Advertisement

ವಿಶೇಷ ತಂಡ ರಚನೆಗೆ ಸಾರಿಗೆ ಇಲಾಖೆ ನಿರ್ಧಾರ

09:53 AM Sep 23, 2018 | |

ಮಹಾನಗರ: ನಗರದಲ್ಲಿ ಓಡಾಡುವ ಬಸ್‌ಗಳಲ್ಲಿ ಫುಟ್‌ಬೋರ್ಡ್‌ ನಲ್ಲಿ ನಿಂತು ಪ್ರಯಾಣಿಸುವವರು ಹೆಚ್ಚಾಗುತ್ತಿದ್ದು, ಅವರ ಬಗ್ಗೆ ನಿಗಾ ಇಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಇದೇ ಕಾರಣಕ್ಕೆ ಮುಂದಿನ ವಾರದಲ್ಲಿಯೇ ವಿಶೇಷ ತಂಡ ರಚನೆ ಮಾಡಿ ಅನೇಕ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲು ಆರ್‌ಟಿಒ ನಿರ್ಧರಿಸಿದೆ.

Advertisement

ನಗರದ ಖಾಸಗಿ ಸಿಟಿ ಬಸ್‌ಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕರು ಹೆಚ್ಚಾಗಿ ಫುಟ್‌ಬೋರ್ಡ್‌ಗಳಲ್ಲಿ ನಿಂತಿರುತ್ತಾರೆ. ಬಸ್‌ನಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶವಿದ್ದರೂ ನಿರ್ವಾಹಕರು ಎಚ್ಚರಿಕೆ ನೀಡಿದರೂ ಫುಟ್‌ಬೋರ್ಡ್‌ ಬಿಟ್ಟು ಕದಲದ ಅನೇಕ ಉದಾಹರಣೆಗಳು ದಿನಂಪ್ರತಿ ಬಸ್‌ ಗಳಲ್ಲಿ ನಡೆಯುತ್ತಿವೆ. ಶಾಲಾ ಕಾಲೇಜು ಗಳಿಗೆ ವಿದ್ಯಾರ್ಥಿಗಳು ತೆರಳುವ ಬೆಳಗಿನ ಸಮಯ ಮತ್ತು ಸಂಜೆ ಹೊತ್ತಿನಲ್ಲಿ ಫುಟ್‌ ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿವೆ.

ಇದೀಗ ಸಾರಿಗೆ ಇಲಾಖೆ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವವರ ವಿರುದ್ಧ ಮತ್ತು ಆ ಬಸ್‌ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಬಸ್‌ ಫುಟ್‌ಬೋರ್ಡ್ ನಲ್ಲಿ ನಿಂತು ಪ್ರಯಾಣ ಮಾಡುವುದು ಕಾನೂನು ಪ್ರಕಾರ ಅಪರಾಧ. ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿನ ಫುಟ್‌ಬೋರ್ಡ್‌ ಕನಿಷ್ಠ 52 ಸೆಂ.ಮೀ. ಎತ್ತರವಿರಬೇಕು ಎಂಬ ಕಾನೂನು ಇದೆ. ಆದರೆ ಹೊಸ ಬಸ್‌ಗಳಲ್ಲಿ ಈ ಸಮಸ್ಯೆ ತಲೆದೋರುವುದಿಲ್ಲ. ಆದರೆ ಕೆಲವು ಹಳೆ ಸಿಟಿ ಬಸ್‌ಗಳಲ್ಲಿ ಇದರ ಪಾಲನೆಯಾಗುತ್ತಿಲ್ಲ. ಫುಟ್‌ಬೋರ್ಡ್‌ ತೀರಾ ಕೆಳಗಿರುವುದರಿಂದ ಪಾವೂರು, ಪೊಳಲಿ ಸಹಿತ ಕೆಲವು ಪ್ರದೇಶಗಳಲ್ಲಿ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದವರಿಗೆ ಗಾಯಗಳಾದ ಉದಾಹರಣೆಗಳಿವೆ.

ಐದು ಬಸ್‌ಗಳಲ್ಲಿವೆ ಸ್ವಯಂಚಾಲಿತ ಬಾಗಿಲು
ನಗರದಲ್ಲಿ ಒಟ್ಟಾರೆ 363 ಖಾಸಗಿ ಸಿಟಿ ಬಸ್‌ಗಳ ದಿನಂಪ್ರತಿ ಓಡಾಡುತ್ತಿದ್ದು, ಕೇವಲ 5 ಸಿಟಿ ಬಸ್‌ಗಳಲ್ಲಿ ಮಾತ್ರ ಸ್ವಯಂಚಾಲಿತ ಬಾಗಿಲುಗಳಿವೆ. ಸ್ಟೇಟ್‌ ಬ್ಯಾಂಕ್‌ನಿಂದ ಮಂಗಳಾದೇವಿಗೆ ತೆರಳು 27 ಸಂಖ್ಯೆಯ ಐದು ಬಸ್‌ಗಳಲ್ಲಿ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಲಾಗಿದೆ.

ಫುಟ್‌ಬೋರ್ಡ್‌ ಅಭಿಯಾನ ಯಶಸ್ವಿ
ನಗರದಲ್ಲಿ ಓಡಾಡುವ ಖಾಸಗಿ ಸಿಟಿ ಬಸ್‌ಗಳಲ್ಲಿನ ಫುಟ್‌ಬೋರ್ಡ್‌ ಸಮಸ್ಯೆ ಮತ್ತು ಫುಟ್‌ಬೋರ್ಡ್‌ಗಳಲ್ಲಿ ನಿಂತು ಪ್ರಯಾಣ ಮಾಡುವುದನ್ನು ತಡೆಯಲು ನಗರದ ಕಂಕನಾಡಿ, ಲೈಟ್‌ಹೌಸ್‌, ಲಾಲ್‌ಬಾಗ್‌ ಸಹಿತ ಇನ್ನಿತರ ಪ್ರದೇಶಗಳಲ್ಲಿ, ಖುದ್ದು ಖಾಸಗಿ ಬಸ್‌ ಮಾಲಕರು ನಿಂತು ಫುಟ್‌ಬೋರ್ಡ್‌ ಅಭಿಯಾನವನ್ನು ನಡೆಸಿದ್ದರು.

Advertisement

ಕಠಿನ ಕ್ರಮಕ್ಕೆ ನಿರ್ಧಾರ
ನಗರದಲ್ಲಿ ಓಡಾಡುವ ಅನೇಕ ಬಸ್‌ಗಳಲ್ಲಿನ ಫುಟ್‌ಬೋರ್ಡ್‌ಗಳಲ್ಲಿ ನಿಂತು ಕೆಲವರು ಪ್ರಯಾಣಿಸುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕಠಿನ ಕ್ರಮಕ್ಕೆ ಆರ್‌ಟಿಒ ಮುಂದಾಗಿದೆ. ಒಂದು ವಾರದಲ್ಲಿ ವಿಶೇಷ ತಂಡ ರಚನೆ ಮಾಡಿ ನಗರದ ಅನೇಕ ಕಡೆಗಳಲ್ಲಿ ಬಸ್‌ ಕಾರ್ಯಾಚರಣೆ ನಡೆಸಲಾಗುವುದು.
– ಆರ್‌.ಎಂ. ವರ್ಣೇಕರ್‌,
ಮಂಗಳೂರು ಪ್ರಭಾರ ಆರ್‌ ಟಿಒ

ಕಾರ್ಯಾಚರಣೆ ನಡೆಸುತ್ತೇವೆ
ಬಸ್‌ಗಳಲ್ಲಿ ಕುಳಿತುಕೊಳ್ಳಲು ಜಾಗವಿದ್ದರೂ ಕೆಲವರು ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುತ್ತಿದ್ದಾರೆ.  ಈ ಬಗ್ಗೆ ಈ ಹಿಂದೆಯೂ ಕಾರ್ಯಾಚರಣೆ ನಡೆಸಿದ್ದೆವು. ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲಾಗುವುದು.
– ಮಂಜುನಾಥ ಶೆಟ್ಟಿ,
ಟ್ರಾಫಿಕ್‌ ಎಸಿಪಿ, ಮಂಗಳೂರು

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next