ತಿರುವನಂತಪುರ: ಕೇರಳದ ಕೆಲವು ದೇಗುಲಗಳ ಆಡಳಿತ ನೇತೃತ್ವ ವಹಿಸಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಶೀಘ್ರದಲ್ಲಿಯೇ 500 ಕೆಜಿ ಚಿನ್ನವನ್ನು ಆರ್‌ಬಿಐನಲ್ಲಿ ಠೇವಣಿಯಾಗಿ ಇರಿಸಲಿದೆ.
ಇದರಿಂದಾಗಿ ಪ್ರತಿ ವರ್ಷ ಮಂಡಳಿಗೆ 5 ಕೋಟಿ ರೂ. ಬಡ್ಡಿ ಸಿಗಲಿದೆ. ಚಿನ್ನ ನಗದೀಕರಣ ಯೋಜನೆಯ ಅನ್ವಯ ಈ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಎನ್.ವಾಸು ತಿಳಿಸಿದ್ದಾರೆ.
ಟಿಡಿಬಿ ವ್ಯಾಪ್ತಿಯಲ್ಲಿ 1,200 ದೇಗುಲಗಳು ಇವೆ. ಸದ್ಯ ಅಲ್ಲಿ ಇರುವ ಆಭರಣಗಳ ಲೆಕ್ಕಾಚಾರ ಮುಕ್ತಾಯವಾಗಿದೆ. ಸದ್ಯ ಸೋಂಕಿನಿಂದಾಗಿ ದೇವರೊಲಿದ ರಾಜ್ಯದ ದೇವಾಲಯಗಳಿಗೆ ಆದಾಯ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಪ್ರತಿ ತಿಂಗಳೂ, ಸಂಬಳ, ಆಡಳಿತಾತ್ಮಕ ವೆಚ್ಚ ಸೇರಿದಂತೆ 40-45 ಲಕ್ಷ ರೂ. ಬೇಕಾಗುತ್ತದೆ. ಆದಾಯ ತಗ್ಗಿರುವುದರಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ, ಆ ಮೊತ್ತ ನೀಡುವಂತೆ ಕೇಳಬೇಕಾಗಿದೆ.
ಇದನ್ನೂ ಓದಿ:ಮುರಿದು ಬಿದ್ದ ಪುತ್ರನ ದಾಂಪತ್ಯ | ಭಾವುಕರಾದ ನಟ ನಾಗಾರ್ಜುನ್
ಚಿನ್ನವನ್ನು ಠೇವಣಿಯಾಗಿ ಇರಿಸುವುದರಿಂದ ಬರುವ ಆದಾಯ ವಿತ್ತೀಯ ಸಮಸ್ಯೆಯನ್ನು ತಗ್ಗಿಸಲಿದೆ. ಈಗಾಗಲೇ ಕೆಲವು ವೆಚ್ಚ ತಗ್ಗಿಸುವ ಮೂಲಕ ಆದಾಯ ಹೆಚ್ಚಾಗುವಂತೆ ಮಾಡಲಾಗಿದೆ. ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿ ಚಿನ್ನ ಠೇವಣಿ ಇರಿಸುವುದರ ಬಗ್ಗೆ ಅನುಮತಿ ಕೋರಲಿದ್ದೇವೆ. ದೇವರ ಆಭರಣಗಳು ಎಂದು ಪರಿಗಣಿಸಿರುವುದನ್ನು ಠೇವಣಿಗಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ಠೇವಣಿಯಾಗಿ ಇರಿಸಿದ್ದಕ್ಕೆ ಆರ್‌ಬಿಐ ಶೇ.2.5ರಂತೆ ಬಡ್ಡಿ ನೀಡುತ್ತದೆ ಎಂದು ಎನ್.ವಾಸು ತಿಳಿಸಿದ್ದಾರೆ.