Advertisement

KSRTC: “ಶಕ್ತಿ” ಹೊರೆಗೆ ಸಾರಿಗೆ ನಿಗಮಗಳು “ಅಶಕ್ತ”?

09:03 PM Sep 21, 2023 | Team Udayavani |

ಬೆಂಗಳೂರು: ಶಕ್ತಿ ಯೋಜನೆ ಅಡಿ ಸರಕಾರ ನಿಯಮಿತವಾಗಿ ಅನುದಾನ ಬಿಡುಗಡೆ ಮಾಡಿದ ಬಳಿಕವೂ ಪ್ರತಿ ತಿಂಗಳು ಸಾರಿಗೆ ನಿಗಮಗಳಿಗೆ 100ರಿಂದ 150 ಕೋಟಿ ರೂ. ಕೊರತೆ ಆಗುತ್ತಿದೆ.

Advertisement

ಸರಕಾರವು ಉದ್ದೇಶಿತ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 2,800 ಕೋ. ರೂ. ಅನುದಾನ ಮೀಸಲಿಟ್ಟಿದೆ. ಇದನ್ನು ಹಣಕಾಸು ಇಲಾಖೆ ಪ್ರತಿ ತಿಂಗಳು 293 ಕೋಟಿ ರೂ.ಯಂತೆ ನಾಲ್ಕೂ ನಿಗಮಗಳಿಗೆ ಬಿಡುಗಡೆ ಮಾಡುತ್ತಿದೆ. ಆದರೆ ಪ್ರತಿ ತಿಂಗಳು ಸರಾಸರಿ 20 ಕೋಟಿ ಪ್ರಯಾಣಿಕರು ಯೋಜನೆ ಅಡಿ ಪ್ರಯಾಣಿಸುತ್ತಿದ್ದು, 450 ಕೋ.ರೂ. ಪ್ರಯಾಣ ವೆಚ್ಚ ಆಗುತ್ತಿದೆ. ಕೊರತೆಯಾಗುತ್ತಿರುವ ಉಳಿದ ಮೊತ್ತ ಹೊಂದಾಣಿಕೆ ಮಾಡುವುದು ಕಷ್ಟವಾಗುತ್ತಿದೆ. ಇದರ ಬಿಡುಗಡೆಗಾಗಿ ನಿಗಮಗಳು ಹಣಕಾಸು ಇಲಾಖೆಗೆ ದುಂಬಾಲು ಬೀಳುತ್ತಿವೆ.

ಬಜೆಟ್‌ನಲ್ಲಿ ನೀಡಿದ ಅನುದಾನದಂತೆ ಮೂರು ತಿಂಗಳಲ್ಲಿ (ಜೂ. 11ರಿಂದ ಆ. 31ರ ವರೆಗೆ) ಸುಮಾರು 750 ಕೋಟಿ ರೂ. ವಿವಿಧ ಹಂತಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಈ ಅವಧಿಯಲ್ಲಾದ ಪ್ರಯಾಣ ವೆಚ್ಚ 1,160 ಕೋ. ರೂ. ಆಗಿದೆ. ಅಂದರೆ 350 ಕೋ. ರೂ. ಖೋತಾ ಆಗಿದೆ. ಈ ಹಿನ್ನೆಲೆಯಲ್ಲಿ “ಶಕ್ತಿ’ ಯೋಜನೆಗೆ 2,800 ಕೋ.ರೂ. ಸಾಕಾಗುವುದಿಲ್ಲ. ವಾರ್ಷಿಕ ಕನಿಷ್ಠ 4,500 ಕೋ.ರೂ. ಮೀಸಲಿಟ್ಟು, ಪೂರ್ಣಪ್ರಮಾಣದ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.

ನಿಯಮಗಳ ಪ್ರಕಾರ ಇದು ಕಷ್ಟಸಾಧ್ಯ. ಯಾಕೆಂದರೆ, ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದಲ್ಲೇ ವಿತ್ತ ಇಲಾಖೆ ಹೊಂದಾಣಿಕೆ ಮಾಡಬೇಕಾಗುತ್ತದೆ. ಹೆಚ್ಚುವರಿ ಹಣ ಮೀಸಲಿಡಬೇಕಾದರೆ ಅದಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಾಗುತ್ತದೆ. ಜತೆಗೆ ಸದನದಲ್ಲೂ ಅಂಗೀಕಾರ ಪಡೆಯಬೇಕಾಗುತ್ತದೆ. ಈ ಮಧ್ಯೆ ರಾಜ್ಯದಲ್ಲಿ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವ ಬಹುತೇಕ ಮಹಿಳೆಯರ ಪಯಣ ಒಂದೇ ರೀತಿ ಇದ್ದು, (ಒಂದು ಸ್ಥಳದಿಂದ ಆರಂಭವಾಗಿ ಅಂತಿಮ ಸ್ಥಳಕ್ಕೇ ಟಿಕೆಟ್‌ ವಿತರಣೆ ಆಗಿವೆ) ಇದಕ್ಕೆ ಹಣಕಾಸು ಇಲಾಖೆ ಅಪಸ್ವರ ಎತ್ತಿದೆ. ಇದು ಸಾರಿಗೆ ನಿಗಮಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

ಎಂಡ್‌ ಟು ಎಂಡ್‌ ಸಮಸ್ಯೆ?
ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಸಹಿತ ನಾಲ್ಕೂ ಸಾರಿಗೆ ನಿಗಮಗಳು ಮಹಿಳಾ ಪ್ರಯಾಣಿಕರಿಗೆ ವಿತರಿಸಿದ ಬಹುತೇಕ ಟಿಕೆಟ್‌ಗಳ ಆರಂಭ ಮತ್ತು ಅಂತಿಮವಾಗಿ ತಲುಪುವ ಸ್ಥಳ ಸಾಮಾನ್ಯವಾಗಿದೆ. (ಉದಾಹರಣೆಗೆ ಬೆಂಗಳೂರಿನಿಂದ ದಾವಣಗೆರೆ, ಬೆಂಗಳೂರಿನಿಂದ ಮಂಗಳೂರು) ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಇದನ್ನು ನಿರಾಕರಿಸಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ (ಪ್ರಭಾರ) ವಿ. ಅನುºಕುಮಾರ್‌, ಮುಖ್ಯವಾಗಿ ಶಕ್ತಿ ಯೋಜನೆಗೆ ನಿರೀಕ್ಷೆ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಹಜವಾಗಿ ಪ್ರಯಾಣ ವೆಚ್ಚ ಏರಿಕೆಯಾಗಿದೆ. ಅಷ್ಟಕ್ಕೂ ಇಲಾಖೆ ಕೇಳಿದ ಎಲ್ಲ ಮಾಹಿತಿಗಳನ್ನೂ ನಿಗಮಗಳಿಂದ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಿಂಗಳಿಗೆ 293 ಕೋಟಿ ರೂ. ಬಿಡುಗಡೆ
ಶಕ್ತಿ ಯೋಜನೆಗೆ ಪ್ರತಿ ತಿಂಗಳು ನಿಯಮಿತವಾಗಿ 293 ಕೋ. ರೂ. ಬಿಡುಗಡೆ ಆಗುತ್ತಿದೆ. ಆದರೆ ನಾವು ಈ ಅನುದಾನ ಸಾಕಾಗುವುದಿಲ್ಲ. ಇನ್ನಷ್ಟು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಿಗಮಗಳಿಗೆ ಹೊರೆ ಆಗುತ್ತದೆ ಎಂದು ಹಣಕಾಸು ಇಲಾಖೆಗೆ ಮನದಟ್ಟು ಮಾಡಿದ್ದೇವೆ. ಹಣಕಾಸಿನ ಸಮಸ್ಯೆ ಇಲ್ಲ. ಅಲ್ಲದೆ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ “ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next