ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜು.16 ರಂದು ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಸರ್ಕಾರ ಮಾತ್ರ ತಮ್ಮ ಅಧೀನದಲ್ಲಿರುವ ಬೇರೆ ನಿಗಮ ಇಲಾಖೆ ಹಾಗೂ ಸರ್ಕಾರಿ ನೌಕರರಿಗೆ ಕೊಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಸರ್ಕಾರದ ಅಣತಿಯಂತೆ ನಡೆಯುತ್ತಿರುವ ಸಾರಿಗೆ ನೌಕರರಿಗೆ ಮಾತ್ರ ತಾರತಮ್ಯ ಮಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ 1.25 ಲಕ್ಷ ನೌಕರರು ಕಾರ್ಯ ನಿವರ್ಹಸುತ್ತಿದ್ದು, ಅವರ ವೇತನ ಇತರ ಸರ್ಕಾರಿ ನೌಕರರ ವೇತನಕ್ಕಿಂತ ಶೇ.35ರಷ್ಟು ಕಡಿಮೆಯಿದೆ. ವರ್ಗಾವಣೆ ಸೌಲಭ್ಯ ಇಲ್ಲ. ಆರೋಗ್ಯ ಭಾಗ್ಯ ಯೋಜನೆ ಇಲ್ಲ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿ ಇರುವವರು ಮರಣ ಹೊಂದಿದರೆ 30 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ಆದರೆ ಸಾರಿಗೆ ನೌಕರರು ಮರಣಹೊಂದಿದರೆ 3 ಲಕ್ಷ ರೂ. ಮಾತ್ರ ನೀಡಲಾಗುತ್ತದೆ. ಈ ತಾರತಮ್ಯವನ್ನು ಹೋಗಲಾಡಿಸಬೇಕು. ಪಿಂಚಣಿ ಮೊತ್ತವನ್ನು ಹೆಚ್ಚಳ ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪರಿಣಿತರ ಸಮಿತಿಯನ್ನು ರಚಿಸಿ 3 ತಿಂಗಳ ಒಳಗೆ ಈಡೇರಿಸಬೇಕು ಒತ್ತಾಯಿಸಿದರು.
ರೈಲ್ವೆ ಇಲಾಖೆ ಹಾಗೂ ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಮಾಡಿ, ಕನ್ನಡಿಗರಿಗೆ ಉದ್ಯೋಗ ಅವಕಾಶ ನೀಡುವಂತೆ ಸರ್ಕಾರದ ಗಮನ ಸೆಳೆಯಲು ಜು.15ರಂದು ಮೈಸೂರು ಬ್ಯಾಂಕ್‌ನಿಂದ ಮೆಜೆಸ್ಟಿಕ್‌ವರೆಗೆ ರಸ್ತೆ ಬಂದ್ ಮಾಡಲಾಗುವುದು.
ಹಂತಹಂತವಗಿ ರಕ್ತದಾನ ಚಳವಳಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ, ಸಾರಿಗೆ ಮುಷ್ಕರ ಮುಂತಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಹಾಗೂ ಜು.12ರಂದು ಸಾರಿಗೆ ನೌಕರರು ತೋಳಿಗೆ ಕಪ್ಪು ಪಟ್ಟಿಕೊಂಡು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.