Advertisement

ಗ್ರಾಪಂ ಅಧಿಕಾರಕ್ಕಾಗಿ ಆಕಾಂಕ್ಷಿಗಳಿಂದ ಸದಸ್ಯರಿಗೆ ಪ್ರವಾಸ ಭಾಗ್ಯ

02:39 PM Jan 23, 2021 | Team Udayavani |

ಚನ್ನರಾಯಪಟ್ಟಣ: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು, ಫೆ.6ರೊಳಗೆ ಚುನಾವಣೆ ನಡೆಸಲು ಈಗಾಗಲೇ ಅಧಿಕಾರಿಯನ್ನೂ ನೇಮಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿಯಲ್ಲಿ ಇರುವ ಗ್ರಾಪಂನಲ್ಲಿ ಅಧಿಕಾರ ಹಿಡಿಯಲು ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿದ್ದು, ರೆಸಾರ್ಟ್‌ ರಾಜಕೀಯಕ್ಕೆ ಜೆಡಿಎಸ್‌, ಕಾಂಗ್ರೆಸ್‌ ಬೆಂಬಲಿಗರಿಂದ ಮುಂದಾಗಿದ್ದಾರೆ.

Advertisement

ಅಧ್ಯಕ್ಷ ಹುದ್ದೆಗೆ ಏರುವ ಉದ್ದೇಶದಿಂದ ಲಕ್ಷಾಂತರ ರೂ. ಹಣ ನೀಡಿ ಹರಾಜಿನಲ್ಲಿ ಆಯ್ಕೆಯಾಗಿರುವ ಕೆಲವರಿಗೆ ಮೀಸಲಾತಿಯಿಂದ ಅಧಿಕಾರ ಕೈ ತಪ್ಪಿದೆ. ಇದರ ಲಾಭ ಪಡೆಯಲು, ಪಕ್ಷದ ಮುಖಂಡರು, ತಮ್ಮ ಹಿಂಬಾಲಕರನ್ನು ಬಿಟ್ಟು ತಾವು ಹೇಳಿದಂತೆ ಕೇಳಿದವರಿಗೆ ಗ್ರಾಪಂ ಅಧ್ಯಕ್ಷ ಸ್ಥಾನ ನೀಡಲು ತೀರ್ಮಾನ ಮಾಡಿದ್ದು, ತೀರ್ಥ ಕ್ಷೇತ್ರಕ್ಕೆ ಪ್ರವಾಸ ಕಳುಹಿಸಿದ್ದಾರೆ.
ಪ್ರಾಬಲ್ಯ ಉಳಿಸಿಕೊಳ್ಳುವ ಉದ್ದೇಶ: ಶ್ರವಣ ಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಮೂರು ದಶಕ ದಿಂದ ಜೆಡಿಎಸ್‌ ಪಕ್ಷದವರೇ ಅಧಿಕಾರದಲ್ಲಿ ಇದ್ದಾರೆ. ಕಳೆದ ಏಳು ವರ್ಷದಿಂದ ಸಿ.ಎನ್‌. ಬಾಲಕೃಷ್ಣ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು 25ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆದರೂ, ಅತಂತ್ರ ಸ್ಥಿತಿಯಲ್ಲಿ ಇರುವ ಪಂಚಾಯಿತಿ ಮೇಲೂ ಕಣ್ಣು ಇಟ್ಟಿದ್ದು, ಅದಕ್ಕಾಗಿ ತಂತ್ರಗಾರಿಕೆ ರೂಪಿಸಿದ್ದಾರೆ.

ತಂತ್ರಕ್ಕೆ ಪ್ರತಿ ತಂತ್ರ: ಶಾಸಕರಿಗೆ ಸಡ್ಡು ಹೊಡೆಯಲು ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಗ್ರಾಪಂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ನೂರಕ್ಕೂ ಹೆಚ್ಚು ಮಂದಿಯನ್ನು ಗೆಲ್ಲಿಸಿಕೊಂಡಿದ್ದಾರೆ. ಐದಾರು ಗ್ರಾಪಂ ಕಾಂಗ್ರೆಸ್‌ ಬೆಂಬಲಿತರ ಪಾಲಾದರೂ ಹೆಚ್ಚು ಗ್ರಾಪಂ ಅನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಅತಂತ್ರ ಸ್ಥಿತಿಯ ಗ್ರಾಪಂಗಳ ಮೇಲೆ ಕಣ್ಣು ಇಟ್ಟಿದ್ದಾರೆ. ಜೆಡಿಎಸ್‌ನ ತಂತ್ರಕ್ಕ ಪ್ರತಿ ತಂತ್ರ ರೂಪಿಸುತ್ತಿದ್ದಾರೆ.

ಇದನ್ನೂ ಓದಿ:ಕಾಂಗ್ರೇಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಿಎಂ ಸ್ಪರ್ಧೆ : ಈಶ್ವರಪ್ಪ ವ್ಯಂಗ್ಯ

ಖಾತೆ ತೆರೆದ ಬಿಜೆಪಿ: ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ್ದೇ ಪಾರುಪತ್ಯ. ಇದರ ನಡುವೆ ಬಿಜೆಪಿ ಬೆಂಬಲಿತರು ಖಾತೆ ತೆರೆಯುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಚಿಗುರೊಡೆಯುವಂತೆ ಆ ಪಕ್ಷದ ಮುಖಂಡ ಎ.ಸಿ.ಆನಂದಕುಮಾರ್‌ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಬಿಜೆಪಿ 15ಕ್ಕೂ ಹೆಚ್ಚು ಬೆಂಬಲಿತ ಸದಸ್ಯರನ್ನು ಗ್ರಾಮ ಪಂಚಾಯಿತಿ ಮೆಟ್ಟಿಲೇರುವಂತೆ ಮಾಡಿದ್ದಾರೆ.

Advertisement

ತೀರ್ಥ ಕ್ಷೇತ್ರ, ರೆಸಾರ್ಟ್‌ ವಾಸ್ತವ್ಯ: ಹಲವು ಮಂದಿ ಈಗಾಗಲೆ ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು, ಮಂಗಳೂರು, ಶೃಂಗೇರಿ ಸೇರಿ ಹಲವು ತೀರ್ಥ ಕ್ಷೇತ್ರದ ಪ್ರವಾಸದಲ್ಲಿ ಇದ್ದಾರೆ. ಕ್ಷೇತ್ರದ ಪ್ರವಾಸ ಮುಗಿಸಿರುವ ಅನೇಕ ಮಂದಿ ಮಡಿಕೇರಿ, ಕೇರಳ ರಾಜ್ಯದ ರೆಸಾರ್ಟ್‌ನಲ್ಲಿ ಟಿಕಾಣಿ ಹೂಡಿದ್ದಾರೆ. ಚುನಾವಣೆ ದಿನಾಂಕ ಸಮೀಪಿದ ಮೇಲೆ ಕ್ಷೇತ್ರಕ್ಕೆ ಹಿಂತಿರುಗುವ ಲೆಕ್ಕಾಚಾರದಲ್ಲಿ ಇದ್ದಾರೆ.

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

 

Advertisement

Udayavani is now on Telegram. Click here to join our channel and stay updated with the latest news.

Next