ಮೈಸೂರು: ಪೌರಕಾರ್ಮಿಕರು ಬೇಡಿಕೆಗಳ ಈಡೇರಿಗಾಗಿ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟಿಸುತ್ತಿದ್ದು, ನಗರದೆಲ್ಲೆಡೆ ಅಶುಚಿತ್ವ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಯೇ ಸ್ವಚ್ಛತಾ ಕಾರ್ಯಕ್ಕಿಳಿದಿದ್ದಾರೆ.
ನಗರದ ಹೃದಯಭಾಗ ಕೆ.ಆರ್.ವೃತ್ತ, ಶಿವರಾಂಪೇಟೆ, ಅಗ್ರಹಾರ, ದೇವರಾಜ ಮಾರುಕಟ್ಟೆ, ಎಂ.ಜಿ.ರಸ್ತೆ, ವಾಣಿವಿಲಾಸ ಮಾರುಕಟ್ಟೆ, ಚಾಮರಾಜ ಮೊಹಲ್ಲಾ, ದೇವರಾಜ ಮೊಹಲ್ಲಾ, ಉದಯಗಿರಿ ಸೇರಿದಂತೆ ಹಲವೆಡೆ ಕಸದರಾಶಿ ತಾಂಡವವಾಡುತ್ತಿತ್ತು.
ಹಾಗಾಗಿ ನಗರ ಪಾಲಿಕೆ ಸಿಬ್ಬಂದಿ ಬೆಳ್ಳಂಬೆಳಗ್ಗೆ ಬೀಗಿದಿಳಿದು ಸ್ವತಃ ಸ್ವಚ್ಛತಾ ಕಾರ್ಯ ಕೈಗೊಂಡರು. ನಗರದ ಸಯ್ನಾಜಿರಾವ್ ರಸ್ತೆಯಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ನಡೆಸಿದ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ನಗರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಮುಷ್ಕರ ಮುಂದೂಡಿಕೆ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿರುವ ಅರ್ನಿದಿಷ್ಟಾವಧಿ ಮುಷ್ಕರ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸಮಸ್ಯೆ ಇತ್ಯರ್ಥಗೊಳ್ಳುವವರೆಗೆ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಮಂದುವರಿಸುವುದಾಗಿ ಪೌರಕಾರ್ಮಿಕರು ಪಟ್ಟು ಹಿಡಿದು ಮೈಸೂರು ಪೌರಕಾರ್ಮಿಕರು, ನಗರಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ನಗರ ಪಾಲಿಕೆ ಕಚೇರಿ ಎದುರು ಮುಷ್ಕರ ಕುಳಿತಿದ್ದಾರೆ.
ಪ್ರತಿಭಟನಾನಿರತರನ್ನು ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಭೇಟಿ ಮಾಡಿ, ಅ.5ರವರೆಗೆ ಕಾಲಾವಕಾಶ ನೀಡಿದರೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅದಕ್ಕೆ ಒಪ್ಪದ ಪೌರಕಾರ್ಮಿಕರು, ತಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಮತ್ತು ಸ್ಥಳಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.
ಬೇಡಿಕೆಗಳು
-ಸರ್ಕಾರ ಗುತ್ತಿಗೆ ಪೌರಕಾರ್ಮಿಕ ಪದ್ಧತಿ ರದ್ದುಗೊಳಿಸಬೇಕು.
-ಪ್ರತಿ 500 ಜನಕ್ಕೆ ಒಬ್ಬರಂತೆ ಪೌರಕಾರ್ಮಿಕರನ್ನು ನೇಮಿಸಬೇಕು.
-ಬೆಳಗಿನ ಉಪಹಾರ ಯೋಜನೆ ಜಾರಿಗೊಳಿಸಿ, ತಿಂಗಳಿಗೆ 600 ರೂ. ಹಣ ನೀಡಬೇಕು.
-ಪೌರಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಶೇ.20ರಷ್ಟು ಹಣ ಮೀಸಲಿಡಬೇಕು.
-ಬಿಬಿಎಂಪಿ ಮಾದರಿಯಲ್ಲಿ ಅಂಬೇಡ್ಕರ್ ಜಯಂತಿ ವೇಳೆ 20 ಸಾವಿರ ರೂ. ಬೋನಸ್ ನೀಡಬೇಕು.
-ಹಬ್ಬದ ಸಂದರ್ಭದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ವರ್ಷಕ್ಕೆ 30 ದಿನಗಳ ವೇತನ ನೀಡಬೇಕು.
ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ದರಿಂದ ನಗರದಲ್ಲಿ ನೈರ್ಮಲ್ಯ ಉಂಟಾಗಿದೆ. ಸರ್ಕಾರ ಶೀಘ್ರ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ ನಮಗಿದೆ. ಪೌರಕಾರ್ಮಿಕರು ಶೀಘ್ರ ಅವರ ಕರ್ತವ್ಯಕ್ಕೆ ಮರಳಲಿದ್ದಾರೆಂಬ ನಿರೀಕ್ಷೆಯಲ್ಲಿದ್ದೇವೆ. ಅವರು ಕರ್ತವ್ಯಕ್ಕೆ ಹಾಜರಾಗದ ಕಾರಣ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದೇವೆ.