ಕಂಪ್ಲಿ : ಸಾರಿಗೆ ನೌಕರರ ಮುಷ್ಕರ 9ನೇ ಕಾಲಿಟ್ಟಿದ್ದು ಮುಷ್ಕರ ಮುಗಿಯದ ಹಿನ್ನೆಲೆಯಲ್ಲಿ ಕಂಪ್ಲಿಯಲ್ಲಿ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಪರದಾಟ ತಪ್ಪುತ್ತಿಲ್ಲ. ಕಳೆದ 9 ದಿನಗಳಿಂದ ಸಾರಿಗೆ ನೌಕರರು ಮುಷ್ಕರವನ್ನು ನಡೆಸುತ್ತಿದ್ದು, ಆರಂಭದ ಕೆಲ ದಿನಗಳು ಸರ್ಕಾರಿ ಬಸ್ಸುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದ್ದು, ಪ್ರಯಾಣಿಕರ ಪರದಾಟ ತೀವ್ರವಾಗಿತ್ತು.
ಆದರೆ ನಂತರ ದಿನಗಳಲ್ಲಿ ಸಂಸ್ಥೆಯ ಕೆಲವು ನೌಕರರು ಕೆಲಸಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಬಸ್ಸುಗಳ ಸಂಚಾರ ಆರಂಭವಾದರೂ ದೂರದೂರಿಗೆ ಹೋಗುವವರ ಪರದಾಟವಂತೂ ತಪ್ಪಿಲ್ಲ.ಜೊತೆಗೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಪರದಾಟವಂತೂ ಹೇಳತೀರದಾಗಿದೆ.
ಶುಕ್ರವಾರ ಕಂಪ್ಲಿ ಬಸ್ ನಿಲ್ದಾಣದಿಂದ ಗಂಗಾವತಿ, ಕುರುಗೋಡು, ಹೊಸಪೇಟೆ ಮತ್ತು ಬಳ್ಳಾರಿಗೆ ಹೊಸಪೇಟೆ ಘಟಕದಿಂದ 56 ಟ್ರಿಪ್ ಗಳನ್ನು ಮಾಡಲಾಗಿದೆ ಎಂದು ಕಂಪ್ಲಿ ಬಸ್ ನಿಲ್ದಾಣದ ಸಂಚಾಯ ನಿಯಂತ್ರಕ ತಿಮ್ಮಪ್ಪ ಯಾದವ್ ತಿಳಿಸಿದರಲ್ಲದೆ, ಬೇರೆ ಘಟಕಗಳ ಬಸ್ಸುಗಳು ಬಂದಿಲ್ಲ ಹಾಗೂ ನೆರೆಯ ಜಿಲ್ಲೆ ಮತ್ತು ನೆರೆ ರಾಜ್ಯಗಳಿಗೆ ಬಸ್‌ಗಳು ಸಂಚರಿಸಿಲ್ಲವೆಂದು ತಿಳಿಸಿದರು. ಮುಷ್ಕರ ಮುಂದುವರಿದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗಿರುವುದರ ಜೊತೆಗೆ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ.
ತಾಲೂಕಿನ ಕಣವಿ ತಿಮ್ಮಲಾಪುರ ಗ್ರಾಮದ ವಿದ್ಯಾರ್ಥಿಗಳು ರಾಮಸಾಗರಕ್ಕೆ ಬಂದು ಅಲ್ಲಿಂದ ಬಸ್ಸುಗಳನ್ನು ಹಿಡಿದುಕೊಂಡು ಕಂಪ್ಲಿ, ಹೊಸಪೇಟೆಗೆ ತೆರಳಬೇಕಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಇಲ್ಲದೇ ಇರವುದರಿಂದ ರಾಮಸಾಗರ ಹೊರವಲಯದಲ್ಲಿ ಪ್ರತಿದಿನ ಬಸ್ಸುಗಳಿಗಾಗಿ ಬಿಸಿಲಿನಲ್ಲಿ ಕಾಯಬೇಕಾಗಿದೆ.
ಆದಷ್ಟು ಮುಷ್ಕರ ಬಗೆಹರಿದು ಎಂದಿನಂತೆ ಬಸ್ಸು ಸಂಚಾರ ಆರಂಭವಾಗಲಿ ಎಂದು ಹಲವು ವಿದ್ಯಾರ್ಥಿನಿಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.