Advertisement

ಬಿ.ಸಿ.ರೋಡುನಲ್ಲಿ ಕಳ್ಳತನಕ್ಕೆ ಬೀಳದ ಕಡಿವಾಣ; ಬಸ್ಸೇರುತ್ತಿದ್ದ ಮಹಿಳೆಯ ಚಿನ್ನ ಕಳವು

10:43 PM May 23, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡು ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ  ಪರ್ಸ್‌, ಮೊಬೈಲ್‌, ಚಿನ್ನಾಭರಣ ಎಗರಿಸುವ ಪ್ರಕರಣಗಳು ಕಳೆದ ಕೆಲವು ಸಮಯದಿಂದ ನಿರಂತರವಾಗಿದ್ದು, ಗುರುವಾರ ಕೂಡ ಅಂತಹದ್ದೇ ಒಂದು ಪ್ರಕರಣ ನಡೆದು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್‌ ಆದರ್ಶನಗರ ನಿವಾಸಿ ಜಗದೀಶ್‌ ಅವರ ಪತ್ನಿ ಶಶಿಕಲಾ ಗೋಳ್ತಮಜಲಿನ ನೆಟ್ಲದಲ್ಲಿರುವ ತಾಯಿ ಮನೆಗೆ ಬಂದು ಮತ್ತೆ ಕಲ್ಮಂಜಕ್ಕೆ ಹಿಂದಿರುಗಲು ಬಿ.ಸಿ.ರೋಡಿನಲ್ಲಿ ಧರ್ಮಸ್ಥಳ ಬಸ್ಸನ್ನೇರುತ್ತಿದ್ದಂತೆ ಬ್ಯಾಗಿನ ಪರ್ಸ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಳ್ಳರು ಎಗರಿಸಿದ್ದಾರೆ.

ಬಸ್ಸನ್ನೇರುವ ಸಂದರ್ಭದಲ್ಲಿ ಪತಿ ಹಾಗೂ ಮಗು ಕೂಡ ಇದ್ದು, ಮಗುವನ್ನು ಹಿಡಿದು ಪತಿ ಮೊದಲು ಬಸ್‌ ಹತ್ತಿದ್ದಾರೆ. ಅವರ ಹಿಂದೆ ಶಶಿಕಲಾ ಬಸ್ಸನ್ನೇರುತ್ತಿದ್ದಂತೆ ಎಳೆದಂತಾಯಿತು ಎಂದು ಬ್ಯಾಗ್‌ ನೋಡಿದಾಗ ಚಿನ್ನಾಭರಣವಿದ್ದ ಪರ್ಸ್‌ ಕಳವಾಗಿರುವುದು ತಿಳಿದುಬಂದಿದೆ.

ಅಂದಾಜು ತೂಕ 18 ಗ್ರಾಂ. ತೂಕದ 2 ಚಿನ್ನದ ಸರ ಹಾಗೂ ಪೆಂಡೆಂಟ್‌, 4 ಗ್ರಾಂ. ತೂಕದ ಮಗುವಿನ ಚೈನ್‌, 6 ಗ್ರಾಂ ತೂಕದ 2 ಬೆಂಡೋಲೆ, 2 ಗ್ರಾಂ.ತೂಕದ ಮಗುವಿನ ಕಿವಿಯೋಲೆ, 8 ಗ್ರಾಂ ತೂಕದ ಬಳೆ, 2 ಗ್ರಾಂ  ತೂಕದ ಉಂಗುರ, 6 ಗ್ರಾಂ ತೂಕದ ಕಿವಿಯೋಲೆ ಸೇರಿ ಸುಮಾರು 46 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ಬಿ.ಸಿ.ರೋಡಿನಲ್ಲಿ ಮಹಿಳಾ ಪ್ರಯಾಣಿಕರನ್ನೇ ಹೆಚ್ಚಾಗಿ ಗುರಿ ಮಾಡಿ ಕಳವು ಮಾಡುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಮಾಧ್ಯಮಗಳು ಸಂಬಂಧಪಟ್ಟ ಪೊಲೀಸ್‌ ಇಲಾಖೆಯನ್ನು ಎಚ್ಚರಿಸಿದರೂ ಈ ತನಕ ಕಳ್ಳತನದ ನಿಯಂತ್ರಣ ಸಾಧ್ಯವಾಗಿಲ್ಲ.

Advertisement

ಈ ಭಾಗದಲ್ಲಿ ಪೊಲೀಸರು ವಿಶೇಷ ನಿಗಾ ಇರಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದು, ಆದರೆ ಪೊಲೀಸರು ಆ ಕಾರ್ಯವನ್ನು ಮಾಡುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next