ಪ್ರವಾಸ ಹೋಗಲಿಕ್ಕಿದೆ ಅಂತ ಹೇಳಿದರೆ ಸಾಕು; ಯಾವ ಸ್ಥಳಕ್ಕೆ, ಎಷ್ಟು ದಿನ, ಎಷ್ಟು ಖರ್ಚು ಅಂತ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳೂ ತಲೆಕೆಡಿಸಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ. ನಮ್ಮ ಕಾಲೇಜಿನಲ್ಲೂ “ಪ್ರವಾಸ’ಕ್ಕೆ ಹೋಗಲಿಕ್ಕಿದೆ ಅಂತ ತೀರ್ಮಾನ ಮಾಡಿದ ಮೇಲೆ, ಒಂದಷ್ಟು ಚರ್ಚೆಗಳಾದ ಮೇಲೆ ದೆಹಲಿ, ಜೈಪುರ, ಆಗ್ರಾಗಳಿಗೆ ಪ್ರವಾಸ ಹೋಗುವುದು ಅಂತ ತೀರ್ಮಾನಕ್ಕೆ ಬರಲಾಯಿತು. ಅದೂ ನನ್ನ ಕನಸಿನಂಥ ಊರಿಗೆ ಪಯಣ ಬೆಳೆಸುವ ಪ್ರವಾಸ ಅಂದ್ರೆ ಕೇಳಬೇಕೆ? ಅಲ್ಲಿ ಏನೆಲ್ಲಾ ನೋಡೋಕಿದೆ, ಯಾವಾಗ ಹೊರಡೋದು ಹೀಗೆ ಉಪನ್ಯಾಸಕರ ತಲೆ ತಿನ್ನುವುದಕ್ಕೆ ಶುರು ಮಾಡಿದೆವು.
ಮೊದಲೇ ಇವೆಲ್ಲಾ ಸೂಪರ್ ಆಗಿರೋ ಸ್ಥಳಗಳು. ನಮ್ಮ ಕಾಟ ತಡೆಯಲಾರದೆ ಪ್ರಾಧ್ಯಾಪಕರು ಒಂದಷ್ಟು ಸ್ಥಳಗಳ ಪಟ್ಟಿ ಕೊಟ್ಟರು. ಅದರಲ್ಲಿ ಆಗ್ರಾದ ತಾಜ್‌ಮಹಲ್ ಕೂಡ ಇದ್ದದ್ದನ್ನು ನೋಡಿ ನಮಗಂತೂ ತುಂಬಾ ಖುಷಿ. “ರೈಲಿನಲ್ಲಿ ಎರಡು ದಿನದ ಪ್ರಯಾಣವಿದೆ’ ಎಂದು ಹೇಳಿದಾಗ ಸ್ವಲ್ಪ ತಲೆಬಿಸಿ ಆಯಿತು. ಆದರೆ, ಅದನ್ನೆಲ್ಲ ಬದಿಗಿಟ್ಟು ಪ್ರವಾಸದ ದಿನ ಬರೋವರೆಗೂ ಕನಸು ಕಾಣುತ್ತಾ ಕೂತೆವು.
ಅಂತೂ ಇಂತೂ ಪ್ರವಾಸದ ದಿನ ಬಂದೇ ಬಿಟ್ಟಿತು. ಗಂಟುಮೂಟೆ ಎಲ್ಲಾ ಹಿಡ್ಕೊಂಡು ನಾವು ರೈಲಿನಲ್ಲಿ ಹೊರಟೆವು. “ಹೇಗಪ್ಪಾ ರೈಲಿನಲ್ಲಿ ಎರಡು ದಿನ ಪ್ರಯಾಣ ಮಾಡೋದು ಅಂತ ಅಂದುಕೊಂಡಿದ್ದ ನಾವು ರೈಲಿನಲ್ಲಿ ಕೂತು ಒಂದಷ್ಟು ದೂರ ಹೋದ ಮೇಲೆ ಗೊತ್ತಾದದ್ದು ರೈಲಿನ ಪ್ರಯಾಣ ಎಷ್ಟು ಮಜಾ ಕೊಡುತ್ತದೆ ಅಂತ! ಸುಂದರ ಪರಿಸರ, ಸುರಂಗ ಮಾರ್ಗಗಳು, ಬೆಟ್ಟಗುಡ್ಡಗಳು… ಹೀಗೆ ಇವೆಲ್ಲವನ್ನು ನೋಡುವ ಸದವಕಾಶ ರೈಲಿನಲ್ಲಿ ಪ್ರಯಾಣ ಮಾಡುವಾಗ ಮಾತ್ರ ಸಿಗುವಂತಹ ಅಪೂರ್ವವಾದ ದೃಶ್ಯಗಳು.
ಪ್ರಕೃತಿಯ ಒಳಹೊಕ್ಕು ಪ್ರಯಾಣ ಬೆಳೆಸುವ ಅನುಭವ ಸಿಗುವುದರಲ್ಲಿ ಎರಡು ಮಾತಿಲ್ಲ. ಹೀಗೆ ಒಂದೆರಡು ದಿನದ ರೈಲಿನ ಪ್ರಯಾಣ ಮುಗಿದು ಹೊಟೇಲ್‌ನತ್ತ ನಮ್ಮ ಪ್ರಯಾಣ ಸಾಗಿತು. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ನಂತರ ದೆಹಲಿಯತ್ತ ನಮ್ಮ ಪಯಣ ಆರಂಭವಾಯಿತು. ದೆಹಲಿಯ ಕೆಂಪುಕೋಟೆ, ಇಂಡಿಯಾಗೇಟ್, ಕುತುಬ್‌ಮಿನಾರ್‌ನಂತಹ ಅಪರೂಪದ ಸ್ಥಳಗಳನ್ನು ನೋಡಿ ನಮಗೆ ಅಚ್ಚರಿಯುಂಟಾಯಿತು. ಮಾರನೆಯ ದಿನ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಆಗ್ರಾದ ತಾಜ್‌ಮಹಲ್‌ನ್ನು ನೋಡಿ ಕಣ್ಣುಗಳಿಗೆ ಹಬ್ಬವುಂಟಾಯಿತು. ಮನಸ್ಸಿಗೆ ರೋಮಾಂಚನವೂ ಆಯಿತು. ಅಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ತಾಜ್‌ಮಹಲ್‌ನ ಸೌಂದರ್ಯವನ್ನು ಸವಿದುಕೊಂಡು, ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಹೊರಟೆವು. “ಬಂದೂ ಆಯಿತು. ಹೋಗಿಯೂ ಆಯಿತು’ ಎಂಬಂತೆ ಕೊನೆಯ ದಿನ ಜೈಪುರದಲ್ಲಿರುವ ಅರಮನೆಯನ್ನು ನೋಡಿದೆವು.
“ಪ್ರವಾಸ’ ಅನ್ನುವುದು ಕೇವಲ ಸ್ಥಳಗಳ ಭೇಟಿಯಲ್ಲ. ಸ್ನೇಹದ ಕೊಂಡಿಯನ್ನು ಇನ್ನಷ್ಟು ಬಿಗಿಗೊಳಿಸುವ, ಅಪೂರ್ವ ಕ್ಷಣವನ್ನು ಸೃಷ್ಟಿಸುವ, ಸಂತೋಷದ ಸವಿ ಪಯಣ.
ವಾಣಿ ಕಿನ್ನಿಗೋಳಿ
ಸರಕಾರಿ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು