Advertisement

ಸಾರಿಗೆ ಸಚಿವರ ಕಚೇರಿಯೇ ನೆಮ್ಮದಿ ಕೇಂದ್ರ​​​​​​​

12:30 AM Feb 18, 2019 | Team Udayavani |

ಬೆಂಗಳೂರು: ಕೆಲ ಸಮಯದ ಹಿಂದೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದಾರೆ ಎನ್ನುವುದು ಸುದ್ದಿಯಾಗಿತ್ತು. ಇದೀಗ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ನಿಗದಿಪಡಿಸಿರುವುದರ ದುಪ್ಪಟ್ಟು ಅಂದರೆ, 27 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಹೆಚ್ಚಿನವರು ಕೆಎಸ್‌ಆರ್‌ಟಿಸಿ  ಹಾಗೂ ಬಿಎಂಟಿಸಿಯಿಂದ ಎರವಲು ಸೇವೆ (ಒಒಡಿ) ರೂಪದಲ್ಲಿ ನಿಯೋಜನೆಗೊಂಡಿದ್ದಾರೆ.

Advertisement

ಸಚಿವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ವರ್ಚಸ್ಸು ಇರುತ್ತದೆ. ಅದರಲ್ಲಿಯೇ  ಮೂಲಕವೇ ತಮ್ಮವರ ಕೆಲಸ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ ಒಒಡಿ ಮಾಡುವವರ ಹಿಂದಿದೆ. ಇದೇ ಕಾರಣಕ್ಕಾಗಿ ಇನ್ನೂ ಕೆಲವರು ಈ “ನೆಮ್ಮದಿ ಕೇಂದ್ರ’ಕ್ಕೆ ಬರಲು ಉತ್ಸುಕರಾಗಿದ್ದಾರೆ.

ಒಂಭತ್ತು ಚಾಲಕರು, ನಾಲ್ವರು ಆಪ್ತ ಸಹಾಯಕರು, ಒಬ್ಬರು ಆಪ್ತ ಕಾರ್ಯದರ್ಶಿ, ಏಳು ಜನ ಅಟೆಂಡರ್‌ ಸೇರಿ 25ರಿಂದ 30 ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಕೆಲವರು ಸಚಿವರ ಮೂಲಕ ಮತ್ತೂಬ್ಬರ ಸಹಾಯಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸ ಸಚಿವರ ಕಚೇರಿಯಲ್ಲಿ; ಸಂಬಳ ಪಡೆಯುತ್ತಿರುವುದು ಮಾತೃಸಂಸ್ಥೆಯಿಂದ. ಎರವಲು ಸೇವೆ ಬಯಸಿ ಬರುವ ಶಿಫಾರಸುಗಳು ಸಾರಿಗೆ ನಿಗಮಗಳ ಅಧಿಕಾರಿ ವರ್ಗಕ್ಕೂ ತುಸು ಕಿರಿಕಿರಿ ಉಂಟುಮಾಡುತ್ತಿವೆ. 

“ಸಾರಿಗೆ ಸಚಿವರು ಕೆಎಸ್‌ಆರ್‌ಟಿಸಿ ಮತ್ತು ಈಶಾನ್ಯ ರಸ್ತೆ ಸಾರಿಗೆ ನಿಗಮಕ್ಕೂ ಅಧ್ಯಕ್ಷರಾಗಿರುವುದರಿಂದ ಸಹಜವಾಗಿ ಹೆಚ್ಚು ಕೆಲಸ ಇರುತ್ತದೆ. ಹಾಗಾಗಿ, ಎರವಲು ಸೇವೆ ಅಡಿ ನಿಯೋಜನೆಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿರಬಹುದು. ಆದರೆ, ಇತ್ತೀಚೆಗೆ ಇದು ಅಧಿಕವಾಗಿದೆ’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಇಷ್ಟೊಂದು ಇರಲಿಲ್ಲ:  ಈ ಹಿಂದೆ ಇದ್ದ ಸಾರಿಗೆ ಸಚಿವರಾರೂ “ಒಒಡಿ’ ರೂಪದಲ್ಲಿ ಸಿಬ್ಬಂದಿ ಪಡೆಯುತ್ತಿರಲಿಲ್ಲ ಎಂದಲ್ಲ. ಆಗಲೂ ಇದ್ದರು; ಆದರೆ ಈಗ ಆ ಸಂಖ್ಯೆ ಹೆಚ್ಚು-ಕಡಿಮೆ ದುಪ್ಪಟ್ಟಾಗಿದೆ. ಒಮ್ಮೆ ಎರವಲು ಸೇವೆಗೆ ಹೋದವರು ಆ ಸಚಿವರ ಅವಧಿ ಪೂರ್ಣಗೊಳ್ಳುವವರೆಗೂ ನಿಶ್ಚಿಂತೆಯಿಂದ ಇರುತ್ತಾರೆ. ನೋಟಿಸ್‌, ಮೇಲಧಿಕಾರಿಗಳ ಭಯ ಇದಾವುದೂ ಇರುವುದಿಲ್ಲ. ಬದಲಿಗೆ ಕೆಲವೊಮ್ಮೆ ಆ ಮೇಲಧಿಕಾರಿಯೇ ಇವರ  ಬಳಿ ಬರುವುದುಂಟು!.

Advertisement

ಈ ಮಧ್ಯೆ, ಈಗಾಗಲೇ ನಾಲ್ಕೂ ಸಾರಿಗೆ ನಿಗಮಗಳು 2016ರಿಂದ ಈಚೆಗೆ ನಿರಂತರವಾಗಿ ನಷ್ಟದಲ್ಲಿದ್ದು, ಈ ರೀತಿಯ ಎರವಲು ಸೇವೆ ತುಸು ಆರ್ಥಿಕ ಹೊರೆಗೂ ಕಾರಣವಾಗುತ್ತದೆ. ಆದರೆ, ಮತ್ತೂಂದು ದೃಷ್ಟಿಯಿಂದ ಈ ಎರವಲು ಸೇವೆಯು ಸಮನ್ವಯತೆ ಹೆಚ್ಚಲು ಅನುಕೂಲ ಆಗುತ್ತದೆ. ನಿಗಮದ ಸಿಬ್ಬಂದಿ ಸಚಿವರ ಕಚೇರಿಯಲ್ಲಿ ಕೆಲಸ ಮಾಡುವುದರಿಂದ ಸಹಜವಾಗಿಯೇ ನಿಗಮಕ್ಕೆ ಸಂಬಂಧಪಟ್ಟ ಕೆಲಸಗಳು ಸಲೀಸಾಗಿ ಮತ್ತು ತ್ವರಿತವಾಗಿ ಆಗುತ್ತವೆಂದು ಕೆಎಸ್‌ಆರ್‌ಟಿಸಿಯ ಮತ್ತೂಬ್ಬ ಅಧಿಕಾರಿ ಅಭಿಪ್ರಾಯಪಡುತ್ತಾರೆ.

ಡಿಪಿಎಆರ್‌ ನಿಯಮವೇನು?
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಪ್ರಕಾರ ಸಚಿವರ ಕಚೇರಿಯಲ್ಲಿ ಗರಿಷ್ಠ 12 ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಅವಕಾಶವಿದೆ.  ಅದರಲ್ಲಿ ಒಬ್ಬರು ಆಪ್ತ ಕಾರ್ಯದರ್ಶಿ, ನಾಲ್ವರು ಆಪ್ತ ಸಹಾಯಕರು, ಒಬ್ಬರು ಶೀಘ್ರ ಲಿಪಿಗಾರ, ನಾಲ್ವರು ದಲಾಯತರು, ಇಬ್ಬರು ಚಾಲಕರು ಹಾಗೂ ಪೊಲೀಸ್‌ ಆಯುಕ್ತರ ಕಚೇರಿಯಿಂದ ಮೂವರು ಗನ್‌ಮ್ಯಾನ್‌ಗಳು. ಇದರ ಹೊರತಾಗಿ ಸಚಿವರು ವಿವಿಧ ಇಲಾಖೆಗಳಿಂದ ಎರವಲು ರೂಪದಲ್ಲಿ ಸಿಬ್ಬಂದಿಯನ್ನು ಪಡೆಯಲು ಅವಕಾಶ ಇದೆ. ಇದಕ್ಕೆ ನಿರ್ದಿಷ್ಟ ಮಿತಿ ಇರುವುದಿಲ್ಲ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ನಿಖರವಾಗಿ ಎಷ್ಟು ಜನ ಇದ್ದಾರೆ ಎಂಬುದರ ಮಾಹಿತಿ ಸದ್ಯಕ್ಕಿಲ್ಲ. ಆದರೆ, ನಿಗದಿಪಡಿಸಿದ ಮಿತಿಯಲ್ಲೇ ಸಿಬ್ಬಂದಿಯನ್ನು ಹೊಂದಿದ್ದೇನೆ. ಯಾವುದೇ ನಿಯಮವನ್ನು ಮೀರಿಲ್ಲ.
– ಡಿ.ಸಿ. ತಮ್ಮಣ್ಣ, ಸಾರಿಗೆ ಸಚಿವರು.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next