ಗುರುಮಠಕಲ್: ಪಟ್ಟಣದ ಹೊರವಲಯದ ಖಾಸಾ ಮಠದ ಮಾರ್ಗದಲ್ಲಿರುವ ಚಂಡರಕಿ ರಸ್ತೆ ತಿರುವಿನ ಮುಖ್ಯ ರಸ್ತೆಯಲ್ಲೇ ಕಸದ ರಾಶಿ ಇದ್ದು ದಾರಿಹೋಕರು ದುರ್ನಾತದಿಂದ ಬೇಸತ್ತಿದ್ದಾರೆ. ಹಂದಿ-ನಾಯಿಗಳು ಕಸ ಎಳೆದಾಡುವುದರಿಂದ ರಸ್ತೆ ತುಂಬೆಲ್ಲ ಹರಡುತ್ತಿದೆ. ಈ ಕುರಿತು ಹಲವು ಬಾರಿ ಪುರಸಭೆಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಖಾಸಾಮಠಕ್ಕೆ ಹೋಗುವ ಭಕ್ತರಿಗೆ ಕಸದ ರಾಶಿ ದರ್ಶನವಾಗುತ್ತದೆ. ಹೀಗಾಗಿ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚಂಡರಕಿ ರಸ್ತೆ ತಿರುವಿನಲ್ಲಿ ವಾಹನಗಳು ಕಸದ ರಾಶಿಯಲ್ಲೇ ಸಂಚಾರಿಸಬೇಕಾಗಿದೆ. ಇದರಿಂದ ವಾಹನಗಳು ಸ್ಕೀಡ್ ಆಗಿರುವ ಅನೇಕ ನಿದರ್ಶನಗಳಿವೆ.
ಮತ್ತೊಂದೆಡೆ ದುರ್ನಾತದಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇಲ್ಲಿನ ನಿವಾಸಿಗಳಿದ್ದಾರೆ. ಪುರಸಭೆ ತ್ಯಾಜ್ಯ ವಿಲೇವಾರಿ ವಾಹನಗಳೇ ಇಲ್ಲಿ ಕಸದ ರಾಶಿ ಹಾಕುತ್ತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ವಿಲೇವಾರಿಗಾಗಿ ಚಂಡರಕಿ ರಸ್ತೆಯಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ಜಾಗ ಮೀಸಲಿಟ್ಟಿದ್ದಾರೆ. ಆದರೆ ಚಂಡರಕಿ ರಸ್ತೆ ತಿರುವಿನಲ್ಲಿಯೇ ಕಸದ ರಾಶಿ ಹಾಕುತ್ತಿದ್ದು ಸ್ವತ್ಛತೆಗೆ ಆದ್ಯತೆ ಇಲ್ಲದಂತಾಗಿದೆ. ಇನ್ನು ಕೆಲವು ಸಂದರ್ಭದಲ್ಲಿ ಕಸ ಸುಡುತ್ತಿರುವುದರಿಂದ ಅದರ ಕಾರ್ಬನ್ ಡೈ ಆಕ್ಸೈಡ್ ಜನರ ಜೀವ ಹಿಂಡುತ್ತಿದೆ. ಆದ್ದರಿಂದ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಪಟ್ಟಣದ ನಿವಾಸಿಗಳು ಮನೆ ಕಸ ಹಾಕುತ್ತಿದ್ದಾರೆ. ತಿರುವಿನಲ್ಲಿ ತಗ್ಗು ಇರುವುದರಿಂದ ಕಸ ಹಾಕುತ್ತಿದ್ದು, ಈ ಕುರಿತು ಅರಿವು ಮೂಡಿಸುತ್ತೇವೆ. ನಾನು ಈಗ ಅಧಿಕಾರ ವಹಿಸಿಕೊಂಡಿದ್ದೇನೆ. ಮುಂದೆ ಸೂಕ್ತ ಕ್ರಮ ವಹಿಸಲಾಗುವುದು.
-ಲಕ್ಷ್ಮೀಬಾಯಿ, ಪುರಸಭೆ ಮುಖ್ಯಾಧಿಕಾರಿ, ಗುರುಮಠಕಲ್
ಕಸದ ರಾಶಿಯಿಂದ ವಾಹನ ಪ್ರಯಾಣಿಕರು ಸ್ಕೀಡ್ ಆಗಿ ಬೀಳುತ್ತಿದ್ದಾರೆ. ದುರ್ವಾಸನೆಯಲ್ಲಿ ಮಠದ ಭಕ್ತರು ಮತ್ತು ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ. ಪುರಸಭೆ ಸ್ವಚ್ಛತೆಗೆ ಆದ್ಯತೆ ನೀಡದಿದ್ದಲ್ಲಿ ಮುತ್ತಿಗೆ ಹಾಕಿ ಲಾಗುವುದು.
-ಯಲ್ಲಪ್ಪ ಯಾದವ್, ತಾಲೂಕು ಗೊಲ್ಲ ಸಮಾಜ ಅಧ್ಯಕ್ಷ, ಗುರುಮಠಕಲ್.