ಬೆಂಗಳೂರು: ಸಾರಿಗೆ ಕಾರ್ಮಿಕರ 4 ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಅಖಂಡ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳಿ ನಡೆಸುತ್ತಿರುವ ಸಾಂಕೇತಿಕ ಅನಿರ್ದಿಷ್ಟಾವಧಿ ಪ್ರತಿಭಟನೆ (ಮೇ 1ಕ್ಕೆ) 160 ದಿನ ಪೂರೈಸಲಿದೆ.
ಅ.1ರಂದು ಶಾಂತಿ ನಗರದ ಸಾರಿಗೆ ಭವನದಲ್ಲಿ ಎಕೆಆರ್‌ಆರ್‌ಎಸ್ ಕಾರ್ಮಿಕರ ಮಂಡಳಿ ಸಾಂಕೇತಿಕ ಪ್ರತಿಭಟನೆ ಪ್ರಾರಂಭಿಸಿತ್ತು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯುವ್ಯ ಮತ್ತು ಈಶಾನ್ಯ ನಿಗಮಗಳಲ್ಲಿ ಕಾರ್ಮಿಕರನ್ನು ಸರ್ಕಾರಿ ಕಾರ್ಮಿಕರನ್ನು ಎಂದು ಪರಿಗಣಿಸಬೇಕು,
ಕರ್ನಾಟಕ ರಾಜ್ಯಸರ್ಕಾರ ಜಾರಿಗೊಳಿಸಿರುವ 6ನೇ ವೇತನ ಪರಿಷ್ಕರಣೆಯನ್ನು ನಾಲ್ಕೂ ನಿಗಮಗಳ ಕಾರ್ಮಿಕರಿಗೆ ವಿಸ್ತರಿಸಬೇಕು ಮತ್ತು ಕಾರ್ಮಿಕರ ಅನುಕೂಲಕ್ಕೆ ಅನುಗುಣವಾಗಿ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡಲಾಗುತ್ತಿದೆ.
ಮೇ 1ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರಿಗೆ ಕಾರ್ಮಿಕರ ಬಲಪ್ರದರ್ಶನ ನಡೆಯಲಿದೆ. ಇದರಲ್ಲಿ ಸಾವಿರಾರು ಸಾರಿಗೆ ಕಾರ್ಮಿಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ಎಕೆಆರ್‌ಆರ್‌ಎಸ್ ಕಾರ್ಮಿಕರ ಮಂಡಳಿ ತಿಳಿಸಿದೆ.
ದಂಡಕ್ಕೆ ತೀವ್ರ ವಿರೋಧ: ಬಸ್‌ನಲ್ಲಿ ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳದೆ ಇದ್ದರೆ ಅಥವಾ ಟಿಕೆಟ್ ಕಳೆದುಕೊಂಡರೆ ಕಂಡಕ್ಟರ್‌ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿರುವುದಕ್ಕೆ ಸಾರಿಗೆ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಯಾವುದೇ ರಾಜ್ಯದಲ್ಲೂ ಇಂತಹ ಪ್ರಕರಣಗಳಲ್ಲಿ ಕಂಡಕ್ಟರ್‌ಗಳಿಗೆ ದಂಡ, ಅಮಾನತು ಮತ್ತು ವರ್ಗವಣೆಯಂತ ಶಿಕ್ಷೆ ವಿಧಿಸುತ್ತಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಈ ರೀತಿ ಮಾಡಲಾಗುತ್ತಿದೆ. ಇದು ನಿಲ್ಲಬೇಕು ಎಂದು ಎಕೆಆರ್‌ಆರ್ ಎಸ್ ಕಾರ್ಮಿಕರ ಮಂಡಳಿ ಕಾರ್ಯದರ್ಶಿ ಎ.ವಿ.ಬೋರಶೆಟ್ಟಿ ಆಗ್ರಹಿಸಿದ್ದಾರೆ.