರಿಕ ಕೆಲವು ವಿನ್ಯಾಸ, ಉದ್ದದ ರಚನೆಗಳು ಹೋಲಿಕೆಯಲ್ಲಿ ಬಲು ಹತ್ತಿರ…

Advertisement

ಒಬ್ಬನಂತೆ ಮತ್ತೂಬ್ಬ ಹೋಲುವ ಮನುಷ್ಯರು ಬೆರಳೆಣಿಕೆ ಮಂದಿಯಾದರೂ ಇದ್ದೇ ಇರುತ್ತಾರೆ. ಹಾಗೆಯೇ, ಕಲೆ- ಸ್ಮಾರಕಗಳಲ್ಲೂ ಅಂಥ ತದ್ರೂಪಗಳುಂಟು. ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಕೋಟೆಯನ್ನು ಕಂಡಾಗ, ತಾಳೆಯಾಗಿ ನಿಲ್ಲುವುದು ಮಧ್ಯಪ್ರದೇಶದ ಗ್ವಾಲಿಯರ್‌ನ ಕೋಟೆ. ಎರಡೂ ಕೋಟೆಗಳ ಆಂತರಿಕ ಕೆಲವು ವಿನ್ಯಾಸ, ಉದ್ದದ ರಚನೆಗಳು ಹೋಲಿಕೆಯಲ್ಲಿ ಬಲು ಹತ್ತಿರ.

ಬೆಟ್ಟದ ಮೇಲೆ ಕಲಾಕೃತಿಯಂತೆ ನಿಂತ ಈ ಕೋಟೆಯ ಇತಿಹಾಸ ದೊಡ್ಡದು. ಪಲ್ಲವರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಪಾಂಡ್ಯರು, ಬಾದಾಮಿ ಚಾಲುಕ್ಯರು, ನೊಳಂಬರು, ದುರ್ಗದ ಪಾಳೇಗಾರರು- ಹೀಗೆ ನಾನಾ ರಾಜ ಮನೆತನಗಳ ಆಳ್ವಿಕೆಯ ನೆನಪುಗಳು ಇಲ್ಲಿ ಸಾಲುಗಟ್ಟುತ್ತವೆ. ಕೋಟೆಗೆ ನಾಲ್ಕು ಮೂಲೆಗಳಿವೆ. ಹೊರಮುಖವಾಗಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ 100 ಅಡಿಗಳ ಅಂತರ.

ನಾಲ್ಕು ಮೂಲೆಗಳಲ್ಲೂ ಚೌಕಾಕಾರದ ಬುರುಜುಗಳು. 50 ಅಡಿ ಎತ್ತರದ ಬುರುಜುಗಳು ಆಗಸದೊಂದಿಗೆ ಮಾತಿಗಿಳಿದಂತಿವೆ. ಕೋಟೆಯೊಳಗಿನ ಅರಮನೆಯನ್ನು ಕಲ್ಲು- ಗಾರೆಯಿಂದ ಕಟ್ಟಲಾಗಿದೆ. ಮುಂಭಾಗದ ಚಾವಣಿ ಮೇಲಿನ ಕಟ್ಟಡದಲ್ಲಿ ಮನೋಹರ ಉಬ್ಬು ಶಿಲ್ಪಗಳಿವೆ. ಕಲ್ಲುಗುಂಡುಗಳನ್ನು ಕೋಟೆಯ ರಕ್ಷಣೆಗೆ ಬಳಸಲಾಗುತ್ತಿತ್ತು ಎನ್ನುವುದಕ್ಕೆ ಈಗಲೂ ಸಾಕ್ಷಿಗಳಿವೆ.

ಉಚ್ಚಂಗಿದುರ್ಗ ಕ್ರಿ.ಶ.5ರಲ್ಲಿ ಕದಂಬರ ರಾಜಧಾನಿಯಾಗಿತ್ತು ಎನ್ನಲಾಗಿದೆ. ಇದಕ್ಕೆ ಸೂಕ್ತ ಆಧಾರಗಳಿಲ್ಲ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಈಗಲೂ ಉಚ್ಚಂಗಿದುರ್ಗ ಕೋಟೆಯ ನಿರ್ಮಾತೃವಿನ ಬಗ್ಗೆ ಜಿಜ್ಞಾಸೆ ಉಳಿದಿದೆ. ಆಳಿದ ಅನೇಕರು ಒಂದೊಂದು ಸ್ಮಾರಕಗಳನ್ನು ನಿರ್ಮಿಸಿರಬಹುದು ಎಂಬುದಾಗಿ ಇತಿಹಾಸ ಸಂಶೋಧಕರ ಅಭಿಪ್ರಾಯ.

Advertisement

ದಕ್ಷಿಣೋತ್ತರವಾಗಿ ಹಬ್ಬಿರುವ ಗಿರಿಶೃಂಗಗಳೆರಡನ್ನೂ ಬಳಸಿ ಉಚ್ಚಂಗಿಕೋಟೆ ನಿರ್ಮಾಣಗೊಂಡಿದೆ. ಕೋಟೆಯ ಆಯಕಟ್ಟಿನ ಸ್ಥಳದಲ್ಲಿ 30ಕ್ಕೂ ಹೆಚ್ಚು ಬುರುಜುಗಳನ್ನು ನಿರ್ಮಿಸಲಾಗಿದೆ. ಚೌಕವಾಗಿ, ವರ್ತುಲಾಕಾರವಾಗಿರುವ ಅವು ದೂರದಿಂದಲೇ ಆಕರ್ಷಿಸುತ್ತವೆ.

ಒಳಗೆ ಏನಿದೆ?: ಕೋಟೆಯ ಒಳಪ್ರವೇಶಿಸಿದರೆ ಉಪಬಾಗಿಲು, ದಿಡ್ಡಿಬಾಗಿಲು, ಮಳಿಲು ಬಾಗಿಲುಗಳು ಕಾಣಿಸುತ್ತವೆ. ಉತ್ಸವಾಂಬೆ ದೇಗುಲಕ್ಕೆ ಹಾದು ಹೋಗುವ ಹಾದಿಯಲ್ಲಿ ಕಣ್ಣರಳಿಸಿದರೆ ಬೆಟ್ಟದ ಬಸವೇಶ್ವರ, ಜೋಡಿದುರುಗಮ್ಮ, ಅರಮನೆ, ಏಕಶಿಲಾ ಜಲಪಾತ, ಕರಡಿಗುಡ್ಡದ ಅಂಜನೇಯ, ತೊಟ್ಟಿಲ ಬಾವಿ, ಬಟ್ಟಲ ಬಾವಿ, ಜಮದಗ್ನಿ ವಿಗ್ರಹಗಳು, ರಾಣಿಯ ಅಂತಃಪುರ, ಎಣ್ಣೆಕೊಳ, ತುಪ್ಪದಕೊಳ ಕಾಣಸಿಗುತ್ತವೆ.

ಕೋಟೆ ದಾರಿ…: ದಾವಣಗೆರೆ ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ಹಾಗೂ ಹರಪನಹಳ್ಳಿಯಿಂದ 20 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಿವೆ.

* ಚಿತ್ರ- ಲೇಖನ: ಟಿ. ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next