Advertisement

ಮಲೆನಾಡಿನ ಕೊಲಂ”ಬಸ್‌’; “ಸಾರಿಗೆ’ಗೆ ಬೇಕು “ಸಹಕಾರ’

09:59 AM Mar 03, 2020 | Sriram |

ಮಲೆನಾಡಿನ ಹಳ್ಳಿಗಳ ಜೀವನಾಡಿಯಾಗಿ, ಸಹಸ್ರಾರು ಮಂದಿಗೆ ಉದ್ಯೋಗ ಕೊಟ್ಟ ಒಂದು ಸಹಕಾರ ಸಾರಿಗೆ ಸಂಸ್ಥೆ, ಈಗ ನಷ್ಟದಲ್ಲಿದೆ ಎಂದಾಗ, ಯಾರಿಗೂ ಆಘಾತವೇ. ಎಲ್ಲೋ ಬೆಂಗಳೂರಿನಲ್ಲಿ ಸಂಸ್ಥೆ ಬಾಗಿಲು ಹಾಕಿತು ಎಂದರೆ ಅದು ಅಷ್ಟು ದೊಡ್ಡ ವಿಚಾರವೇ ಅಲ್ಲ. ಅಲ್ಲಿ ಬದುಕು ರೂಪಿಸಿಕೊಳ್ಳಲು ನೂರಾರು ದಾರಿಗಳುಂಟು. ಆದರೆ, ಆಪತ್ತಿಗಾದವನೇ ನೆಂಟ ಎನ್ನುವ ಸ್ಥಿತಿಯಲ್ಲಿರುವ ಮಲೆನಾಡಿಗೆ “ಸಾರಿಗೆ’ಯೇ ತಂದೆ, “ಸಹಕಾರ’ವೇ ತಾಯಿ…

Advertisement

1998ರ ಒಂದು ಬೆಳಗ್ಗೆ. ಪುಟ್ಟ ಪುಟ್ಟ ಕಣ್ಣುಗಳ 21 ಮಂದಿ, ಇಂಟರ್ನೆಟ್ಟಿನಲ್ಲಿ “ಕೊಪ್ಪ’ ಎನ್ನುವ ಪಟ್ಟಣ ಹುಡುಕಿಕೊಂಡು, ಮಲೆನಾಡಿಗೆ ಬಂದಿಳಿದಿದ್ದರು. ಅವರೆಲ್ಲರೂ ಜಪಾನ್‌ ದೇಶದ ಕ್ಯೂಟೋ ನಗರದವರು. ಅಲ್ಲಿನ ರಿಟ್ಸುಮೆಕಿನ್‌ ಯೂನಿವರ್ಸಿಟಿಯವರು. ಆ ದಿನಗಳಲ್ಲಿ, 6,831 ಕಿ.ಮೀ. ದೂರದಿಂದ ಅವರು ಬಂದಿದ್ದಕ್ಕೂ ಕಾರಣವಿತ್ತು. “ಎಸ್ಸೆಸ್ಸೆಲ್ಲಿ ಓದಿದವರು, ಹೈಸ್ಕೂಲನ್ನು ಅರ್ಧಕ್ಕೇ ಬಿಟ್ಟವರು, ಪಿಯುಸಿ ಫೇಲಾದವರು ಸ್ಟೀರಿಂಗ್‌ ಹಿಡಿದು ಡ್ರೈವರ್‌ಗಳಾಗಿ, ಸೀಟಿ ಊದುತ್ತಾ ಕಂಡಕ್ಟರ್‌ಗಳಾಗಿ, ಸ್ಪ್ಯಾನರ್‌ ತಿರುಗಿಸುವ ಮೆಕಾನಿಕ್ಕುಗಳಾಗಿ ಒಂದು ಸದೃಢ, ಶಿಸ್ತುಬದ್ಧವಾದ ಬಸ್‌ ಕಂಪನಿ ಕಟ್ಟಿದ್ದಾರಂತಲ್ಲ… ಆ ಬಸ್ಸುಗಳು ಹಳ್ಳಿಗಳ ಕಗ್ಗಾಡಿನ ರಸ್ತೆಗಳಲ್ಲಿ ಓಡಾಡುತ್ತಿವೆಯಂತಲ್ಲ’ ಅನ್ನೋದು ಅವರ ಕಿವಿಗೆ ಬಿದ್ದಿದ್ದª ಸುದ್ದಿ. ಅದು ಸುಳ್ಳೇನೂ ಆಗಿರಲಿಲ್ಲ. ಆ ಬಸ್ಸುಗಳಲ್ಲಿ ಕೂತು, ಅವರೂ ಒಂದಷ್ಟು ದೂರ ಓಡಾಡಿ, ಇಲ್ಲಿನ ಕಾರ್ಮಿಕರ ಒಗ್ಗಟ್ಟನ್ನು ನೋಡಿ, “ಆ ಸುಗೋಯ್‌’ (ವ್ಹಾ ಗ್ರೇಟ್‌) ಎಂದು ಮಾತಾಡಿಕೊಂಡಿದ್ದರು. ಸಹಕಾರ ತತ್ವದ ಗುಟ್ಟು, ಜಪಾನನ್ನು ಮುಟ್ಟಿದ್ದು, ತಟ್ಟಿದ್ದು ಹೀಗೆ.

ಕೊಪ್ಪ, ತೀರ್ಥಹಳ್ಳಿ, ಶೃಂಗೇರಿಗೆ ಹೋದರೆ, ಹಸಿರು- ತೆಳುಹಳದಿ ಪಟ್ಟೆಯ ಬಸ್ಸುಗಳು, ಯೂನಿಫಾರಂ ತೊಟ್ಟಂತೆ ಓಡಾಡುತ್ತಿರುತ್ತವೆ. ಕೆಸರಿನಲ್ಲಿ ಎದ್ದುಬಂದ ಮಗುವಿನಂತೆ, ಮಣ್ಣು ಮೆತ್ತಿಕೊಂಡ ಚಕ್ರಗಳಿಂದ ಆ ಬಸ್ಸು ಥೇಟ್‌ ಹಳ್ಳಿಗನಾಗಿಯೇ ಕಾಣಿಸುತ್ತದೆ. ಕೂಲಿಕಾರನಂತೆ, ದೊಡ್ಡ ದೊಡ್ಡ ಮೂಟೆಗಳು, ಕೃಷಿ ಸಾಮಗ್ರಿಗಳನ್ನು ಹೊತ್ತು ತರುವ “ಸಾರಿಗೆ’ಯ ಶ್ರದ್ಧೆಗೆ ಇವತ್ತಿಗೂ ದಣಿವಾಗಿಲ್ಲ. ದೂರದಿಂದ ಓಡಿಬರುವ ಪ್ರಯಾಣಿಕನ ಕಷ್ಟ ನೋಡಿ, ಕಾಯುವ; ನಡುಗಾಡಿನಲ್ಲಿ ಕೈ ಅಡ್ಡಹಾಕಿದಲ್ಲೆಲ್ಲ ಸ್ಟಾಪ್‌ ಕೊಡುವ ಬಸ್ಸೇನಾದರೂ, ಇದ್ದರೆ ಅದು “ಸಾರಿಗೆ’ ಮಾತ್ರವೇ. ಮಕ್ಕಳನ್ನು ಸರಿಯಾದ ಟೈಮಿಗೆ ಶಾಲೆಯ ಬುಡಕ್ಕೆ ಬಿಡುವ ಪೋಷಕನಾಗಿ, ಬಡವನ ಮದುವೆಗೆ ಅಗ್ಗದ ದರದಲ್ಲಿ ದಿಬ್ಬಣವಾಗಿ ಬಂದ ಬಂಧುವಾಗಿ, ಪೊಲಿಯೊ ಲಸಿಕೆಗೂ ನಾವಿಕನಾಗಿ- ಮಲೆನಾಡಿನೊಳಗೆ “ಸಾರಿಗೆ’ ಒಂದಾಗಿದೆ.

ಹ‌ಳ್ಳಿ ರಸ್ತೆಗಳು ಟಾರು ಕಾಣದಂಥ ಕಾಲದಲ್ಲಿ, ಜಲ್ಲಿರಸ್ತೆಗಳತ್ತ ವಾಹನಗಳು ತಿರುಗಿಯೂ ನೋಡದಂಥ ಕಾಲದಲ್ಲಿ, ಸಹಕಾರ ಸಾರಿಗೆ ಬಸ್ಸುಗಳು, ಜೋಲಾಡುತ್ತಾ, ಹಳ್ಳಿಗಳನ್ನು ನೋಡಿದ್ದವು. “ಸಾರಿಗೆ’ ಹುಟ್ಟುವ ಮುನ್ನವಿದ್ದ ಶಂಕರ್‌ ಕಂಪನಿಯ ಬಸ್ಸುಗಳೂ ಹೀಗೆಯೇ ಇದ್ದವು. ಕಾರ್ಮಿಕರ ವೇತನ ಹೆಚ್ಚಳಕ್ಕೆ ಒಪ್ಪದೇ ಇದ್ದಾಗ, ಶಂಕರ್‌ ಕಂಪನಿ ವಿರುದ್ಧ ಕಾರ್ಮಿಕರೇ ತಿರುಗಿಬಿದ್ದರು. ಸಂಸ್ಥೆ ಮುಚ್ಚಿದ್ದರಿಂದ 123 ಕಾರ್ಮಿಕರು ಬೀದಿಗೆ ಬಂದರು. ಹಾಗೆ ಹೊರಬರುವಾಗ ಕಾರ್ಮಿಕರಿಗೆ ಸಿಕ್ಕ ಒಟ್ಟು 12 ಲಕ್ಷ ರೂ. ಹಣದಲ್ಲಿ, ಶಂಕರ್‌ ಕಂಪನಿಯ 6 ಬಸ್ಸುಗಳನ್ನು ಸಂತ್ರಸ್ತರು ಖರೀದಿಸಿ, ಸಹಕಾರಿ ತತ್ವದಡಿ ಕಾರ್ಮಿಕರೇ ಮಾಲಿಕರಾಗಿ 1991, ಮಾರ್ಚ್‌ 8ರಂದು “ಸಹಕಾರ ಸಾರಿಗೆ’ ಸಂಸ್ಥೆಯನ್ನು (ಟಿಸಿಎಸ್‌) ಕಟ್ಟಿದರು. ಇಲ್ಲಿ ದುಡಿಯುವ ಪ್ರತಿ ಕಾರ್ಮಿಕನೂ ಸಂಸ್ಥೆಯ ಷೇರು ಖರೀದಿಸಿ, ಮಾಲೀಕನೇ ಆದ. ಟಿಸಿಎಸ್‌ ಸಂಸ್ಥೆ ಏಷ್ಯಾ ಖಂಡಕ್ಕೇ ಮಾದರಿ ಆಗಿ, ಕೊಂಪೆಯಂತಿದ್ದ ಕೊಪ್ಪ ಪಟ್ಟಣಕ್ಕೆ ಕಳೆತಂದುಕೊಟ್ಟಿತು.

ಈಗ, ಸಾರಿಗೆಯ ಒಟ್ಟು 73 ಬಸ್ಸುಗಳಿವೆ. ಕೊಪ್ಪದ ಕೆಸವೆ ರಸ್ತೆಯಲ್ಲಿ 2 ಎಕರೆ 20 ಗುಂಟೆ ಜಾಗದಲ್ಲಿ ಸ್ವಂತ ವರ್ಕ್‌ಶಾಪ್‌ ಇದೆ. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ- ಈ ಮೂರು ಜಿಲ್ಲೆಗಳನ್ನೊಳಗೊಂಡಂತೆ 74 ಮಾರ್ಗಗಳಲ್ಲಿ ಸಾರಿಗೆ ಬಸ್ಸುಗಳು ಓಡಾಡುತ್ತವೆ. ಮಲೆನಾಡಿನ ಸಹಸ್ರಾರು ಮಂದಿಗೆ ಕೆಲಸ ಕೊಟ್ಟ ಸಂಸ್ಥೆಯಲ್ಲಿ ಈಗಿರುವ ಒಟ್ಟು ಕಾರ್ಮಿಕರು, 280. ಕಾಲುಗಳಿಲ್ಲದ ದಿವ್ಯಾಂಗರೂ ಇಲ್ಲಿ ಕಂಪ್ಯೂಟರ್‌ ಚಲಾಯಿಸುವ ಉತ್ಸಾಹಿಗಳು. ಮಾನವೀಯತೆಯ ಆಧಾರದಲ್ಲಿ 7 ವಿಧವೆಯರಿಗೆ ಇಲ್ಲಿ ಕೆಲಸ ಸಿಕ್ಕಿದೆ. ಮೇಗೂರು, ಬಸ್ರಿಕಟ್ಟೆಯಂಥ ನಕ್ಸಲ್‌ಪೀಡಿತ ಪ್ರದೇಶಗಳಲ್ಲೂ ರಾತ್ರಿ ತಂಗುವ ಧೈರ್ಯ ಸಾರಿಗೆ ಬಸ್ಸುಗಳಿಗಿದೆ. ಮಕ್ಕಿಮನೆ, ಮೃಗವಧೆ, ಹೊದಲ, ಕಮ್ಮರಡಿ, ಕೊಂಡದಖಾನ್‌, ಶಿರವಾಸೆಯಂಥ ಕುಗ್ರಾಮಗಳಲ್ಲಿ ಬಸ್ಸುಗಳು ತಂಗಿ, ಸಿಬ್ಬಂದಿ ಅಲ್ಲಿಯೇ ಬೀಡು ಬಿಡುತ್ತಾರೆ.

Advertisement

ನಷ್ಟಕ್ಕೆ ಕಾರಣಗಳೇನು?
2013ರಿಂದ ಸರ್ಕಾರ ಬಸ್‌ ದರ ಹೆಚ್ಚಳ ಮಾಡಲು ಅವಕಾಶವನ್ನೇ ನೀಡಲಿಲ್ಲ. ಆಗ ಡೀಸೆಲ್‌ ದರ 52 ರೂ. ಇತ್ತು. ಈಗ 70 ರೂ. ಆಗಿದೆ. ವಾಹನ ವಿಮೆ ಶೇ.42ರಷ್ಟು ಜಾಸ್ತಿ ಆಗಿದೆ. ಆಗ ಒಂದು ಬಸ್ಸಿಗೆ 16 ಸಾವಿರ ರೂ. ವಿಮೆ ಕಟ್ಟಿದರೆ, ಮುಗಿಯುತ್ತಿತ್ತು; ಈಗ 72 ಸಾವಿರ ರೂ. ಮುಟ್ಟಿದೆ. ಬಿಡಿಭಾಗಗಳ ದರ ಅಗಾಧ ಹೆಚ್ಚಳ ಕಂಡಿದೆ. ದಿನಕ್ಕೆ ಒಟ್ಟು 5000 ಲೀ. ಡೀಸೆಲ್‌ ಅನ್ನು ಬಸ್ಸುಗಳು ಕುಡಿಯುತ್ತವೆ. ಟಿಕೆಟ್‌ ಕಲೆಕ್ಷನ್ನಿಂದ ನಿತ್ಯ ಬರುವ 4 ಲಕ್ಷ ರೂ.ನಲ್ಲಿ 3 ಲಕ್ಷ ರೂ. ಡೀಸೆಲ್‌ಗೇ ಸುರಿಯಬೇಕಾಗಿದೆ. ಪ್ರತಿ ತಿಂಗಳು 15 ಲಕ್ಷ ರೂ. ನಷ್ಟವಾಗುತ್ತಾ, ಅದು ಸಾಲವಾಗಿ, ಅದು 6.60 ಕೋಟಿ ರೂ. ಮುಟ್ಟಿದೆ.
ಎರಡು ವರ್ಷದ ಕೆಳಗೆ 15 ವರ್ಷ ಮೀರಿದ ಬಸ್ಸುಗಳನ್ನು ಓಡಿಸಬಾರದು ಎಂಬ ಕಾನೂನು ಬಂದ ಮೇಲೆ, ಸಾರಿಗೆ ಸಂಸ್ಥೆಗೆ ಸಾಲದ ಭಾರದಿಂದ ಮತ್ತೆ ತಲೆಎತ್ತಲಾಗಲಿಲ್ಲ. ಹಾಗೆ ವಯಸ್ಸಾದ 14 ಬಸ್ಸುಗಳು, ಗುಜರಿ ಸೇರಿದವು. ಅಷ್ಟೇ ಸಂಖ್ಯೆಯ ಹೊಸಬಸ್ಸುಗಳು, ಸಾಲದಲ್ಲಿಯೇ ಸಾರಿಗೆ ಸಂಸ್ಥೆಯ ಬಾಗಿಲಲ್ಲಿ ನಿಂತವು.


ಬಸ್ಸು ಹತ್ತುವವರಿಲ್ಲ…
ಮಲೆನಾಡಿಗೆ ಕಾಡಿರುವ ಇನ್ನೊಂದು ಸಮಸ್ಯೆ, ಬಹುಪಾಲು ಯುವಕರು ಬೆಂಗಳೂರು ಸೇರಿರುವುದು. ಮನೆಗೊಂದು ವಾಹನವನ್ನು ಕಂಡವರೆಲ್ಲ, ಬಸ್ಸುಗಳಲ್ಲಿ ಓಡಾಡುವುದನ್ನು ಕಡಿಮೆ ಮಾಡಿದರು. ಸ್ಟೂಡೆಂಟ್‌ ಪಾಸ್‌ಗಳನ್ನು ಹೊಂದಿರುವ ಶಾಲೆಯ ಮಕ್ಕಳನ್ನು ಬಿಡಲು ಹಳ್ಳಿಗೆ ಹೋದರೆ, ವಾಪಸು ಬರುವಾಗ ಬಸ್ಸು ಪೂರಾ ಖಾಲಿ ಖಾಲಿ. ಆರ್‌ಟಿಒ ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು, ಬಸ್‌ ಓಡಿಸಲೇಬೇಕಾದಂಥ ಸ್ಥಿತಿ ಸಂಸ್ಥೆಗೆ ಎದುರಾಯಿತು. ಪೈಪೋಟಿಯಾಗಿ ಹತ್ತಾರು ಖಾಸಗಿ ಬಸ್‌ ಸಂಸ್ಥೆಗಳು ಹುಟ್ಟಿಕೊಂಡವು.

ನಷ್ಟದ ಕಾರಣಕ್ಕಾಗಿ, ಕೆಲವು ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಸಂಬಳ ಏರಿಕೆಯೇ ಆಗಿಲ್ಲ. ಪಿ.ಎಫ್. ಸೌಲಭ್ಯ ಎಂದೋ ನಿಂತಿದೆ. ಪರಿಣತರು ಬೇರೆ ಸಂಸ್ಥೆಗಳತ್ತ ಮುಖ ಮಾಡಿದರು. ಇವತ್ತೇನು ಚಿಕ್ಕಮಗಳೂರು ವಿಭಾಗದ ಕೆಎಸ್ಸಾರ್ಟಿಸಿಯಲ್ಲಿ, ಬೆಂಗಳೂರಿನ ಐಟಿಬಿಟಿಗಳಲ್ಲಿ, ಸ್ಕೂಲ್‌ ಬಸ್ಸುಗಳಲ್ಲಿ ಡ್ರೈವರ್‌ ಆಗಿದ್ದಾರೋ, ಅವರಲ್ಲಿ ಅನೇಕರು ಒಂದೊಮ್ಮೆ ಸಹಕಾರ ಸಾರಿಗೆಯ “ಕಾಕ್‌ಪಿಟ್‌’ನಲ್ಲಿ ಕುಳಿತವರು.
ಹಳ್ಳಿಗಳ ಜೀವನಾಡಿಯಾಗಿ, ಸಹಸ್ರಾರು ಮಂದಿಗೆ ಉದ್ಯೋಗ ಕೊಟ್ಟ ಒಂದು ಸಂಸ್ಥೆ, ಈಗ ನಷ್ಟದಲ್ಲಿದೆ ಎಂದಾಗ, ಯಾರಿಗೂ ಆಘಾತವೇ. ಎಲ್ಲೋ ಬೆಂಗಳೂರಿನಲ್ಲಿ ಸಂಸ್ಥೆ ಬಾಗಿಲು ಹಾಕಿತು ಎಂದರೆ ಅದು ಅಷ್ಟು ದೊಡ್ಡ ವಿಚಾರವೇ ಅಲ್ಲ. ಅಲ್ಲಿ ಬದುಕು ರೂಪಿಸಿಕೊಳ್ಳಲು ನೂರಾರು ದಾರಿಗಳುಂಟು. ಆದರೆ, ಆಪತ್ತಿಗಾದವನೇ ನೆಂಟ ಎನ್ನುವ ಸ್ಥಿತಿಯಲ್ಲಿರುವ ಮಲೆನಾಡಿಗೆ “ಸಾರಿಗೆ’ಯೇ ತಂದೆ, “ಸಹಕಾರ’ವೇ ತಾಯಿ. ಇದನ್ನರಿತು ಸರ್ಕಾರ, ಸೂಕ್ತ ಸಹಕಾರ ತೋರಲಿ. ಜಪಾನಿಗರಿಗೆ ಆದ ಜ್ಞಾನೋದಯ ನಮ್ಮವರಿಗೂ ಆಗಲಿ.

– 2013ರಿಂದ ಟಿಕೆಟ್‌ ದರ ಏರಿಸಲು ಸರ್ಕಾರದಿಂದ ಅನುಮತಿ ಸಿಗಲಿಲ್ಲ.
– ಅಂದು 52 ರೂ. ಇದ್ದ ಡೀಸೆಲ್‌, ಇಂದು 70 ರೂ. ಆಗಿದೆ.
– ವಾಹನವಿಮೆಯಲ್ಲಿ ಅಪಾರ ಹೆಚ್ಚಳ.
– ವಾಹನ ಬಿಡಿಭಾಗಗಳ ಏರಿಕೆ.
– 15 ವರ್ಷದ ಮೀರಿದ ಬಸ್ಸುಗಳಿಗೆ ನಿರ್ಬಂಧ ನೀತಿ, ನುಂಗಲಾರದ ತುತ್ತು.
– ಪ್ರತಿತಿಂಗಳು 15 ಲಕ್ಷ ರೂ. ನಷ್ಟ.
– ಪ್ರಯಾಣಿಕರ ಇಳಿಕೆ, ಕೇವಲ ಶಾಲಾ ಬಸ್‌ ಆಗಿ ಬಳಕೆ.

ದುಡಿಯುವ ಪ್ರತಿಯೊಬ್ಬರೂ ಬಾಸ್‌ ಎನ್ನುವಂಥ ಸಂಸ್ಥೆ ನಮ್ಮದು. ದುಡಿದ ಹಣದಲ್ಲಿಯೇ ನಾವು ಸಂಬಳ ತೆಗೆದುಕೊಳ್ಳಬೇಕಾಗಿದೆ. ನಷ್ಟದಲ್ಲಿರುವ ಸಂಸ್ಥೆಯನ್ನು ಸರ್ಕಾರ, ಮೇಲೆತ್ತುವ ಕೆಲಸ ಮಾಡಬೇಕಾಗಿದೆ.
– ಇ.ಎಸ್‌. ಧರ್ಮಪ್ಪ, ಟಿಸಿಎಸ್‌ ಅಧ್ಯಕ್ಷ

– ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next