ಮುಂಬೈ: ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಭಾರತೀಯರು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ವೆಚ್ಚ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಭಾರತೀಯರು ಪ್ರಾಮುಖ್ಯತೆಯೂ ಹೆಚ್ಚುತ್ತಿದೆ. 2019 ಜೂನ್‌ನಲ್ಲಿ ಅತ್ಯಧಿಕ ಅಂದರೆ 59.6 ಕೋಟಿ ಡಾಲರ್ ವೆಚ್ಚವನ್ನು ಭಾರತೀಯರು ವಿದೇಶ ಪ್ರವಾಸದಲ್ಲಿ ಮಾಡಿದ್ದಾರೆ. ಭಾರತದ ಕರೆನ್ಸಿ ವಿನಿಮಯ ಮಾಡಿಕೊಂಡ ಅಂಕಿ ಅಂಶದ ಆಧಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಡೇಟಾವನ್ನು ಬಿಡುಗಡೆ ಮಾಡಿದೆ.
ಗುರುವಾರ ನಡೆದ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಪ್ರಧಾನಿ ಮೋದಿ ಅವರೂ, ವಿದೇಶ ಪ್ರಯಾಣ ಮಾಡುವ ಬದಲು ಸ್ವದೇಶದಲ್ಲಿರುವ ಪ್ರವಾಸಿ ತಾಣಗಳಿಗೆ ಹೋಗಿ, ಪ್ರವಾಸೋದ್ಯಮವನ್ನು ಬಲಪಡಿಸಿ ಎಂದು ಕರೆ ನೀಡಿದ್ದರು. ಇದರ ಮಾರನೇ ದಿನವೇ ಈ ವರದಿ ಬಿಡುಗಡೆಯಾಗಿದೆ.
ವರ್ಷದಿಂದ ವರ್ಷಕ್ಕೆ ವಿದೇಶದಲ್ಲಿ ಭಾರತೀಯ ಪ್ರವಾಸಿಗರು ಮಾಡುವ ವೆಚ್ಚದ ಪ್ರಮಾಣ ಹೆಚ್ಚುತ್ತಲೇ ಇರುವುದು ಇದರಿಂದ ತಿಳಿದುಬಂದಿದೆ. ಒಟ್ಟು ಭಾರತೀಯರು ಡಾಲರ್ ಖರೀದಿ ಮಾಡಿದ ಪ್ರಮಾಣದಲ್ಲಿ ಇದು ಶೇ.42 ರಷ್ಟಾಗಿದೆ. 2018ರಲ್ಲಿ ವಿದೇಶ ಪ್ರವಾಸದಲ್ಲಿ ಭಾರತೀಯರು 38.1 ಕೋಟಿ ಡಾಲರ್ ಮೊತ್ತದ ಸಾಮಗ್ರಿಗಳನ್ನು ಖರೀದಿ ಮಾಡುವ ಮೂಲಕ ವೆಚ್ಚ ಮಾಡಿದ್ದರು.
ಅಚ್ಚರಿಯೆಂದರೆ, ವಿದೇಶದಲ್ಲಿ ಸ್ವತ್ತು ಖರೀದಿಗೆ ಮಾಡುತ್ತಿರುವ ವೆಚ್ಚ ಕಡಿಮೆಯಾಗುತ್ತಿದೆ. ಸ್ವತ್ತು ಖರೀದಿಗೆ 2019 ಜೂನ್‌ನಲ್ಲಿ 40 ಲಕ್ಷ ಡಾಲರ್ ಅನ್ನು ಭಾರತೀಯರು ಮಾಡಿದ್ದರೆ, 2018ರಲ್ಲಿ ಇದು 77 ಲಕ್ಷ ಡಾಲರ್ ಆಗಿತ್ತು.
ಇಂಗ್ಲೆಂಡ್ ಮತ್ತು ಅಮೆರಿಕಕ್ಕೆ ಎಚ್1ಬಿ ವೀಸಾ ಮೇಲೆ ಕಡಿವಾಣ ಹೇರಲಾಗಿದ್ದರೂ, ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ಪ್ರಕಾರ 2019 ರಲ್ಲಿ 5 ಕೋಟಿ ಭಾರತೀಯರು ವಿದೇಶಕ್ಕೆ ಪ್ರಯಾಣಿಸಿದ್ದಾರೆ. 2017 ಕ್ಕೆ ಹೋಲಿಸಿದರೆ ಈ ಸಂಖ್ಯೆ ದುಪ್ಪಟ್ಟಾಗಿದೆ.