ಕೊರಟಗೆರೆ: ಆಟೋ ಚಾಲಕರು ಸಾರಿಗೆ ನಿಯಮ ಕಡ್ಡಾಯವಾಗಿ ಪಾಲಿಸಿ ಅಪಘಾತ ತಡೆಗೆ ಸಹಕರಿಸ ಬೇಕು ಎಂದು ಕೊರಟಗೆರೆ ಪಿಎಸ್ಸೆ„ ಬಿ.ಸಿ. ಮಂಜುನಾಥ ಎಚ್ಚರಿಸಿದರು. ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ಮತ್ತು ಆಟೋ ಚಾಲಕರ ಸಂಘ ಏರ್ಪಡಿಸಿದ್ದ ಸಾರಿಗೆ ನಿಯಮದ ಅರಿವು ಹಾಗೂ ಅಪಘಾತ ತಡೆಗೆ ಮುಂಜಾಗ್ರತಾ ಕ್ರಮದ ಸಭೆಯಲ್ಲಿ ಮಾತನಾಡಿ, ಅತಿವೇಗ ಮತ್ತು ಅಜಾಗರೂಕತೆ ಚಾಲನೆ ಮಾಡುವ ಆಟೋ ಚಾಲಕರ ವಿರುದ್ಧ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕಾನೂನು ಕೈಗೊಳ್ಳಲಿದೆ. ಆಟೋ ಚಲಾಯಿಸುವ ವೇಳೆ ಕಡ್ಡಾಯವಾಗಿ ಖಾಕಿ ಬಟ್ಟೆ ಧರಿಸಬೇಕು. ದಾಖಲೆಗಳು ಕ್ರಮಬದ್ಧವಾಗಿರಬೇಕು ಎಂದು ತಿಳಿಸಿದರು.
ಕಾನೂನು ಗೌರವಿಸಿದರೆ ಕಾನೂನು ನಿಮ್ಮನ್ನು ಗೌರವಿಸಲಿದೆ. ಪಟ್ಟಣದ ಆಸ್ಪತ್ರೆ, ಶಾಲಾ-ಕಾಲೇಜು ಬಳಿ ಆಟೋ ಚಾಲಕರು ಶಬ್ದಮಾಲಿನ್ಯ ಮಾಡಬಾರದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹಿಳಾ ಪಡೆ ರಚಿಸಲಾಗಿದೆ. ಅನುಚಿತ ವರ್ತನೆ ಮಾಡಿದರೆ ಕ್ಷಣಾರ್ಧದಲ್ಲಿ ಅಂತಹ ಸ್ಥಳಕ್ಕೆ ಬಂದು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕೊರಟಗೆರೆ ಆಟೋ ಚಾಲಕರ ಸಂಘದ ಅಧ್ಯಕ್ಷ ಆಟೋ ಕುಮಾರ್ ಮಾತನಾಡಿ, ಆಟೋ ಚಾಲಕರಿಗೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿಯಿದೆ. ಕುಟುಂಬದ ಜವಾಬ್ದಾರಿ ನೆನಪಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಚಾಲನೆ ಮಾಡಿ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು.
ಕಾನೂನು ಅರಿವು ಸಭೆಗೆ ಕೊರಟಗೆರೆ ಪಟ್ಟಣ, ವಡ್ಡಗೆರೆ, ಗೊರವನಹಳ್ಳಿ, ಜಿ.ನಾಗೇನಹಳ್ಳಿ, ಬುಕ್ಕಾ ಪಟ್ಟಣ, ಜಂಪೇನಹಳ್ಳಿ, ಕಾಲೋನಿ, ತಣ್ಣೇಹಳ್ಳಿ, ಬೋಡಬಂಡೇನಹಳ್ಳಿ, ತುಂಬಾಡಿ, ದಾಸರಹಳ್ಳಿ ವ್ಯಾಪ್ತಿಯ ನೂರಾರು ಆಟೋ ಚಾಲಕರು ಆಗಮಿಸಿದ್ದರು. ಸಭೆ ಮುಗಿದ ಬಳಿಕ ಆಟೋ ಚಾಲಕರ ಸಂಘದಿಂದ ಕಾನೂನಿನ ಅರಿವು ಮೂಡಿಸಿದ ಪಿಎಸ್ಸೆ„ಮಂಜುನಾಥ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪೊಲೀಸ್ ಇಲಾಖೆಯ ಮಲ್ಲಿಕಾರ್ಜುನ್, ಸದಾನಂದ, ಆಟೋ ಚಾಲಕರಾದ ಪುಟ್ಟಣ್ಣ, ಪ್ರಕಾಶ್, ರಾಮಲಿಂಗಾ, ಗೋಪಿನಾಥ್, ನಾಗರಾಜು, ಮಂಜುನಾಥ, ಶಾಂತ ಕುಮಾರ, ದೊಡ್ಡಪ್ಪ, ಮಹೇಶ, ಮಲ್ಲೇಶ್, ಮೂರ್ತಿ, ಕೃಷ್ಣಪ್ಪ, ಕಿರಣಕುಮಾರ್, ಮಲ್ಲೇಶಪ್ಪ, ಉಮೇಶ, ಗೋವಿಂದರಾಜು, ನಟರಾಜು, ಉಮಾಶಂಕರ ಸೇರಿ ನೂರಾರು ಜನ ಆಟೋ ಚಾಲಕರಿದ್ದರು.