Advertisement

ಪುದುಚೇರಿ ನೋಂದಣಿ ಕಾರುಗಳ ಮೇಲೆ ಸಾರಿಗೆ ಇಲಾಖೆ ಕಣ್ಣು

11:00 AM Nov 09, 2017 | |

ಬೆಂಗಳೂರು: ತೆರಿಗೆ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ರಾಜ್ಯ ಸಾರಿಗೆ ಇಲಾಖೆ ಪುದುಚೇರಿ ನೋಂದಣಿ ಐಷಾರಾಮಿ ಕಾರುಗಳನ್ನು ಗುರಿಯಾಗಿಸಿ ಕೊಂಡು ಕಾರ್ಯಾಚರಣೆಗಿಳಿದಿದ್ದು, ಅಂಥ ವಾಹನಗಳ ಸಂಪೂರ್ಣ ದಾಖಲೆಗಳನ್ನು ಕ್ರೋಢಿಕರಿಸುತ್ತಿದೆ.

Advertisement

“ಪುದುಚೇರಿಯ ಕಾಯಂ ನಿವಾಸಿಗಳಿಗೆ ಮಾತ್ರ ನೋಂದಣಿ’ ಅವಕಾಶ ನೀಡುವಂತೆ ಅಲ್ಲಿನ ರಾಜ್ಯಪಾಲೆ ಕಿರಣ್‌ ಬೇಡಿ ಆದೇಶಿಸಿದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿರುವ ಪುದುಚೇರಿ ಸೇರಿ ಹೊರ ರಾಜ್ಯಗಳಲ್ಲಿ ನೋಂದಣಿಯಾದ ಐಷಾರಾಮಿ ವಾಹನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾರಂಭಿಸಿದೆ.

ವಾಹನದ ನೋಂದಣಿ ವೇಳೆ ನೀಡಿರುವ ಕಾಯಂ ವಿಳಾಸ, ತಾತ್ಕಾಲಿಕ ವಿಳಾಸ, ಮಾಲೀಕನ ಹಿನ್ನೆಲೆ ಸೇರಿ ಹಲವು 
ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುತ್ತಿದೆ. ಮುಖ್ಯವಾಗಿ ಪುದುಚೇರಿ ನೋಂದಾಯಿತ ವಾಹನಗಳಿಗೆ ಸಂಬಂಧಿಸಿದ ಟೋಲ್‌ ರಸೀದಿಗಳು, ಪೆಟ್ರೋಲ್‌ ಬಂಕ್‌ಗಳು, ಸರ್ವೀಸ್‌ ಸೆಂಟರ್‌ಗಳು, ಆ ಕಾರಿನ ಮಾಲೀಕರ ಮೂಲ, ಪಾರ್ಕಿಂಗ್‌ ಸ್ಥಳಗಳ ಬಗ್ಗೆಯೂ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳ ನೋಂದಾಯಿತ ವಾಹನಗಳ ವಿರುದ್ಧ ಕ್ರಮಕ್ಕೆ ಹಾಗೂ ಈ ವಾಹನಗಳು ತೆರಿಗೆ ವಂಚನೆ ಮಾಡುತ್ತಿರುವುದನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡಲು ನೆರವಾಗಲಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಲೆಕ್ಕವೂ ಇಲ್ಲ, ನಿಯಂತ್ರಣವೂ ಇಲ್ಲ:
2017ರ ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 1.81 ಕೋಟಿ ವಾಹನಗಳಿದ್ದು, ಇದರಲ್ಲಿ 21.73 ಲಕ್ಷ ಕಾರುಗಳಿದ್ದರೆ, ಅವುಗಳಲ್ಲಿ 13.58 ಲಕ್ಷ ಕಾರುಗಳು ಬೆಂಗಳೂರಿ ನಲ್ಲೇ ಇವೆ. ಜೊತೆಗೆ ಪ್ರತಿ ವರ್ಷ ಸರಾಸರಿ ಶೇ.11 ಕಾರುಗಳು ಏರುತ್ತವೆ. ಆದರೆ, ಇದರಲ್ಲಿ ಹೆಚ್ಚಿನ ಐಷಾರಾಮಿ ಕಾರುಗಳು ಪುದುಚೇರಿ ನೋಂದಣಿ ಹೊಂದಿವೆ. ಆದರೆ ಈ ವಾಹನಗಳ ನಿಖರ ಮಾಹಿತಿ ಲಭ್ಯವಿಲ್ಲ. ಅಷ್ಟೇ ಅಲ್ಲ,
“ಜೀವಮಾನ ತೆರಿಗೆ’ ಹೇರಿಕೆ ವಿಚಾರದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದ್ದರಿಂದ ಈ ವಾಹನಗಳ ಮೇಲೆ ನಿಯಂತ್ರಣವೂ ಇಲ್ಲ. ಆದರೆ, ಈಗ ರಾಜ್ಯಪಾಲರಾದ ಕಿರಣ್‌ ಬೇಡಿ ಅವರ ಆದೇಶ ಪರೋಕ್ಷವಾಗಿ ರಾಜ್ಯಕ್ಕೆ ಅನುಕೂಲ ಆಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಯಾಕೀಗ ತಪಾಸಣೆ?
ಮಲಯಾಳಂ ನಟಿ ಅಮಲಾ ಪೌಲ್‌ ಮರ್ಸಿಡಿಸ್‌ ಬೆಂಜ್‌ ಕಾರು ಖರೀದಿಸಿ, ಪುದುಚೇರಿಯಲ್ಲಿ ನೋಂದಣಿ ಮಾಡಿಸಿ ತೆರಿಗೆ ವಂಚನೆ ಮಾಡಿದ ಪ್ರಕರಣದ ಬಳಿಕ, ನಟ ಫ‌ಹಾದ್‌ ಫಾಸಿಲ್‌ ಕೂಡ ಬೆಂಜ್‌ ಇ-ಕ್ಲಾಸ್‌ ಕಾರೊಂದನ್ನು ಖರೀದಿಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ರಾಜ್ಯ ಪಾಲೆ ಕಿರಣ್‌ ಬೇಡಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರು. ರಾಜ್ಯ ಸಾರಿಗೆ ಇಲಾಖೆಯೂ ಈ ಕ್ರಮಕ್ಕೆ ಮುಂದಾಗಿದೆ. ಇಂಥದ್ದೇ ತಪಾಸಣೆಯನ್ನು ಸಾರಿಗೆ ಇಲಾಖೆ ಕಳೆದ ವರ್ಷವೂ ಮಂಗಳೂರು ಭಾಗದಲ್ಲಿ ನಡೆಸಿ, ಕೆಲ ಪ್ರಕರಣಗಳನ್ನು ಬಹಿರಂಗಪಡಿಸಿತ್ತು.

Advertisement

ಇಲ್ಲಾದ್ರೆ 10 ಲಕ್ಷ; ಅಲ್ಲಾದ್ರೆ 2 ಲಕ್ಷ!
ಸಾಮಾನ್ಯವಾಗಿ ದೇಶಾದ್ಯಂತ ಯಾವುದೇ ಕಾರುಗಳ ಶೋರೂಂದರ ಒಂದೇ ಆಗಿರುತ್ತದೆ. ಆದರೆ, ರಸ್ತೆಗಿಳಿಯಲು ವಿಧಿಸುವ ತೆರಿಗೆ ದರ ಬೇರೆಯಾಗಿರುತ್ತದೆ. ಕರ್ನಾಟಕದಲ್ಲಿ ರಸ್ತೆ ತೆರಿಗೆ ಕನಿಷ್ಠ ಶೇ.13ರಿಂದ ಗರಿಷ್ಠ ಶೇ.20 ಇದೆ. ಆದರೆ, ಪುದುಚೇರಿಯಲ್ಲಿ ಅತಿ ಕಡಿಮೆ ಶೇ.2 ಇದೆ. ಉದಾಹರಣೆಗೆ ಕರ್ನಾಟಕದಲ್ಲಿ 50 ಲಕ್ಷ ರೂ. ಮೊತ್ತದ ಕಾರು ಖರೀದಿಸಿದರೆ, ನೋಂದಣಿಯಾಗಿ ರಸ್ತೆಗಿಳಿಯಲು 10 ಲಕ್ಷ ರೂ. ರಸ್ತೆ ತೆರಿಗೆ ರೂಪದಲ್ಲಿ ನೀಡಬೇಕಾಗಲಿದೆ. ಇದೇ ಮೊತ್ತದ ಕಾರು ನೋಂದಣಿಗೆ ಪುದುಚೆರಿಯಲ್ಲಿ 2 ಲಕ್ಷ ರೂ. ತೆರಿಗೆ ಕಟ್ಟಬೇಕಾಗುತ್ತದೆ.

ಕ್ರಮ ಸಾಧ್ಯವೇ?
ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಸದ್ಯಕ್ಕೆ ಅವಕಾಶ ಇಲ್ಲ. ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪುದುಚೇರಿ ನೋಂದಾಯಿತ ವಾಹನಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲು ಅವಕಾಶ ಇದೆ.

“ಜೀವಮಾನ ತೆರಿಗೆ’ ವಿಚಾರದಲ್ಲಿ ರಾಜ್ಯಕ್ಕೆ ಹಿನ್ನಡೆಯಾದ ನಂತರದಿಂದ ಪುದುಚೇರಿ ನೋಂದಾಯಿತ ಕಾರುಗಳ ಹಾವಳಿ ನಗರದಲ್ಲಿ ವಿಪರೀತವಾಗಿದೆ. ಪದೇಪದೆ ಕಾಣಿಸಿಕೊಳ್ಳುವ ಹೊರರಾಜ್ಯಗಳ ಅದರಲ್ಲೂ “ಪಿವೈ’ ನೋಂದಾಯಿತ ವಾಹನಗಳ ಮೇಲೆ ಕಣ್ಣಿಡಲು ಆದೇಶಿಸಲಾಗಿದೆ. 
ಜ್ಞಾನೇಂದ್ರ ಕುಮಾರ್‌, ಸಾರಿಗೆ ಜಂಟಿ ಆಯುಕ್ತ (ಬೆಂಗಳೂರು ನಗರ)

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next