Advertisement

ಮಲೆನಾಡ ತಪ್ಪಲಿನ ಗ್ರಾಮಗಳು ಕಾಣಲಿ ಅಭಿವೃದ್ಧಿಯ ಪಯಣ

10:52 PM Oct 19, 2019 | Team Udayavani |

ಬೈಂದೂರು: ಭವಿಷ್ಯದ ಮಹತ್ವಾಕಾಂಕ್ಷೆಯ ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರಿನ ಗ್ರಾಮೀಣ ಭಾಗಗಳು ಮೂಲ ಸಮಸ್ಯೆಗಳಿಂದ ನಲುಗುತ್ತಿವೆ. ರಸ್ತೆ, ಸೇತುವೆ, ಕೃಷಿ ಸಮಸ್ಯೆಗಳ ಬೇಡಿಕೆಯಲ್ಲಿ ಧ್ವನಿ ಕಳೆದುಕೊಂಡು ಗ್ರಾಮೀಣ ಭಾಗದ ಜನರಿಗೆ ಒಂದಿಷ್ಟು ಅನುದಾನದ ಆಶ್ರಯ ದೊರೆಯಬೇಕಿದೆ.

Advertisement

ಹದಗೆಟ್ಟು ಹೋಗಿರುವ
ಗ್ರಾಮೀಣ ಭಾಗದ ರಸ್ತೆಗಳು
ಬೈಂದೂರು ಕೇಂದ್ರ ಭಾಗದ ಅಭಿವೃದ್ಧಿ ಸ್ವಾಗತಾರ್ಹ. ಇದರ ನಡುವೆ ಸುತ್ತಲಿನ ಹತ್ತಾರು ಗ್ರಾಮಗಳ ಮೂಲ ಸಮಸ್ಯೆಗಳಾದ ರಸ್ತೆ, ನೀರು, ಸೇತುವೆ ನಿರ್ಮಾಣ ಮಾಡುವ ಮೂಲಕ ಸಾರ್ವತ್ರಿಕ ಬೆಳವಣಿಗೆಯ ಮೂಲಕ ಮುನ್ನಡೆಸಬೇಕಾಗಿದೆ. ಬೈಂದೂರಿನ ಕೂಗಳತೆ ದೂರದ ಪಟ್ಟಣ ಪ್ರದೇಶದ ಇನ್ನೊಂದು ಮಗ್ಗಲಿನ ವಾಸ್ತವತೆ ಅಭಿವೃದ್ಧಿ ಅಬ್ಬರ ವನ್ನು ಅಣಕಿಸುವಂತಿದೆ. ಪ್ರತಿನಿತ್ಯ ನೂರಾರು ಜನರು ಸಂಚರಿಸುವ, ಹತ್ತಾರು ಹಳ್ಳಿಗಳನ್ನು ಬೆಸೆಯುವ ಮಧ್ದೋಡಿ ರಸ್ತೆ ಸಂಪೂರ್ಣ ಅವಸಾನಗೊಂಡಿದೆ.ಕಾಲ್ನಡಿಗೆಗೂ ದುಸ್ತರವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ನಿತ್ಯ ಬೈಂದೂರು ಕಾಲೇಜಿಗೆ ತೆರಳಬೇಕಾಗಿದೆ.

ರಸ್ತೆ ದುರಸ್ತಿಯಾಗದ ಕಾರಣ ರಿಕ್ಷಾ, ಬಸ್‌ಗಳು ಕೂಡ ಸಂಚರಿಸಲು ಮುಂದಾಗುತ್ತಿಲ್ಲ. ಸಾರಂಕಿ ರಸ್ತೆ, ಅತ್ಯಾಡಿ, ಗಂಗನಾಡು, ಕಡೆR, ಊದೂರು ರಸ್ತೆ, ವಸ್ರೆ, ಹುಲ್ಕಡೆR ರಸ್ತೆ, ಒಣಕೊಡ್ಲು, ತೂದಳ್ಳಿ ರಸ್ತೆ, ಕೊರಾಡಿ-ಕುಂಜಳ್ಳಿ ಮುಂತಾದ ರಸ್ತೆಗಳು ಕಳೆದ ಆರೇಳು ವರ್ಷಗಳಿಂದ ಗಬ್ಬೆದ್ದು ಹೋಗಿವೆ. ಹಲವು ಬಾರಿ ಮನವಿ ನೀಡಿದರೂ ಇಲಾಖೆ ಗ್ರಾಮೀಣ ಭಾಗಗಳ ಅಭಿವೃದ್ಧಿ ಬಗ್ಗೆ ಗಮನ ಹರಿಸಿದಂತಿಲ್ಲ.ಬೈಂದೂರು ವಿಧಾನಸಭಾ ಕ್ಷೇತ್ರ ಮಲೆನಾಡು ಹಾಗೂ ಕರಾವಳಿ ಭಾಗದ ವ್ಯಾಪ್ತಿ ಒಳಗೊಂಡಿರುವುದರಿಂದ ಅಭಿವೃದ್ಧಿ ಕಾಮಗಾರಿ ಅನುದಾನ ವಿಂಗಡಿಸುವುದು ಸವಾಲಿನ ಕೆಲಸ ವಾದರೂ ಮಲೆನಾಡ ಮಗ್ಗಲಲ್ಲಿರುವ ಹಳ್ಳಿಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಸದ್ಯದ ಮಟ್ಟಿಗೆ ಮಧ್ದೋಡಿ, ಕಡೆR, ತೂದಳ್ಳಿ ರಸ್ತೆಗಳ ಬಗ್ಗೆ ಆದ್ಯತೆ ನೀಡಬೇಕು. ಬೈಂದೂರಿನ ಅಭಿವೃದ್ಧಿಗೆ ಗ್ರಾಮೀಣ ಭಾಗದ ಜನರ ಕೊಡುಗೆ ಅಪಾರವಾಗಿದೆ. ಇಲ್ಲಿನ ಬಹುತೇಕ ವ್ಯಾಪಾರ, ವಾಣಿಜ್ಯ, ಶಿಕ್ಷಣ ಸಂಸ್ಥೆಗಳಿಗೆ ಬರುವ ಬಹುತೇಕ ಜನರು ಮಲೆನಾಡು ವ್ಯಾಪ್ತಿಯವರಾಗಿದ್ದಾರೆ.

ಗ್ರಾಮಾಭಿವೃದ್ಧಿಗೆ ವ್ಯವಸ್ಥಿತ ಯೋಜನೆ
ಬೈಂದೂರಿನ ಭವಿಷ್ಯದ ಹಿತದೃಷ್ಟಿಯಿಂದ ಅಭಿವೃದ್ಧಿ ಕನಸು.ಸಾಕಾರಗೊಳ್ಳಬೇಕಾದರೆ ವ್ಯವಸ್ಥಿತವಾದ ಯೋಜನೆ ಸಿದ್ಧಗೊಳಿಸ ಬೇಕಾಗಿದೆ. ಮಾತ್ರವಲ್ಲದೆ ಪಟ್ಟಣದ ಅಭಿವೃದ್ಧಿ ಜತೆಗೆ ಗ್ರಾಮೀಣ ಜನರ ಆವಶ್ಯಕತೆಯಾದ ಕೃಷಿ ಸಂಶೋಧನ ಕೇಂದ್ರ, ಕೃಷಿ ಮಾರುಕಟ್ಟೆ ಸ್ಥಾಪನೆಯಾಗಬೇಕು.ರಾಜಕೀಯ ಹೊರತು ಪಡಿಸಿ ಪರಸ್ಪರ ವಿಶ್ವಾಸದಿಂದ ಸಲಹೆ ಪಡೆದು ಯೋಜನೆ ರೂಪಿಸಬೇಕಾದ ಅವಶ್ಯ ಕತೆಯಿದೆ. ಮುಖ್ಯವಾಗಿ ಹಳ್ಳಿಗಳಲ್ಲಿ ರುವ ಸಣ್ಣಪುಟ್ಟ ತೊರೆಗಳಿಗೆ ಕಿಂಡಿ ಆಣೆಕಟ್ಟು ರಚಿಸಬೇಕು.ಭವಿಷ್ಯದ ದೃಷ್ಟಿಕೋನದಿಂದ ಪ್ರಯತ್ನಿಸಿದಾಗ ಮಾತ್ರ ಮಣಿಪಾಲದಂತಹ ಪ್ರದೇಶ ಜಾಗತಿಕ ಮಟ್ಟದಲ್ಲಿ ಗುರುತಿಸಿದ ಸಾಧನೆಯಂತೆ ಇಚ್ಚಾಶಕ್ತಿಯಿಂದ ಕಾರ್ಯ ಪ್ರವ್ರತ್ತರಾಗಬೇಕಿದೆ.

ಮುಖ್ಯರಸ್ತೆಗಳಿಗೆ ಪ್ರಮುಖ ಆದ್ಯತೆ
ಬೈಂದೂರು ಕ್ಷೇತ್ರದಲ್ಲಿ ಗ್ರಾಮೀಣ ಭಾಗದಲ್ಲಿ ನೂರು ಕೋಟಿಗೂ ಅಧಿಕ ಅನುದಾನ ವಿನಿಯೋಗಿಸಲಾಗಿದೆ. ಒಂದೂವರೆ ವರ್ಷಗಳ ಅವಧಿಯಲ್ಲಿ ಮೊದಲಿಗೆ ಮುಖ್ಯರಸ್ತೆಗಳ ಬಗ್ಗೆ ಆದ್ಯತೆ ನೀಡಲಾಗಿದೆ. ಸ್ಥಳೀಯ ನಾಯಕರ ಶಿಫಾರಸುಗಳಿಗೆ ಪ್ರಾಧಾನ್ಯ ನೀಡಲಾಗಿದೆ. ಮುಂದಿನ ದಿನದಲ್ಲಿ ಪ್ರತಿ ಹಳ್ಳಿಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಅಲ್ಲಿನ ಸ್ಥಳೀಯರ ಆವಶ್ಯಕತೆ ಹಾಗೂ ಬೇಡಿಕೆ ಆಧಾರದ ಮೇಲೆ ಗ್ರಾಮೀಣ ಭಾಗದ ಅಭಿವೃದ್ಧಿ ಮಾಡಲಾಗುವುದು.
– ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು

Advertisement

ನಿರ್ಮಾಣವಾಗಬೇಕಿದೆ
ತೋಕ್ತಿ ಸೇತುವೆ
ಯಡ್ತರೆ -ಬೈಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುತೇಕ ಕಡೆಗಳಲ್ಲಿ ಸೇತುವೆ, ವೆಂಟೆಡ್‌ ಡ್ಯಾಮ್‌ ನಿರ್ಮಾಣವಾಗಬೇಕಿದೆ. ಸರಕಾರಿ ಜಲಪೂರಣ, ಪರಿಸರ ರಕ್ಷಣೆ ಕುರಿತು ವಿಶೇಷ ಆಸಕ್ತಿ ವಹಿಸಿದೆ.ಆದರೆ ಬೈಂದೂರು ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಹರಿಯುವ ನೂರಾರು ತೊರೆಗಳಿಗೆ ಕನಿಷ್ಠ ಪಕ್ಷ ಸಣ್ಣ ಪುಟ್ಟ ವೆಂಟೆಡ್‌ ಡ್ಯಾಮ್‌ ನಿರ್ಮಿಸಿದರೆ ಗ್ರಾಮೀಣ ಭಾಗದ ಜನರಿಗೆ ನೀರಿನ ಬವಣೆ ನೀಗುತ್ತದೆ. ಮುಖ್ಯವಾಗಿ ಒಳ ರಸ್ತೆಗಳ ಮೂಲಕ ಸಂಪರ್ಕ ಬೆಸೆಯುವ ಕೆಲವು ಊರುಗಳಿಗೆ ಮಳೆಗಾಲದಲ್ಲಿ ಹತ್ತಾರು ಕಿ.ಮೀ. ಸುತ್ತಿ ಬಳಸಿ ಬರಬೇಕಾಗಿದೆ. ಕುಂಜಳ್ಳಿ ಸೇತುವೆ ಅನುದಾನ ಬಿಡುಗಡೆಯಾದ ಮಾಹಿತಿಯಿದೆ. ಆದರೆ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ.

-ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next