Advertisement
ದಸರಾ ರಜೆಯ ಹಿನ್ನೆಲೆಯಲ್ಲಿ ಕರಾವಳಿಯ ದೇಗುಲಗಳು, ಪ್ರವಾಸಿ ತಾಣಗಳಿಗೆ ಬರುವವರ ಸಂಖ್ಯೆ ಹೆಚ್ಚಿದ್ದು, ಹಾಗೆಯೇ ತ್ರಾಸಿ – ಮರವಂತೆ ಕಡಲ ಕಿನಾರೆಯಲ್ಲೂ ಪ್ರವಾಸಿಗರ ದಂಡೇ ಕಂಡು ಬರುತ್ತಿದೆ. ನವರಾತ್ರಿಗೂ ಮೊದಲು ಅಷ್ಟೊಂದು ಸಂಖ್ಯೆಯ ಪ್ರವಾಸಿಗರು ಇರಲಿಲ್ಲ. ಈಗ ತುಸು ಹೆಚ್ಚಿನ ಸಂಖ್ಯೆಯ ಜನ ಕಂಡು ಬರುತ್ತಿದ್ದಾರೆ.
ಹೆದ್ದಾರಿಯಲ್ಲಿ ಸಂಚರಿಸುವ ಸಾಕಷ್ಟು ಜನ ಪ್ರವಾಸಿಗರು ಇಲ್ಲಿ ಕೆಲ ಹೊತ್ತು ವಾಹನ ನಿಲ್ಲಿಸಿ, ವಿಹರಿಸಿ ತೆರಳುತ್ತಿದ್ದಾರೆ. ಆದರೆ ನಿರಂತರ ಮಳೆಯಾಗುತ್ತಿರುವುದರಿಂದ ಈಗಲೂ ಕಲ್ಲು ಬಂಡೆಗಳು ಪಾಚಿಗಟ್ಟಿ ಜಾರುತ್ತಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಇದಲ್ಲದೆ ಇನ್ನು ಕೆಲವರು ನೀರಿಗಿಳಿದು ಮೋಜಿ, ಮಸ್ತಿಯಲ್ಲಿ ತೊಡಗುತ್ತಿರುವುದು ಕಂಡು ಬಂದಿದ್ದು, ಇಲ್ಲಿನ ಕಡಲ ತೀರದಲ್ಲಿ ಜಾಸ್ತಿ ಆಳ ಇರುವುದರಿಂದ ಅಲೆಗಳು ಅಪ್ಪಳಿಸಿದರೆ ಅಪಾಯ. ಎಚ್ಚರಿಕೆ ಫಲಕ ಹಾಕಿದರೂ, ಅಪಾಯದ ಗಡಿ ದಾಟದಂತೆ ಕೆಂಪು ರಿಬ್ಬನ್ ಅಳವಡಿಸಿದ್ದರೂ, ಅದಕ್ಕೆ ಬೆಲೆ ನೀಡುತ್ತಿಲ್ಲ. ಆದ್ದರಿಂದ ಪ್ರವಾಸಿಗರು ನಿರ್ಲಕ್ಷ್ಯ ವಹಿಸದೇ, ಆದಷ್ಟು ಎಚ್ಚರಿಕೆಯಿಂದ ಇರಬೇಕಾದುದು ಅತ್ಯಗತ್ಯ.
Related Articles
ತ್ರಾಸಿಯ ಕಡಲ ಕಿನಾರೆಯಲ್ಲಿ ಕಳೆದ ವರ್ಷದಿಂದ ವಿವಿಧ ರೀತಿಯ ವಾಟರ್ ಗೇಮ್ಸ್ ಗಳನ್ನು ಆರಂಭಿಸಲಾಗಿದ್ದು, ಮಳೆಗಾಲದಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಅಕ್ಟೋಬರ್ ಮೊದಲ ವಾರದಿಂದ ಮತ್ತೆ ಆರಂಭಗೊಂಡಿದೆ. ಬೋಟಿಂಗ್, ಮರಳುಗಾಡಿನ ಬೈಕ್ ಸಹಿತ ವಿವಿಧ ಮೋಜು ಮಸ್ತಿಯ ಆಟಗಳು ಇಲ್ಲಿದ್ದು, ಸಂಜೆಯ ವೇಳೆ ಹೆಚ್ಚಿನ ಪ್ರವಾಸಿಗರು ಆಗಮಿಸಿ, ಆಟೋಟಗಳಲ್ಲಿ ಭಾಗಿಯಾಗುತ್ತಿರುವುದು ಕಂಡು ಬರುತ್ತಿದೆ.
Advertisement