ಬೀದರ: ಸಾರಿಗೆ ಸಂಸ್ಥೆ ಸಾಫ್ಟ್ವೇರ್‌ಗೆ ಕನ್ನ ಹಾಕಿದ ಸಾರಿಗೆ ಸಂಸ್ಥೆ ಸಿಬ್ಬಂದಿ ಲಕ್ಷಾಂತರ ರೂ. ದುರುಪಯೋಗ ಮಾಡಿಕೊಂಡ ಪ್ರಕರಣವೊಂದು ಬೀದರ ಡಿಪೋದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಡಿಪೋದ ಆಡಿಟ್ ಕ್ಲರ್ಕ್ (ಲೆಕ್ಕ ಪರಿಶೋಧನಾ) ಕಾರ್ಯ ನಿರ್ವಹಿಸುತ್ತಿರುವ ಅಮರ್ ಸಾಫ್ಟ್ವೇರ್‌ನಲ್ಲಿ ಸಮಸ್ಯೆ ಉಂಟು ಮಾಡಿ ಲಕ್ಷಾಂತರ ರೂ. ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಇದುವರೆಗೂ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಸಾರಿಗೆ ಸಂಸ್ಥೆಯಡಿ ತನಿಖೆ ನಡೆಸುತ್ತಿದ್ದು, ಒಟ್ಟಾರೆ ಎಷ್ಟು ಮೊತ್ತದ ಹಣ ಸಿಬ್ಬಂದಿ ಪಾಲಾಗಿದೆ ಎಂಬುವುದು ತನಿಖೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಒಟ್ಟು 556 ಸಾರಿಗೆ ಸಂಸ್ಥೆ ಬಸ್‌ಗಳು ಕಾರ್ಯನಿವರ್ಹಿಸುತ್ತಿವೆ. ಪ್ರತಿನಿತ್ಯ 2400 ಸುತ್ತು ಬಸ್ ಸಂಚಾರ ಮಾಡುತ್ತಿವೆ. ಪ್ರತಿ ನಿತ್ಯ ಸರಾಸರಿ 55 ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ ಆಧುನಿಕ ಯಂತ್ರಗಳನ್ನು ಕೂಡ ಅಳವಡಿಸಲಾಗಿದೆ. ಸಂಸ್ಥೆ ಸಾಫ್ಟ್ವೇರ್‌ಗೆ ಕನ್ನ ಹಾಕಿದ ಸಿಬ್ಬಂದಿ ಕೋಟಿಗೂ ಅಧಿಕ ಹಣ ದುರುಪಯೋಗ ಮಾಡಿಕೊಂಡಿರುವ ಸಾಧ್ಯತೆ ಇದೆ.
ಲೂಟಿ ಮಾಡಿದ್ದು ಹೇಗೆ?: 2014ರಿಂದ ನಿರಂತರವಾಗಿ ಪ್ರತಿನಿತ್ಯ ವಿವಿಧ ಊರುಗಳಿಗೆ ಸಂಚರಿಸಿ ಡಿಪೋಗೆ ಬರುವ ಬಸ್‌ಗಳು ಟಿಕೆಟ್ ಮೂಲಕ ಸಂಗ್ರಹಿಸಲಾಗುವ ಹಣವನ್ನು ಸಂಸ್ಥೆಗೆ ಒಪ್ಪಿಸಿ ಲೆಕ್ಕಪತ್ರ ಸರಿ ಮಾಡಿಕೊಂಡು ಮರಳುವುದು ನಿಯಮ. ಹಣ ವ್ಯವಹಾರದ ಕುರಿತು ಎಲ್ಲವೂ ಸಂಸ್ಥೆ ಕಂಪ್ಯೂಟರ್‌ನಲ್ಲಿ ಅಳವಡಿಸಲಾಗುತ್ತದೆ. ಆದರೆ, ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಸಂಸ್ಥೆ ಸಿಬ್ಬಂದಿ ವ್ಯವಸ್ಥಿತವಾಗಿ ಪ್ರತಿನಿತ್ಯ ಬಸ್ ಸಂಚಾರದ ಸಂಖ್ಯೆ ಕಡಿತಗೊಳಿಸಿ ಆ ಹಣ ಲೂಟಿ ಮಾಡಿದ್ದಾನೆ.
ಅಧಿಕಾರಿಗಳ ಸಾಥ್: ಕೇವಲ ಒಬ್ಬನೇ ವ್ಯಕ್ತಿ ಈ ಅಕ್ರಮದಲ್ಲಿ ಭಾಗಿಯಾಗಿಲ್ಲ. ಇತರೆ ಅಧಿಕಾರಿಗಳು ಕೂಡ ಈ ಅಕ್ರಮಕ್ಕೆ ಸಾಥ್ ನೀಡಿರುವ ಶಂಕೆ ಇದ್ದು, ಅಕ್ರಮದಲ್ಲಿ ಭಾಗಿಯಾದ ವ್ಯಕ್ತಿ ಪ್ರಭಾವಿ ಅಧಿಕಾರಿಗಳ ಸಂಬಂಧಿ ಎನ್ನಲಾಗಿದೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಅಕ್ರಮ ನಡೆಯುತ್ತಿರುವುದು ಜ.1ರಂದು ಸಂಸ್ಥೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಇಂದಿಗೂ ಸೂಕ್ತ ಮಾಹಿತಿ ಕಲೆ ಹಾಕದಿರುವುದು ಅನೇಕ ಅನುಮಾನ ಸೃಷ್ಟಿಯಾಗುವಂತೆ ಮಾಡಿದೆ.
ಐದು ವರ್ಷಗಳಿಂದ ನಿರಂತರವಾಗಿ ಬಸ್ ಪ್ರಯಾಣದ ತಪ್ಪು ಮಾಹಿತಿ ನೀಡುತ್ತಿದ್ದರು ಕೂಡ ಅಧಿಕಾರಿಗಳ ಗಮನಕ್ಕೆ ಹೇಗೆ ಬಂದಿಲ್ಲ ಎಂಬುದು ಸದ್ಯ ಉದ್ಭವಿಸಿರುವ ಪ್ರಶ್ನೆ.
ಮೇಲ್ನೋಟಕ್ಕೆ 59 ಲಕ್ಷ ರೂ. ಅಕ್ರಮ ನಡೆದಿರುವುದು ಕಂಡು ಬರುತ್ತಿದೆ. ಈ ಕುರಿತು ವಿಭಾಗೀಯ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ರಾಯಚೂರು, ವಿಜಯಪುರ ಮೂಲದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ತಾಂತ್ರಿಕ ಸಮಸ್ಯೆಯಿಂದ ಎಷ್ಟು ಹಣ ದುರುಪಯೋಗವಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ನಂತರ ಪೂರ್ಣ ಮಾಹಿತಿ ಗೊತ್ತಾಗಲಿದೆ.
ದುರ್ಯೋಧನ ಹೂಗಾರ