Advertisement

ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ

03:41 PM Feb 02, 2020 | Suhan S |

ಕಾರವಾರ: ರಾಜ್ಯದ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಅಖೀಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಕಾರವಾರ ಶಾಖೆ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಅಖೀಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಮತ್ತು ರಾಜ್ಯ ಸಾರಿಗೆ ನೌಕರರ ಕೂಟ, ಪ.ಜಾ, ಪಂಗಡ ಸಂಘದ ನೌಕರರು ಹಾಗೂ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಮಿಕರು ಪಾಲ್ಗೊಂಡಿದ್ದರು. ನಗರದ ಬಸ್‌ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳಿಗೆ ತೆರಳಿ ಡಿಸಿ ಕಚೇರಿ ಬಳಿ ಸಮಾವೇಶಗೊಂಡಿತು. ಅಲ್ಲಿ ಕೆಎಸ್‌ಆರ್‌ಟಿಸಿ ಮಹಾಮಂಡಳದ ಕೆ.ಆರ್‌. ಮುಕುಂದನ್‌ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಾಲ್ಕು ನಿಗಮಗಳಿದ್ದು, ಅದರಲ್ಲಿ 1.25 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರು ರಾತ್ರಿ ಹಗಲು ಎನ್ನದೇ ದುಡಿಯುತ್ತಾರೆ. ಸರಿಯಾದ ಸಮಯಕ್ಕೆ ಊಟ ಉಪಚಾರ ಸಹ ಸಿಗುವುದಿಲ್ಲ. ಸಮಯಕ್ಕೆ ಸರಿಯಾಗಿ ನಿದ್ದೆ, ವಿಶ್ರಾಂತಿ ಇಲ್ಲದೇ, ಮಳೆ, ಗಾಳಿ ಎನ್ನದೇ ನೌಕರರು ದುಡಿಯುತ್ತಿದ್ದಾರೆ. ಈ ಸಂಸ್ಥೆ ದೇಶದಲ್ಲೇ

ಅತ್ಯುತ್ತಮ ಸಂಸ್ಥೆಯೆಂದು ಹೆಸರು ಮಾಡುವ ಮೂಲಕ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಆದರೆ ಕಾರ್ಮಿಕರ ಸಮಸ್ಯೆಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು. ಆಂಧ್ರ ಮಾದರಿಯಲ್ಲಿ ನಮ್ಮನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕೆಂದರು. ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ, ನಮ್ಮ ಹಕ್ಕು ನಮಗೆ ಕೊಡಿ ಎಂಬ ಭಿತ್ತಿ ಫಲಕ ಪ್ರದರ್ಶಿಸಿದರು. ರಾಜ್ಯದ ನಾಲ್ಕು ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡುವಂತೆ ದಶಕದಿಂದ ಹೋರಾಟಗಳು ನಡೆಯುತ್ತಿವೆ. ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಿದೆ. ರಾಜ್ಯ ಸರ್ಕಾರ ಸಹ ಇದೇ ಮಾದರಿ ಅನುಸರಿಸಬೇಕು ಎಂದು ಆಗ್ರಹಿಸಿದರು.

ಸರಕಾರ ಸಾರಿಗೆ ನೌಕರರಿಗೆ ಮಾತ್ರ ಮಲತಾಯಿ ಧೋರಣೆ ಮಾಡುತ್ತಿದೆ. ಸಾರಿಗೆ ನೌಕರರ ಬಾಳನ್ನು ಅತ್ಯಂತ ಹೀನಾಯಿ ಸ್ಥಿತಿಗೆ ತಲುಪಿಸಿದ್ದಾರೆ ಎಂದು ಆರೋಪಿಸಿದರು. ಸರಕಾರಿ ನೌಕರರ ವೇತನಕ್ಕಿಂತ ಸಾರಿಗೆ ನೌಕರ ವೇತನ ಸುಮಾರು ಶೇ.40 ರಷ್ಟು ಕಡಿಮೆ ಇದೆ. ಅದಲ್ಲದೇ ದಿನನಿತ್ಯ ಊರು ಊರು ಸುತ್ತುವ ಹಾಗೂ ಅತೀ ಒತ್ತಡದಲ್ಲಿ ಕಾರ್ಯ ನಿರ್ವಹಿಸಿ ಅತೀ ಬೇಗ ರೋಗಗಳಿಗೆ ತುತ್ತಾಗುತ್ತೇವೆ. ಆದರೆ ಸಾರಿಗೆ ನೌಕರರಿಗೆ ಸರಕಾರಿ ನೌಕರರಂತೆ ಆರೋಗ್ಯ ಭಾಗ್ಯ ಇಲ್ಲ. ಇಂತಹ ಇನ್ನೂ ಹಲವಾರು ಸೌಲಭ್ಯಗಳಿಂದ ಸಾರಿಗೆ ನೌಕರರು ವಂಚಿತರಾಗಿದ್ದಾರೆ. ಆ ಕಾರಣ ಸಾರಿಗೆ ನೌಕರಿಗೆ ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಎಲ್ಲಾ ಸರಕಾರಿ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದ್ದಾರೆ. ಮನವಿಯನ್ನು ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ ಸ್ವೀಕರಿಸಿದರು.

ಅಖೀಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾಮಂಡಳ ಅಧ್ಯಕ್ಷ ಕೆ.ಆರ್‌. ಮುಕುಂದನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಪ್ರಕಾಶಮೂರ್ತಿ, ಕಾರ್ಯದರ್ಶಿ ಜಿ.ಕೆ. ಆನಂದ, ಪ.ಜಾತಿ, ಪಂಗಡಗಳ ನೌಕರರ ಸಂಘದ ಅಧ್ಯಕ್ಷ ಎಚ್‌. ಫಕೀರಪ್ಪ, ಕಾರ್ಯದರ್ಶಿ ಎಂ.ಕೆ. ಪ್ರಧಾನಿ, ಕಾರ್ಮಿಕ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಅಧ್ಯಕ್ಷ ಎಸ್‌.ಎನ್‌. ಮರಾಠೆ, ಕಾರ್ಯದರ್ಶಿ ಮಣಿಕಂಠ ಹಾಗೂ ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next