Advertisement
ಸಮಾನ ಮನಸ್ಕ ಗೆಳೆಯರ ತಂಡವಿದ್ದರೆ ಪ್ರವಾಸ, ಚಾರಣ ಮಾಡುವತ್ತ ಆಸಕ್ತಿ ಮೂಡುತ್ತದೆ. ಅಂತಹ ಒಂದು ಸುಂದರ ಅನುಭವ ನೀಡಿದ್ದು ಗಡಾಯಿಕಲ್ಲು ಚಾರಣ.
Related Articles
Advertisement
ಆದರೂ ನನ್ನ ತುಡಿತ ಮುಂದುವರಿದಿತ್ತು. ತರಗತಿಯ ವಾಟ್ಸಪ್ ಗ್ರೂಪ್‌ನಲ್ಲಿ ಮಾಹಿತಿ ನೀಡಿ ಆಸಕ್ತರು ಸೇರಿಕೊಳ್ಳುವ ಅವಕಾಶ ನೀಡಿದೆವು. ಗ್ರೂಪ್‌ನಲ್ಲಿ ಚರ್ಚಿಸಿ ಮಳೆಗಾಲವಾದ ಕಾರಣ ಈಗ ಬೇಡ ಬೇಸಗೆಯಲ್ಲಿ ಹೋಗೋಣವೆಂದು ತೀರ್ಮಾನವಾಯಿತು. ಆದರೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದರಿಂದ ಬೇಸಗೆಯ ಚಾರಣದ ಬಗ್ಗೆ ಯಾರಿಗೂ ನೆನೆಪಿರಲಿಲ್ಲ.
ಕಾಲೇಜಿನ ದ್ವಿತೀಯ ವರ್ಷದ ಸಂದರ್ಭ ಚಾರಣದ ಆಸೆ ಮತ್ತೆ ಚಿಗುರೊಡೆಯಿತು. ಕೊನೆಗೂ ಒಂದು ಶನಿವಾರ ಗಡಾಯಿಕಲ್ಲನ್ನು ಏರುವುದೆಂದು ತೀರ್ಮಾನವಾಗಿ ಎಲ್ಲರೂ ಬೆಳಗ್ಗೆ 8.45ಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸೇರುವುದೆಂದು ನಿಶ್ಚಯವಾಯಿತು. ಕೆಲವರು ಕೊನೆ ಕ್ಷಣದಲ್ಲಿ ಕೈಕೊಟ್ಟರೆ ಒಂದಷ್ಟು ಮಂದಿ ಒಲ್ಲದ ಮನಸ್ಸಿನಿಂದ ಬಂದರು. ಸ್ನೇಹಿತರೆಲ್ಲ ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಆಗಮಿಸಿದ್ದರೆ ಚಾರಣದ ಪ್ರಮುಖ ರೂವಾರಿಯ ಪತ್ತೆಯೇ ಇಲ್ಲ. ಮೊಬೈಲ್‌ಗೆ ಕರೆ ಮಾಡಿದರೆ ಬರುತ್ತಿದ್ದೇನೆ ಎಂಬ ಉತ್ತರ. ಒಂದು ಗಂಟೆ ತಡವಾಗಿ ನಮ್ಮನ್ನು ಸೇರಿಕೊಂಡಾಗ ಬಸ್ ಹೊರಟುಹೋಗಿತ್ತು. ಹಾಗಾಗಿ ಬೇರೆ ವಾಹನದಲ್ಲಿ ನಮ್ಮ ಪಯಣ ಆರಂಭವಾಯಿತು.
ತಿನಿಸು, ನೀರು, ತಂಪು ಪಾನೀಯಗಳನ್ನು ಹತ್ತಿರದ ಹೊಟೇಲ್‌ನಲ್ಲಿ ಖರೀದಿಸಿ ಗುಡ್ಡವೇರಲು ಸಜ್ಜಾದೆವು. ಆರಂಭದಲ್ಲಿದ್ದ ಉತ್ಸಾಹ ಹದಿನೈದು ನಿಮಿಷದಲ್ಲಿ ಕಡಿಮೆಯಾಗತೊಡಗಿತು. ಬಿಸಿಲಿನ ಬೇಗೆಯನ್ನು ತಡೆಯಲು ಕೆಲವರು ಛತ್ರಿಯ ಸಹಾಯ ಪಡೆದರೆ, ಇನ್ನು ಕೆಲವರು ಹತ್ತುತ್ತ ಮರ ಇರುವಲ್ಲಿ ವಿಶ್ರಾಂತಿ ಪಡೆಯುತ್ತ ಮುಂದುವರಿದೆವು. ಪ್ರವಾಸಕ್ಕೆಂದು ಬಂದಿದ್ದ ಹಲವು ವಿದ್ಯಾರ್ಥಿಗಳು ಗಡಾಯಿಕಲ್ಲನ್ನು ಹತ್ತಿ ಇಳಿಯುತ್ತಿರುವುದನ್ನೂ, ಅವರ ಉತ್ಸಾಹವನ್ನೂ ನೋಡಿ ಅವರ ಮುಂದೆ ನಾವು ಕೂಡ ಕಡಿಮೆಯೇನು ಇಲ್ಲ ಎಂಬುದನ್ನು ತೋರ್ಪಡಿಸಲು ತಮಾಷೆ ಮಾಡುತ್ತ ನಮ್ಮ ಯಾನ ಮುಂದುವರಿಸಿದೆವು.
ಗಡಾಯಿಕಲ್ಲನ್ನು ನೋಡದ, ಇತಿಹಾಸದ ಅರಿವಿರದವರೂ ಆ ಚಮತ್ಕಾರದ ಬಗ್ಗೆ ಆಶ್ಚರ್ಯಪಡದೆ ಇರಲಾರರು. ಅಷ್ಟೊಂದು ಎತ್ತರದಲ್ಲಿ ಕಟ್ಟಿದ ಕೆಲವು ಜೀರ್ಣಾವಸ್ಥೆಯ ಕಟ್ಟಡಗಳು, ಪ್ರಪಾತವನ್ನೇ ಮರೆಮಾಡುವ ತಡೆಗೋಡೆಗಳು, ಅದರ ಮಧ್ಯೆ ಇರುವ ಕಿಂಡಿಗಳು, ಬಂಡೆಕಲ್ಲುಗಳನ್ನೇ ಕೆತ್ತಿ ಮಾಡಿರುವ ಕಡಿದಾದ ಮೆಟ್ಟಿಲುಗಳನ್ನು ಗಮನಿಸಿದರೆ ನಿಜಕ್ಕೂ ಅಂದಿನ ಕಾರ್ಮಿಕರ ಶ್ರಮ, ಪ್ರಾವಿಣ್ಯತೆಯ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಮುರಿದು ಬಿದ್ದಿರುವ ಅಲುಗಾಡಿಸಲಾಗದ ಫಿರಂಗಿ ನೋಡಿ, ಅದನ್ನು ಅಷ್ಟು ಮೇಲೆ ಹೇಗೆ ತಂದರೆಂಬ ಪ್ರಶ್ನೆ ನಮ್ಮನ್ನು ಕಾಡಿ, ಒಂದಷ್ಟು ಚರ್ಚೆ ನಮ್ಮೊಳಗೆ ನಡೆಯಿತು. ಬಿರು ಬೇಸಗೆಯಲ್ಲೂ ತುಂಬಿದ್ದ ಕೆರೆಯಂತೂ ಮನೋಹರವಾಗಿತ್ತು.
ಮರೆಯಲಾಗದ ಅನುಭವಒಂದಷ್ಟು ಅಭಿವೃದ್ಧಿ , ಮೂಲಭೂತ ಸೌಕರ್ಯಗಳನ್ನು ಗಡಾಯಿಕಲ್ಲು ಬಯಸುತ್ತಿರುವುದಂತೂ ಸತ್ಯ. ನರಸಿಂಹಗಢದ ಚಾರಣ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಮರೆಯಲಾಗದ ಅನುಭವವೇ ಸರಿ. ಗಡಾಯಿಕಲ್ಲಿನ ತುದಿಯವರೆಗೆ ತಲುಪಿ, ಬೆವರಿದ ಮುಖಗಳ ಸೆಲ್ಫಿ ಹಾಗೂ ಫೋಟೋ ತೆಗೆದು ಮೆಲ್ಲನೆ ಇಳಿದೆವು. ಚಾರಣದಿಂದ ಎರಡು ದಿನ ಕಾಲು ನೋವಿದ್ದರೂ ನೆನಪುಗಳ ಬುತ್ತಿಯೊಳಗಣ ಮಧುರ ಅನುಭವವಾಗಿದೆ.