Advertisement

ಸಂತ್ರಸ್ತರಿಗೆ ಬಿಜೆಪಿಯಿಂದ 15 ಟ್ರಕ್‌ ಸಾಮಗ್ರಿ ರವಾನೆ

12:23 PM Aug 22, 2018 | |

ಬೆಂಗಳೂರು: ಕೊಡಗಿನ ಸಂತ್ರಸ್ತ ಕುಟುಂಬಗಳಿಗೆ 15 ಟ್ರಕ್‌ಗಳಲ್ಲಿ ಅಗತ್ಯವಾದ ಆಹಾರ ಧಾನ್ಯ, ವಸ್ತುಗಳನ್ನು ಬಿಜೆಪಿ ನಗರ ಘಟಕ ಹಾಗೂ ನಗರ ಜಿಲ್ಲಾ ಘಟಕ ಮಂಗಳವಾರ ರವಾನಿಸಿತು. ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ಕೇಂದ್ರ ಸಚಿವ ಅನಂತಕುಮಾರ್‌ ಅವರು ಸಾಮಗ್ರಿ ಹೊತ್ತ ವಾಹನಗಳಿಗೆ ಹಸಿರು ನಿಶಾನೆ ತೋರಿದರು.

Advertisement

ಬಳಿಕ ಮಾತನಾಡಿದ ಅನಂತಕುಮಾರ್‌, ಆತಿಥ್ಯಕ್ಕೆ ಹೆಸರಾಗಿದ್ದ ಕೊಡಗು ಇಂದು ಸರ್ವನಾಶದ ಅಂಚಿಗೆ ತಲುಪಿದೆ. ಅಲ್ಲಿನ ಸಂತ್ರಸ್ತರಿಗೆ ಬೆಂಗಳೂರಿನ ಜನ ಪ್ರೀತಿ, ವಿಶ್ವಾಸದಿಂದ ತಮ್ಮ ಕರ್ತವ್ಯವೆಂದು ನೆರವು ನೀಡಿದ್ದಾರೆ. ಇದು ಕೊಡುಗೆಯಲ್ಲ ಕರ್ತವ್ಯ. ಈ ರೀತಿಯ ಅನಾಹುತ ಸಂಭವಿಸಿದಾಗ ಮೊದಲಿಗೆ ಜೀವ ರಕ್ಷಣೆ, ಪರಿಹಾರ ಹಾಗೂ ಪುನರ್‌ನಿರ್ಮಾಣವನ್ನು ಹಂತ ಹಂತವಾಗಿ ಕೈಗೊಳ್ಳಬೇಕು. ಅದರಂತೆ ಸದ್ಯ ಎರಡನೇ ಹಂತದಲ್ಲಿದ್ದು, ಮುಂದೆ ಪುನರ್‌ನಿರ್ಮಾಣಕ್ಕೆ ನೆರವಾಗಬೇಕಿದೆ ಎಂದು ಹೇಳಿದರು.

ವಿಶೇಷ ನೆರವಿಗೆ ಮನವಿ: ಭಾರಿ ಮಳೆಯಿಂದಾಗಿ ಕೊಡಗಿನಲ್ಲಿ ಭಾರಿ ಅನಾಹುತ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿಯಾಗಿ ವಿಶೇಷ ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ಕೊಡಗಿನಲ್ಲಿ ಹಾನಿಗೊಳಗಾದ ಮನೆ, ಗ್ರಾಮಗಳಲ್ಲಿ ನೆಲೆಸಿ ಹೊರಗೆ ಬರಲಾಗದ ಸ್ಥಿತಿಯಲ್ಲಿರುವವರಿಗೆ 15 ದಿನಕ್ಕಾಗುವಷ್ಟು ಅಗತ್ಯ ವಸ್ತುಗಳನ್ನು 15 ಟ್ರಕ್‌ಗಳಲ್ಲಿ ರವಾನಿಸಲಾಗುತ್ತಿದೆ. ಶಾಸಕ ಕೆ.ಜಿ.ಬೋಪಯ್ಯರವರ ಮನವಿಯಂತೆ ಪ್ರತ್ಯೇಕ ಕಿಟ್‌ ಸಿದ್ಧಪಡಿಸಿ ರವಾನಿಸಲಾಗುತ್ತಿದೆ.

ಕೊಡಗಿನ ಕೆಎಸ್‌ಆರ್‌ಟಿಸಿ ಗೋದಾಮಿಗೆ ವಸ್ತುಗಳನ್ನು ಸಾಗಿಸಿ ಅಲ್ಲಿಂದ 1000 ಕಾರ್ಯಕರ್ತರು ಸಂತ್ರಸ್ತ ಕುಟುಂಬಗಳಿಗೆ ರವಾನಿಸಲಿದ್ದಾರೆ. ಅಗತ್ಯ ವಸ್ತುಗಳು ಕಳುವಾಗುತ್ತಿವೆ ಎಂಬ ವರದಿಯಿದ್ದು, ಎಚ್ಚರ ವಹಿಸಲಾಗುವುದು. ನಿರಾಶ್ರಿತರ ಕೇಂದ್ರದ ಬದಲಿಗೆ ಸಂತ್ರಸ್ತರಿಗೆ ನೇರವಾಗಿ ವಸ್ತುಗಳನ್ನು ತಲುಪಿಸಲಾಗುವುದು ಎಂದು ತಿಳಿಸಿದರು.

Advertisement

ಶಾಸಕರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಎಂ.ಸತೀಶ್‌ರೆಡ್ಡಿ, ಎಂ. ಕೃಷ್ಣಪ್ಪ, ಉದಯ್‌ ಗರುಡಾಚಾರ್‌, ಲೆಹರ್‌ಸಿಂಗ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ, ಹಲವು ಕಾರ್ಪೋರೇಟರ್‌ಗಳು ಉಪಸ್ಥಿತರಿದ್ದರು.

ಎರಡು ಲಾರಿ ಜನರಿಕ್‌ ಔಷಧ: ಕೇರಳ ಹಾಗೂ ಕೊಡಗಿಗೆ ಪ್ರತ್ಯೇಕವಾಗಿ ಎರಡು ಟ್ರಕ್‌ಗಳಲ್ಲಿ ಜನರಿಕ್‌ ಔಷಧಗಳನ್ನು ಬುಧವಾರ ರವಾನಿಸಲಾಗುವುದು. ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಎಚ್‌ಐವಿ ಸೋಂಕಿತರ ಔಷಧಿ, ಮಲೇರಿಯಾ, ಹೃದಯ- ಶ್ವಾಸಕೋಶ ಸಂಬಂಧಿ ಔಷಧಗಳನ್ನು ಕೇಂದ್ರ ಸರ್ಕಾರದ ವತಿಯಿಂದ ರವಾನಿಸಲಾಗುವುದು. ಇದರ ಒಟ್ಟು ಬೆಲೆ ಒಂದು ಕೋಟಿ ರೂ. ಆಗಲಿದೆ. ಮಾರುಕಟ್ಟೆ ಬೆಲೆಗೆ ಹೋಲಿಸಿದರೆ 3 ಕೋಟಿ ರೂ. ಮೀರುತ್ತದೆ.
– ಅನಂತ ಕುಮಾರ್‌, ಕೇಂದ್ರ ಸಚಿವ

ರವಾನಿಸಿದ ಪ್ರಮುಖ ವಸ್ತುಗಳು: 10 ಕೆ.ಜಿ. ಅಕ್ಕಿ- 5000 ಬ್ಯಾಗ್‌; 25 ಕೆ.ಜಿ. ಅಕ್ಕಿ- 750 ಬ್ಯಾಗ್‌; 50 ಕೆ.ಜಿ. ಅಕ್ಕಿ- 250 ಬ್ಯಾಗ್‌; ತೊಗರಿ ಬೇಳೆ 1 ಕೆ.ಜಿ. ಪೊಟ್ಟಣ- 6000 ಬ್ಯಾಗ್‌; ತೊಗರಿ ಬೇಳೆ 50 ಕೆ.ಜಿ.- 150 ಬ್ಯಾಗ್‌. ಗೋಧಿ ಹಿಟ್ಟು 1 ಕೆ.ಜಿ.- 4000 ಬ್ಯಾಗ್‌. ಗೋಧಿ ಹಿಟ್ಟು 10 ಕೆ.ಜಿ.- 1,500 ಬ್ಯಾಗ್‌; ಒಂದು ಲೀಟರ್‌ ಅಡುಗೆ ಎಣ್ಣೆ- 9000 ಬ್ಯಾಗ್‌; ಬ್ಲಾಂಕೆಟ್‌- 2,800; ಬೆಡ್‌ಶೀಟ್‌- 1650; ಶರ್ಟು, ಪ್ಯಾಂಟ್‌, ಚೂಡಿದಾರ್‌, ಸೀರೆ, ಔಷಧ, ಕೊಡೆ, ಬಕೆಟ್‌, ಚಪ್ಪಲಿ, ಟವೆಲ್‌ ಇತರೆ- 10,000. ಜತೆಗೆ ಪೆನಾಯಿಲ್‌, ಸೊಳ್ಳೆ ಬತ್ತಿ, ಮೇಣದ ಬತ್ತಿ, ಸ್ವೆಟರ್‌, ಚಾಪೆ, ಟಾರ್ಚ್‌ ಇತರೆ.

Advertisement

Udayavani is now on Telegram. Click here to join our channel and stay updated with the latest news.

Next