ಕಲಬುರಗಿ: ಕೋವಿಡ್ ದಾಳಿ, ಸಾರಿಗೆ ನೌಕರರ ಸಂಬಳ ಹೆಚ್ಚಳ ಹಾಗೂ ತೈಲ ಬೆಲೆ ಹೆಚ್ಚಳವಾಗಿದ್ದರೂ ಬಸ್ ಪ್ರಯಾಣ ದರ ಹೆಚ್ಚಿಸದಿರುವುದು ಸೇರಿದಂತೆ ಇತರ ಕಾರಣಗಳಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಂದ ಆಗಿರುವ ನಾಲ್ಕು ಸಾವಿರ ಕೋಟಿ ರೂ. ಹಾನಿ ಸರಿದೂಗಿಸಲು ಯೋಜನೆಗಳನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಈಶ್ಯಾನ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ ಹಾಗೂ ಸೆಲ್ಕೋ ಸೋಲಾರ್ ಸಿಸ್ಟಮ್ ಬೆಂಗಳೂರು ಸಹ ಯೋಗದಲ್ಲಿ ಬುಧವಾರ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಉಪ ಯೋಗ ಆಗುವಂತೆ ವಿಶೇಷವಾಗಿ ನಿರ್ಮಿಸಿದ ಸಂಚಾರಿ ಮಹಿಳಾ ಶೌಚಾಲಯ ಹಾಗೂ ಮಗುವಿಗೆ ಹಾಲುಣಿಸುವ ವ್ಯವಸ್ಥೆ ಇರುವ ಸಂಚಾರಿ ವಾಹನವನ್ನು ಉದ್ಘಾಟಿಸಿ ಹಾಗೂ ಎನ್‌ಇಕೆಆರ್ ಟಿಸಿ ಹೆಸರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮರುನಾಮಕರಣ ಆದೇಶ ಹಸ್ತಾಂತರ ನೆರವೇರಿಸಿದ ನಂತರ ಅವರು ಮಾತನಾಡಿದರು.
ಕೊರೊನಾದಿಂದ ಉಂಟಾದ ನಷ್ಟಕ್ಕೆ ಸರ್ಕಾರವು ನಿಗಮಕ್ಕೆ ಅನುದಾನ ನೀಡುತ್ತಿದ್ದು, ಯಾವುದೇ ಸಿಬ್ಬಂದಿ ವೇತನವೂ ಬಾಕಿ ಇಲ್ಲ. ಕೊರೊನಾದಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ನಿಗಮಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಸಾರಿಗೆ ನಿಗಮದ ಘಟಕಗಳಲ್ಲಿ 200 ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪನೆ ಮಾಡುವ ಯೋಜನೆಯಿದ್ದು, ಅನಾರೋಗ್ಯ ತೊಂದರೆ ಇರುವ ಸಿಬ್ಬಂದಿಗಳನ್ನು ಈ ಬಂಕ್‌ಗಳಲ್ಲಿ ಸೇವೆಗೆ ನಿಯೋಜಿಸಲಾಗುವುದು. ಸಂಸ್ಥೆಗೆ ಸೇರಿದ ಜಾಗವನ್ನು ಸಮಪರ್ಕವಾಗಿ ಬಳಸಲು ಇನ್ನಷ್ಟು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಕೆಕೆಆರ್‌ಡಿಬಿಯಿಂದ 4 ಕೋಟಿ ರೂ. ಅನುದಾನ: ಜಿಲ್ಲೆಗೆ 4 ಎಲೆಕ್ಟ್ರಿಕಲ್ ಬಸ್ಸಗಳನ್ನು ಖರೀದಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 4 ಕೋಟಿ ರೂ. ಅನುದಾನ ನೀಡಿದ್ದು, ಇದಕ್ಕೆ ಮಂಡಳಿ ಅಧ್ಯಕ್ಷರನ್ನು ಅಭಿನಂದಿಸುವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವು ನೀಡುವಂತೆ ಕೋರಲಾಗುವುದು. ಈಗಾಗಲೇ ನಿಗಮದಲ್ಲಿ ಕೋರಿಯರ್ ಸರ್ವಿಸ್ ಆರಂಭವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ, ಶಶೀಲ ಜಿ.ನಮೋಶಿ, ಎನ್. ರವಿಕುಮಾರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಬಿ. ಟೆಂಗಳಿ, ಬೆಂಗಳೂರು ಸೆಲ್ಕೋ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಸುದಿಪ್ತ ಘೋಷ್, ರಾಯಚೂರು ಸೆಲ್ಕೋ ಹಿರಿಯ ವ್ಯವಸ್ಥಾಒಕ ಆನಂದ ಕುಮಾರ, ಜಿಲ್ಲಾಧಿ ಕಾರಿ ವಿ.ವಿ. ಜ್ಯೋತ್ಸಾ°, ಎನ್‌ಇಕೆಎಸ್ ಆರ್‌ಟಿಸಿ ಮುಖ್ಯ ಸಂಚಾರ ನಿಯಂತ್ರಕ ಕೊಟ್ರಪ್ಪ, ವಿಭಾಗ-1ರ ಸಂಚಾರ ನಿಯಂತ್ರಣಾ ಧಿಕಾರಿ ಸಂತೋಷ ಕುಮಾರ ಎಚ್.ವಿ, ವಿಭಾಗ-2 ರ ಸಂಚಾರ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಮಹಿಳಾ ಶೌಚಾಲಯದ ವಿಶೇಷತೆ
ಸಂಸ್ಥೆಯ ಕಾರ್ಯಾಚರಣೆಯಲ್ಲಿ 12.44 ಲಕ್ಷ ಕಿಲೋ ಮೀಟರ್ ಕ್ರಮಿಸಿದ ನಂತರ ನಿಷ್ಕ್ರಿಯಗೊಳಿಸಲಾದ ವಾಹನವನ್ನು ಉಪಯೋಗಿಸಿಕೊಂಡು ಸಾರ್ವಜನಿಕ ಮಹಿಳೆಯರ ಉಪಯೋಗಕ್ಕಾಗಿ ಶೌಚಾಲಯ ಕಮ್ ಮಗುವಿಗೆ ಹಾಲುಣಿಸುವ ವ್ಯವಸ್ಥೆಯುಳ್ಳ ಸಂಚಾರಿ ಬಸ್ ನಲ್ಲಿ ಒಂದು ಪಾಶ್ಚಾತ್ಯ ಶೈಲಿ ಶೌಚಾಲಯ ಸೇರಿ ಮೂರು ಶೌಚಾಲಯಗಳಿವೆ. ಅದೇ ರೀತಿ ಬಾತ್ ರೂಂ, ಮಗುವಿಗೆ ಹಾಲುಣಿಸುವ ವ್ಯವಸ್ಥೆ, ಸ್ಯಾನಿಟರಿ ನ್ಯಾಪ್‌ಕಿನ್ ಮಷಿನ್, ಸ್ಯಾನಿಟರಿ ನ್ಯಾಪ್‌ಕಿನ್ ವಿಲೇವಾರಿ ಮಷಿನ್, ಹ್ಯಾಂಡ್ ವಾಷ್ ಬೆಸಿನ್, ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ವಿದ್ಯುತ್ ಹಾಗೂ ಲೈಟ್ ಸೌಲಭ್ಯಗಳನ್ನು ಈ ಬಸ್ ಹೊಂದಿದ್ದು, ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿದೆ. ಈ ಬಸ್ ಕೇವಲ ಕಲಬುರಗಿ ನಗರದಲ್ಲಿ ಮಾತ್ರ ಸಂಚರಿಸುತ್ತದೆ. ಯಾವ ಸ್ಥಳದಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಆ ಸ್ಥಳಕ್ಕೆ ಈ ಬಸ್ ಕಳುಹಿಸಲಾಗುವುದು. ಈ ಬಸ್‌ನ ವೆಚ್ಚ 9.60 ಲಕ್ಷ ರೂ. ಆಗಿದ್ದು, ಆಕರ್ಷಕ ಹೊರ ಮೈ ಮತ್ತು ಒಳ ಮೈ ಒಳಗೊಂಡಿದೆ.