Advertisement

ಹುಲಿ, ಚಿರತೆಗಳ ಉಗುರು- ಚರ್ಮ ಮಾರುತ್ತಿದ್ದ ನಾಲ್ವರು ಅರಣ್ಯಾಧಿಕಾರಿಗಳ ಬಲೆಗೆ

03:16 PM Aug 21, 2020 | keerthan |

ಹನೂರು(ಚಾಮರಾಜನಗರ): ಹುಲಿ ಮತ್ತು ಚಿರತೆಯ ಉಗುರುಗಳು, ಹುಲಿಯ ದೇಹದ ಮೂಳೆ ಸೇರಿದಂತೆ ಹಲವು ವನ್ಯಜೀವಿಗಳ ಚರ್ಮಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ 4 ಜನರನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

Advertisement

ತಾಲೂಕಿನ ನೆಲ್ಲಿಕತ್ತರಿ ಗ್ರಾಮದ ಮಹದೇವ (28), ಕುಮಾರ (20), ಗೊಂಬೆಗಲ್ಲು ಪೋಡಿನ ಮಹದೇವ (22), ರಂಗಸ್ವಾಮಿ (23) ಎಂಬುವರನ್ನು ಬಂಧಿಸಲಾಗಿದೆ. ಈ ನಾಲ್ವರು ವನ್ಯಜೀವಿಗಳ ಮೂಳೆ, ಉಗುರು, ಚರ್ಮಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ಗಣೇಶ ಹಬ್ಬದ ಹಿನ್ನೆಲೆ ಹಣಕ್ಕಾಗಿ ಅವುಗಳನ್ನು ಮಾರಾಟ ಮಾಡಲು ಖರೀದಿದಾರರನ್ನು ಹುಡುಕಲು ಯತ್ನಿಸುತ್ತಿದ್ದರು.

ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖಾ ಅಧಿಕಾರಿಗಳು ಡಿಎಫ್‍ಓ ಏಡುಕೊಂಡಲು ಮಾರ್ಗದರ್ಶನದಲ್ಲಿ ವಿವಿಧ ತಂಡಗಳಾಗಿ ಕಾರ್ಯಾಚರಣೆ ನಡೆಸಿ 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ವಿವಿಧ ಪ್ರಾಣಿಗಳ ಚರ್ಮ, ಮೂಳೆ ಮತ್ತು ಕೃತ್ಯಕ್ಕಾಗಿ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಿ.ಜಿ.ಪಾಳ್ಯ ವನ್ಯಜೀವಿ ವಲಯ ಅರಣ್ಯಮೊಕದ್ದಮೆ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಏನೇನು ವಶಪಡಿಸಿಕೊಳ್ಳಲಾಗಿದೆ: ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿರುವ ನಾಲ್ವರಿಂದ ನಾಲ್ಕು ಹುಲಿ ಉಗುರು, ಒಂದು ಹುಲಿಯ ದೇಹದ ಮೂಳೆಗಳು, ಚಿರತೆಯ ಎರಡು ಉಗುರುಗಳು, ಜಿಂಕೆಯ ಎರಡು ಚರ್ಮ, ಕಾಡುಕುರಿಯ ಎರಡು ಚರ್ಮ, ಹಾರುವ ಅಳಿಲಿನ ಎರಡು ಚರ್ಮ, ಸೀಳು ನಾಯಿಯ ಚರ್ಮ ಹಾಗೂ ಮೂಳೆಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ: ಡಿಕೆ ಶಿವಕುಮಾರ್ ಗಂಭೀರ ಆರೋಪ

Advertisement

ಗುಂಡಾಲ್ ಜಲಾಶಯ ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು ಕೆಲ ವನ್ಯಜೀವಿಗಳ ಮೂಳೆ, ಚರ್ಮಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಖರೀದಿದಾರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬುದಾಗಿ ಸಣ್ಣ ಮಾಹಿತಿ ದೊರೆತಿತ್ತು. ಈ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಡಿಎಫ್‍ಓ ಏಡುಕುಂಡಲು ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ಕಾವೇರಿ ವನ್ಯಜೀವಿ ವಲಯದ ಎಸಿಎಫ್ ಅಂಕರಾಜು, ಆರ್ಎಫ್‍ಓಗಳಾದ ಸೈಯದ್ ಸಾಬ್ ನಧಾಫ್, ಕೆ.ಶಿವರಾಂ, ಅರುಣ್ ಕುಮಾರ್ ಅಷ್ಟಗಿ, ವಿನಯ್ ಕುಮಾರ್, ಪ್ರವೀಣ್‍ಕುಮಾರ್, ಮಹದೇವಯ್ಯ ಹಾಗೂ ಕಾವೇರಿ ವನ್ಯಜೀವಿ ವಲಯ, ಮಲೆ ಮಹದೇಶ್ವರ ವನ್ಯಜೀವಿ ವಲಯ ಮತ್ತು ಬಿಆರ್‍ಟಿ ವಲಯಗಳ ಮುಂಚೂಣಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next