ನವದೆಹಲಿ: ದೇಶಾದ್ಯಂತ ಏಕರೂಪದ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ(ಐಡಿಪಿ) ವಿತರಿಸಲು ರಾಷ್ಟ್ರೀಯ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತೀರ್ಮಾನಿಸಿದೆ.
1949ರ ಅಂತಾರಾಷ್ಟ್ರೀಯ ರಸ್ತೆ ಸಂಚಾರ ಸಮಾವೇಶ(ಜಿನಿವಾ ಸಮಾವೇಶ)ದ ಅನುಸಾರ ದೇಶಾದ್ಯಂತ ಏಕರೂಪದ ಚಾಲನಾ ಪರವಾನಗಿ ವಿತರಿಸಲಾಗುವುದು.
ಕ್ಯೂಆರ್ ಕೋಡ್ ಮೂಲಕ ಚಾಲನಾ ಪರವಾನಗಿಯೊಂದಿಗೆ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ(ಐಡಿಪಿ)ಯನ್ನು ಲಿಂಕ್ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಪ್ರಸ್ತುತ ವಿತರಿಸಲಾಗುತ್ತಿರುವ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿಯ ಸ್ವರೂಪ, ಗಾತ್ರ, ಮಾದರಿ, ಬಣ್ಣ ಇತ್ಯಾದಿಗಳು ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿವೆ. ಈ ಕಾರಣದಿಂದ ಅನೇಕ ನಾಗರಿಕರು ವಿದೇಶಗಳಲ್ಲಿ ಸಮಸ್ಯೆ ಎದುರಿಸುವಂತಾಗಿದೆ.
ನೂತನ ಅಧಿಸೂಚನೆಯ ಅನುಸಾರ ದೇಶಾದ್ಯಂತ ಏಕರೂಪದ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ ವಿತರಿಸಲಾಗುವುದು. ಇದು ಜಿನಿವಾ ಸಮಾವೇಶದ ನಿಯಮಗಳಿಗೆ ಬದ್ಧವಾಗಿದೆ. ಐಡಿಪಿ ಕುರಿತ ಮಾಹಿತಿಗಾಗಿ ಪ್ರತ್ಯೇಕ ಸಹಾಯವಾಣಿ ಮತ್ತು ಇಮೇಲ್ ವಿಳಾಸ ಕೂಡ ಕಲ್ಪಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.