Advertisement

ಪ್ರಯಾಣಿಕರ ಸೋಗಿನಲ್ಲಿ ಕಳವು: ಐವರ ಸೆರೆ

05:36 AM Feb 28, 2019 | Team Udayavani |

ಬೆಂಗಳೂರು: ರೈಲುಗಳಲ್ಲಿ ಸಹ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಕರ ಬ್ಯಾಗ್‌ಗಳಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ದೆಹಲಿ, ಹರಿಯಾಣ ಮೂಲದ ಐವರು ಆರೋಪಿಗಳು ರೈಲ್ವೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ದೆಹಲಿಯ ರಣವೀರ್‌ ಸಿಂಗ್‌ (43), ಸತ್ಬೀರ (46), ವಿನೋದ (31), ಲಲೀತ್‌ ಕುಮಾರ್‌ (27) ಹಾಗೂ ಹರಿಯಾಣದ ಸುಭಾಷ್‌ (44) ಬಂಧಿತರು. ಆರೋಪಿಗಳ ಬಂಧನದಿಂದ ದಂಡು ರೈಲ್ವೆ ಠಾಣೆ ಮತ್ತು ಬೈಯಪ್ಪನಹಳ್ಳಿ ಠಾಣೆಗಳಲ್ಲಿ ದಾಖಲಾಗಿದ್ದ 9 ಕಳವು ಪ್ರಕರಣಗಳು ಪತ್ತೆಯಾಗಿದ್ದು, ಇವರಿಂದ 28 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಎಸ್ಪಿ ಭೀಮಾಶಂಕರ್‌ ಎಸ್‌.ಗುಳೇದ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರೋಪಿಗಳೆಲ್ಲರೂ ಸಂಬಂಧಿಗಳಾಗಿದ್ದು, ಆರೇಳು ವರ್ಷಗಳಿಂದ ಕಳ್ಳತನವನ್ನೆ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬರುವ ರೈಲುಗಳಲ್ಲಿ ಸಹ ಪ್ರಯಾಣಿಕರಂತೆ ನಟಿಸಿ, ಪ್ರಯಾಣಿಕರ ಲಗೇಜುಗಳನ್ನು ಇಳಿಸಲು ಸಹಾಯ ಮಾಡುವ ನೆಪದಲ್ಲಿ ಅವರ ಬ್ಯಾಗ್‌ಗಳಲ್ಲಿದ್ದ ಚಿನ್ನಾಭರಣಗಳನ್ನು ಕೇವಲ 2-3 ನಿಮಿಷಗಳಲ್ಲಿ ಕಳವು ಮಾಡಿ ಪರಾರಿಯಾಗುತ್ತಿದ್ದರು. ಬಳಿಕ ದೆಹಲಿ, ಹರಿಯಾಣದಲ್ಲಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು ಎಂದು ಹೇಳಿದರು.

ಕೃತ್ಯ ಹೇಗೆ?: ದೆಹಲಿ, ಹರಿಯಾಣ, ಒಡಿಶಾದಿಂದಲೇ ರೈಲುಗಳ ಮೂಲಕ ಪ್ರಯಾಣ ಮಾಡುತ್ತಿದ್ದ ಆರೋಪಿಗಳು, ಎಲ್ಲ ಬೋಗಿಗಳನ್ನು ಪರಿಶೀಲಿಸುತ್ತಿದ್ದರು. ನಂತರ ಕೆಲ ಪ್ರಯಾಣಿಕರ ಬ್ಯಾಗ್‌ಗಳನ್ನು ಲಗೇಜ್‌ ಇಡುವ ಸ್ಥಳಕ್ಕೆ ಇಡಲು ಹಾಗೂ ಇಳಿಸಲು ಸಹಾಯ ಮಾಡುತ್ತಿದ್ದರು. ಈ ವೇಳೆಯೇ ಆ ಬ್ಯಾಗ್‌ಗಳಲ್ಲಿ ಚಿನ್ನಾಭರಣ ಅಥವಾ ಮೌಲ್ಯಯುತ ವಸ್ತುಗಳು ಇರುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು.

ನಂತರ ಆರೋಪಿಗಳ ಪೈಕಿ ಇಬ್ಬರು ಕೆಲ ಹೊತ್ತು ಆ ನಿರ್ದಿಷ್ಟ ಪ್ರಯಾಣಿಕರ ಜತೆ ಆತ್ಮೀಯತೆಯಿಂದ ಮಾತನಾಡಿ, ಅವರ ಗಮನ ಬೇರೆಡೆ ಸೆಳೆಯುತ್ತಿದ್ದರು. ಈ ವೇಳೆ ಇತರೆ ಮೂವರು ಆರೋಪಿಗಳು ಬ್ಯಾಗ್‌ಗಳಲ್ಲಿ ಮೌಲ್ಯಯುತ ವಸ್ತುಗಳನ್ನು ಕಳವು ಮಾಡಿ, ಎಂದಿನಂತೆ ಜಿಪ್‌ ಗಳನ್ನು ಹಾಕಿ ಸಭ್ಯಸ್ಥರಂತೆ ನಟಿಸುತ್ತಿದ್ದರು. 

Advertisement

ಆರೋಪಿಗಳು ಬಹುತೇಕ ಹವಾನಿಯಂತ್ರಿತ ಬೋಗಿಗಳ ಪ್ರಯಾಣಿಕರನ್ನೆ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದು, ಪ್ರಮುಖವಾಗಿ ನವ ವಧು-ವರರನ್ನೆ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು ಎಂದು ಹೇಳಿದರು.

ಬಂಧನ ಹೇಗೆ?:ಕೆಲ ತಿಂಗಳ ಹಿಂದಷ್ಟೇ ದೆಹಲಿಯಿಂದ ನಗರಕ್ಕೆ ಆಗಮಿಸಿದ್ದ ನವ ದಂಪತಿಗೆ ಆರೋಪಿಗಳು ಸಹಾಯ ಮಾಡುವ ನೆಪದಲ್ಲಿ 270 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ಕೆ.ಆರ್‌.ಪುರ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ದೂರುದಾರರು ಆರೋಪಿಗಳ ಮುಖ ಚಹರೆ ವಿವರಿಸಿದ್ದರು. ಇದರ ಆಧಾರದ ಮೇಲೆ ಈ ಹಿಂದೆ ಬಂಧನವಾಗಿದ್ದ ಕೆಲ ಆರೋಪಿಗಳ ಮುಖ ಚಹರೆಯನ್ನು ಹೊಲಿಕೆ ಮಾಡಿದಾಗ ಕೃತ್ಯ ಎಸಗಿದ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎಂದು ರೈಲ್ವೆ ಪೊಲೀಸರು ಹೇಳಿದರು.

ರೈಲ್ವೆ ವಿಭಾಗದ ಡಿವೈಎಸ್ಪಿ ಎನ್‌.ಟಿ.ಶ್ರೀನಿವಾಸ ರೆಡ್ಡಿ, ದಂಡು ರೈಲ್ವೆ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎಚ್‌.ಲಕ್ಷ್ಮೀನಾರಾಯಣ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next