Advertisement

ಹುಬ್ಬಳ್ಳಿ: ಮಹಿಳಾ ಉದ್ಯೋಗಿಗಳಿಗೆ ಸಾರಿಗೆ ಸಂಕಷ್ಟ

08:29 PM May 05, 2021 | Team Udayavani |

ವರದಿ: ಹೇಮರಡ್ಡಿ ಸೈದಾಪುರ

Advertisement

ಹುಬ್ಬಳ್ಳಿ: ದಿನ ಕಳೆದಂತೆ ಕೊರೊನಾ ಕರ್ಫ್ಯೂ ಬಿಗಿಯಾಗುತ್ತಿದ್ದು, ಸಾರಿಗೆ ಬಸ್‌, ಆಟೋ ರಿಕ್ಷಾಗಳನ್ನು ನಂಬಿಕೊಂಡಿದ್ದ ಅಗತ್ಯ ಸೇವೆಗಳ ಕರ್ತವ್ಯದಲ್ಲಿರುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ಸಂಚಾರದ ಸಮಸ್ಯೆ ಎದುರಾಗುತ್ತಿದೆ. ಈ ಸಾರಿಗೆ ಸಂಕಷ್ಟದ ಬಿಸಿ ಕೊರೊನಾ ವಾರಿಯರ್‌ಗಳನ್ನು ಬಿಟ್ಟಿಲ್ಲ. ಅತೀ ಹೆಚ್ಚಾಗಿ ಮಹಿಳಾ ಸಿಬ್ಬಂದಿ ಈ ಸಮಸ್ಯೆ ಅನುಭವಿಸುತ್ತಿದ್ದಾರೆ.

ಅವಳಿ ನಗರದ ನಡುವೆ ಸಂಚರಿಸುವ ವಿವಿಧ ಇಲಾಖೆಗಳ, ಬ್ಯಾಂಕ್‌, ಖಾಸಗಿ ಕಂಪನಿಗಳ ಉದ್ಯೋಗಿಗಳು ಸಾರಿಗೆ ಸಂಸ್ಥೆಯ ಬಸ್‌ ಗಳನ್ನೇ ನೆಚ್ಚಿಕೊಂಡಿದ್ದಾರೆ. ಇನ್ನೂ ಬಿಆರ್‌ ಟಿಎಸ್‌ ಚಿಗರಿ ಸೇವೆ ಆರಂಭವಾದ ನಂತರ ಸಮೂಹ ಸಾರಿಗೆಯನ್ನು ಒಪ್ಪಿದ್ದಾರೆ. ಆದರೀಗ ಕೋವಿಡ್‌ ಸಂದರ್ಭದಲ್ಲಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿರುವ ಪರಿಣಾಮ ಬಹುತೇಕ ಸಿಬ್ಬಂದಿ ತಮ್ಮ ಖಾಸಗಿ ವಾಹನಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ತಮ್ಮ ಸ್ವಂತ ವಾಹನಗಳು ಇಲ್ಲದ, ಬೈಕ್‌ ಚಾಲನೆ ಮಾಡಲು ಬಾರದವರು, ನಿತ್ಯ ಆಟೋ ರಿಕ್ಷಾಗಳ ಮೇಲೆ ಅವಲಂಬನೆಯಾದ ಸಿಬ್ಬಂದಿ, ಕಚೇರಿ-ಮನೆಗೆ ಓಡಾಡುವುದು ಕಷ್ಟವಾಗಿದ್ದು, ಹೆಚ್ಚಾಗಿ ಮಹಿಳಾ ಸಿಬ್ಬಂದಿ ಈ ಸಮಸ್ಯೆ ಎದುರಿಸುವಂತಾಗಿದೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಕೆಲ ಇಲಾಖೆಗಳ ಸಿಬ್ಬಂದಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಕೆಲ ಇಲಾಖೆಗಳಲ್ಲಿ ಶೇ.50 ಸಿಬ್ಬಂದಿ ಬಳಸಿಕೊಳ್ಳಲು ಸರಕಾರ ಸೂಚಿಸಿದೆ. ಆದರೆ ಅಗತ್ಯ ಸೇವೆಯಡಿ ಬರುವ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ. ಪ್ರಮುಖವಾಗಿ ಆರೋಗ್ಯ ಇಲಾಖೆ ವೈದ್ಯಕೀಯ ಶಿಕ್ಷಣ, ಪೊಲೀಸ್‌, ಕಂದಾಯ ಇಲಾಖೆ ಸಿಬ್ಬಂದಿಯನ್ನು ಕೊರೊನಾ ವಾರಿಯರ್‌ಗಳು ಎಂದು ಯಾವುದೇ ವಿನಾಯಿತಿ ನೀಡಿಲ್ಲ. ಇದರೊಂದಿಗೆ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಇಂಧನ, ಪಶು ಸಂಗೋಪನೆ, ಕೃಷಿ, ಕಾರ್ಮಿಕ, ತೋಟಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ಇತರೆ ಕೆಲ ಇಲಾಖೆಯಲ್ಲಿ ಶೇ.50 ಸಿಬ್ಬಂದಿಗೆ ಬಳಕೆಗೆ ಅವಕಾಶ ನೀಡಲಾಗಿದೆ.

ಅವಳಿ ನಗರ ಸಂಚಾರ ಕಷ್ಟ: ದ್ವಿಚಕ್ರ ವಾಹನ ಚಾಲನೆ ಮಾಡದ ಸ್ಥಳೀಯ ಸಿಬ್ಬಂದಿ ನಡೆದುಕೊಂಡೇ ಕಚೇರಿಗಳಿಗೆ ಆಗಮಿಸುತ್ತಿದ್ದಾರೆ. ಇನ್ನೂ ಕೆಲವರು ಮನೆ ಮಂದಿ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಸಿಬ್ಬಂದಿಗೆ ದೊಡ್ಡ ಸಂಕಷ್ಟವಾಗಿದೆ. ನಗರದ ನಡುವೆ ಯಾವುದೇ ಸಂಚಾರ ವ್ಯವಸ್ಥೆಯಿಲ್ಲದ ಕಾರಣ ಅವರಿವರ ಬೈಕ್‌, ಕಾರುಗಳನ್ನು ಹತ್ತಿಕೊಂಡು ಹೋಗುವಂತಾಗಿದೆ. ಸೋಂಕಿನ ಭಯದಿಂದ ಅಪರಿಚಿತರನ್ನು ಹತ್ತಿಸಿಕೊಳ್ಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕರ್ಫ್ಯೂ ಬಿಗಿ: ದಿನ ಕಳೆದಂತೆ ಕರ್ಫ್ಯೂ ಮಹಾನಗರದಲ್ಲಿ ಬಿಗಿಯಾಗುತ್ತಿದೆ. ಪೊಲೀಸರು ಸರಕಾರದ ಮಾರ್ಗಸೂಚಿ ಪ್ರಕಾರ ಆರೋಗ್ಯ, ಟಿಕೆಟ್‌ ಇದ್ದರೆ ನಿಲ್ದಾಣದಿಂದ ಮನೆಗೆ ಮಾತ್ರ ಆಟೋ ರಿûಾಗಳಿಗೆ ಅವಕಾಶ ನೀಡುತ್ತಿದ್ದಾರೆ. ಈ ಕಾರ್ಯಗಳಿಗೆ ಹೊರತುಪಡಿಸಿ ರಸ್ತೆಗಿಳಿದ ಆಟೋ ರಿಕ್ಷಾಗಳನ್ನು ಜಪ್ತಿ ಮಾಡುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಆಟೋ ರಿಕ್ಷಾಗಳ ಮೇಲೆ ಅವಲಂಬನೆಯಾಗಿದ್ದ ಸಿಬ್ಬಂದಿ ಪರಿಸ್ಥಿತಿ ತ್ರಿಶಂಕುವಿನಂತಾಗಿದೆ. ಇನ್ನು ಮನೆಯ ಸದಸ್ಯರನ್ನು ಕಚೇರಿ ಬಿಟ್ಟು ಬರುತ್ತಿದ್ದೇನೆ ಎನ್ನುವ ಸಬೂಬಿಗೂ ಪೊಲೀಸರು ಕ್ಯಾರೇ ಎನ್ನದೇ ವಾಹನಗಳನ್ನು ಜಪ್ತಿ ಮಾಡಿ ದಂಡ ಹಾಕುತ್ತಿದ್ದಾರೆ ಕೆಲವರ ದುರ್ಬಳಕೆ: ಆರಂಭದಲ್ಲಿ ಅಗತ್ಯ ಕಾರ್ಯಗಳಿಗೆ ಪೊಲೀಸರು ಆಟೋ ರಿಕ್ಷಾಗಳಿಗೆ ತೊಂದರೆ ಮಾಡಿರಲಿಲ್ಲ. ಕಚೇರಿ ಬಿಟ್ಟು ವಾಪಸ್ಸಾಗುವಾಗ ಪೊಲೀಸರಿಗೆ ತೋರಿಸಲು ಕೆಲ ಸಿಬ್ಬಂದಿ ವಿಶ್ವಾಸದ ಮೇಲೆ ಗುರುತಿನ ಚೀಟಿಯ ಝರಾಕ್ಸ್‌ ಪ್ರತಿ ನೀಡಿದ್ದರು. ಆದರೆ ಕೆಲ ಆಟೋ ಚಾಲಕರು ಇದನ್ನು ದುರ್ಬಳಕೆ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಂಚೆ ಇಲಾಖೆಯ ಮಹಿಳಾ ಸಿಬ್ಬಂದಿ ಸಂಚರಿಸುತ್ತಿದ್ದ ಆಟೋ ರಿಕ್ಷಾವೊಂದನ್ನು ಸಿಬ್ಬಂದಿ ಜತೆಗೆ ಠಾಣೆಗೆ ಕರೆದುಕೊಂಡು ಹೋಗಿರುವ ಘಟನೆಯೂ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next