ಹುಬ್ಬಳ್ಳಿ: ಶ್ರಮಿಕ ವರ್ಗಕ್ಕೆ ಸರ್ಕಾರ ಘೋಷಿಸಿದ್ದ ಉಚಿತ ಬಸ್ ಪಾಸ್ ಯೋಜನೆ ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲೇ ಅತೀ ಹೆಚ್ಚು ಫಲಾನುಭವಿಗಳಿಗೆ ತಲುಪಿದೆ. ಸರ್ಕಾರ ಘೋಷಿಸಿದ್ದ 1 ಲಕ್ಷ ಬಸ್ ಪಾಸ್‌ಗಳ ಪೈಕಿ ಶೇ.54ರಷ್ಟು ಸಂಸ್ಥೆಯ ವ್ಯಾಪ್ತಿಯ 6 ಜಿಲ್ಲೆಗಳ ಕಾರ್ಮಿಕರ ಪಾಲಾಗಿದ್ದು, ಸದ್ಯಕ್ಕೆ ಪಾಸ್ ವಿತರಣೆ ಸ್ಥಗಿತಗೊಳಿಸಿದ್ದರೂ ಕಟ್ಟಡ ಕಾರ್ಮಿಕರಿಂದ ಬೇಡಿಕೆ ಹೆಚ್ಚುತ್ತಿದೆ.
ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ನಿತ್ಯದ ಕೆಲಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಉಚಿತ ಬಸ್‌ಪಾಸ್ ಘೋಷಿಸಿತ್ತು. ಇದರಿಂದ ಶ್ರಮಿಕ ವರ್ಗ ಕ್ಷೇಮವಲ್ಲದ ವಾಹನಗಳಲ್ಲಿ ಸಂಚರಿಸುವ ಬದಲು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ 1 ಲಕ್ಷ ಬಸ್ ಪಾಸ್ ವಿತರಿಸಿದೆ. ಇವುಗಳ ಪೈಕಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ಬಸ್ ಪಾಸ್‌ಗಳು ವಿತರಣೆಯಾಗಿವೆ. ಶೇ.54 ಬಸ್ ಪಾಸ್‌ಗಳು ಕೇವಲ 6 ಜಿಲ್ಲೆಗಳಲ್ಲಿ ವಿತರಣೆಯಾಗಿದೆ.
ಯಾವ ಸಂಸ್ಥೆಯಲ್ಲಿ ಎಷ್ಟು?: ಇದೀಗ ವಿತರಿಸಿರುವ ಒಂದು ಲಕ್ಷ ಬಸ್‌ಪಾಸ್‌ಗಳಲ್ಲಿ 54,150 ಪಾಸ್‌ಗಳು ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಲ್ಲಿ ಪಡೆದಿದ್ದಾರೆ. ಇನ್ನು 17 ಜಿಲ್ಲೆಗಳ ವ್ಯಾಪ್ತಿಯಲ್ಲಿನ ಕೆಎಸ್‌ಆರ್‌ಟಿಸಿಯಲ್ಲಿ 29,190 ಪಾಸ್ ಗಳು ವಿತರಣೆಯಾಗಿವೆ. ಇನ್ನೂ ಕಕರಸಾ ಸಂಸ್ಥೆಯ ವ್ಯಾಪ್ತಿಯ ಲ್ಲಿನ 7 ಜಿಲ್ಲೆಗಳಲ್ಲಿ 16,662 ಪಾಸ್‌ಗಳು ವಿತರಣೆಯಾಗಿವೆ.
ಮೂರು ತಿಂಗಳಿಗೊಮ್ಮೆ ಆದಾಯ: ಒಂದು ಲಕ್ಷ ಪಾಸ್‌ಗಳನ್ನು ಮೂರು ತಿಂಗಳ ಅವಧಿಗೆ ವಿತರಿಸಿರುವ ಮೂರು ಸಂಸ್ಥೆಗಳಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ 42 ಕೋಟಿ ರೂ. ಪಾವತಿ ಸಲಾಗಿದೆ. ಇದರಲ್ಲಿ ವಾಯವ್ಯ ಸಾರಿಗೆ ಸಂಸ್ಥೆಗೆ 22.74 ಕೋಟಿ ರೂ. ಬಂದಿದೆ. ಕೆಎಸ್‌ಆರ್‌ಟಿಸಿಗೆ 12.25 ಕೋಟಿ ರೂ., ಕಕರಸಾ ಸಂಸ್ಥೆಗೆ 6.99 ಕೋಟಿ ರೂ. ಸಾರಿಗೆ ಆದಾಯವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರಕಾರ ಈ ಪಾಸ್‌ಗೆ ತಗಲುವ ವೆಚ್ಚ ವನ್ನು ತಪ್ಪದೆ ಪಾವತಿಸಿದರೆ ಸಂಸ್ಥೆಗಳಿಗೆ ಸಾಕಷ್ಟು ನೆರವಾಗಲಿದ್ದು, ವಿದ್ಯಾರ್ಥಿಗಳ ರಿಯಾಯಿತಿ ಪಾಸ್ ಮೊತ್ತದಂತೆ ಪಾವತಿ ಪರಿ ಗಣಿಸಿದರೆ ಸಂಸ್ಥೆಗಳಿಗೆ ಮತ್ತಷ್ಟು ಹೊರೆಯಾಗಲಿದೆ.
ಅಧಿಕಾರಿಗಳ ವಿಶೇಷ ಪ್ರಯತ್ನ: ಈ ಯೋಜನೆ ನಷ್ಟದಲ್ಲಿರುವ ಸಂಸ್ಥೆಗೆ ಒಂದಿಷ್ಟು ಆರ್ಥಿಕವಾಗಿ ಆಧಾರವಾಗಲಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಭರತ ವಿಶೇಷ ಗಮನಹರಿಸಿ ಸಂಸ್ಥೆ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ದೊರೆಯುವ ನಿಟ್ಟಿನ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಉಚಿತ ಬಸ್ ಪಾಸ್ ವಿತರಣೆ ಹಾಗೂ ಪಡೆಯುವ ಬಗ್ಗೆ ಪಾಲಿಕೆ, ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡುವ ಆಟೋ ಟಿಪ್ಪರ್‌ಗಳಲ್ಲಿ ಧ್ವನಿ ಮುದ್ರಿಕೆ ಮೂಲಕ ಜಾಗೃತಿ ಮೂಡಿಸುವುದು, ಬಸ್ ನಿಲ್ದಾಣಗಳಲ್ಲಿ ಭಿತ್ತಿಪತ್ರ, ಕಟ್ಟಡ ಕಾರ್ಮಿಕರ ಸಂಘದ ಪ್ರಮುಖರಿಗೆ ಮಾಹಿತಿ ನೀಡುವುದು ಸೇರಿ ಹಲವು ಕಸರತ್ತು ಗಳನ್ನು ಮಾಡಿದ ಪರಿಣಾಮ ಶೇ.54 ಹೆಚ್ಚು ಬಸ್ ಪಾಸ್‌ಗಳು ಕೇವಲ ಆರು ಜಿಲ್ಲೆಗಳ ಕಾರ್ಮಿಕರಿಗೆ ತಲುಪಲು ಸಾಧ್ಯವಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳ ನೆರವು ಮರೆಯುವಂತಿಲ್ಲ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿ ಎಚ್.ರಾಮನಗೌಡರ.
ಪಾಸ್‌ಗಾಗಿ ಹೆಚ್ಚುತ್ತಿದೆ ಬೇಡಿಕೆ
ರಾಜ್ಯದಲ್ಲಿ ಸುಮಾರು 30 ಲಕ್ಷ ಕಟ್ಟಡ ಕಾರ್ಮಿಕರಿದ್ದು, ಇದೀಗ ಒಂದು ಲಕ್ಷ ಕಾರ್ಮಿಕರಿಗೆ ಪಾಸ್ ಸೌಲಭ್ಯ ದೊರೆತಿದೆ. 45 ಕಿಮೀ ಅಂತರದಲ್ಲಿ ನಿರ್ದಿಷ್ಟ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಂದು ಮಾರ್ಗದಲ್ಲಿ ಸಂಚಾರ ಮಾಡಬಹುದಾಗಿದೆ. ಗ್ರಾಮೀಣ ಭಾಗದಿಂದ ನಗರಕ್ಕೆ ಭಾಗಕ್ಕೆ ಬರುವ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಇಲ್ಲದಿದ್ದರೆ ಬಸ್ ಅಥವಾ ಇತರೆ ಸಾರಿಗೆಗಾಗಿ ನಿತ್ಯ 100-150 ರೂ. ಖರ್ಚು ಮಾಡಬೇಕಿತ್ತು. ಇದೀಗ ಆ ಹಣ ಉಳಿಯುತ್ತದೆ.
30 ಲಕ್ಷ ಕಾರ್ಮಿಕರಲ್ಲಿ ಒಂದು ಲಕ್ಷ ಕಾರ್ಮಿಕರಿಗೆ ನೀಡಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಸರ್ಕಾರ ಮಾಡಿದೆ. ಸರಕಾರದ ಸೌಲಭ್ಯದಾಸೆಗೆ ಕಾರ್ಮಿಕರಲ್ಲ ದವರು ನೋಂದಾಯಿಸಿದ್ದು, ಈ ಸೌಲಭ್ಯಗಳು ಇಂತಹವರ ಪಾಲಾಗುತ್ತಿರುವುದರಿಂದ ಅರ್ಹರು ವಂಚಿತರಾಗುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಪರಿಶೀಲಿಸಿ ಉಳಿದ ಅರ್ಹ ಕಟ್ಟಡ ಕಾರ್ಮಿಕರಿಗೆ ಪಾಸ್ ವಿತರಿಸಬೇಕು. ●
ದುರಗಪ್ಪ ಚಿಕ್ಕತುಂಬಳ, ಅಧ್ಯಕ್ಷ, ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ
ಯೋಜನೆ ಕುರಿತು ಸಂಸ್ಥೆ ಅಧಿಕಾರಿಗಳು ಪ್ರಚಾರ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಸಂಸ್ಥೆಯ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದ ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗಿದೆ. ●
ಎಸ್.ಭರತ, ವ್ಯವಸ್ಥಾಪಕ ನಿರ್ದೇಶಕರು, ವಾಕರಸಾ ಸಂಸ್ಥೆ
●ಹೇಮರಡ್ಡಿ ಸೈದಾಪುರ