Advertisement
ಹಿಪ್ಪಲಿ ಬಳ್ಳಿಗೆ ಈ ಸೊರಗು ನಿರೋಧಕ ಶಕ್ತಿ ಇದೆ. ತೋಟದಲ್ಲಿ ಸಾವಿರಾರು ಬಳ್ಳಿ ಗಳಿಗೆ ಇಂತಹ ಕಸಿ ಮಾಡಿ ಕಾಳುಮೆಣಸಿನ ಕೃಷಿಯಲ್ಲಿ ಗೆದ್ದವರು ಜಯಾನಂದ – ವೀಣಾ ಶರ್ಮಾ ದಂಪತಿ ಪಂಜಿಕಲ್ಲು.
ದ.ಕ. ಜಿಲ್ಲೆಯ ಅಡ್ಯನಡ್ಕ ಸಮೀಪದ ಪಂಜಿಕಲ್ಲು ಇವರ ಕೃಷಿ ಕಾರ್ಯ ಕ್ಷೇತ್ರ. ಹಿರಿಯರಿಂದ ಬಂದ ಅಡಿಕೆ ತೋಟ. ಹಾಲಿನ ಡೇರಿ ಉಪ ವೃತ್ತಿ. ಸಾವಯವ ಕೃಷಿ. ಅಡಿಕೆ ಜತೆಗೆ ಬಾಳೆ, ತೆಂಗು, ಕಾಳುಮೆಣಸು ಉಪ ಬೆಳೆಗಳು. ಕಾಳುಮೆಣಸು ಬಳ್ಳಿಗೆ ಸೊರಗು ರೋಗ ಬಂದು ಸಾಯುತ್ತಿತ್ತು. ಇದಕ್ಕಾಗಿ ಇವರು ಕಂಡುಕೊಂಡ ಪರಿಹಾರ ಕಸಿ ಮೂಲಕ ಕಾಳು ಮೆಣಸಿನ ಬಳ್ಳಿ ಅಭಿವೃದ್ಧಿ. ಕೃಷಿ ವಿಜ್ಞಾನಿಯ ಸಲಹೆ
ಕೃಷಿ ವಿಜ್ಞಾನಿ ಯದು ಕುಮಾರ್ ಪುತ್ತೂರು ಇವರಿಗೆ ಕಾಳುಮೆಣಸಿನ ಕಸಿ ಕಲಿಸಿದವರು. 4 ವರ್ಷಗಳ ಹಿಂದೆ ಅವರ ನಿರ್ದೇಶನದಂತೆ ಹಿಪ್ಪಲಿ ತಾಯಿ ಬಳ್ಳಿಗೆ ಕಸಿ ಕಟ್ಟಿದ 30 ಕಾಳುಮೆಣಸಿನ ಬಳ್ಳಿ ತಂದು ನೆಟ್ಟರು. ಕಾಂಡವಾಗಿ ನೆಲಕ್ಕೆ ಬೇರಿಳಿಸುವ ತಾಯಿ ಹಿಪ್ಪಲ ಗಿಡದ ಕಸಿ ಭಾಗ ಎಳತಾಗಿರಬೇಕು. ಕಸಿ ಕಟ್ಟುವ ಸಯಾನ್ ಬೆಳೆದ ಉತ್ತಮ ಇಳುವರಿಯ ಕಾಳುಮೆಣಸಿನ ಎರಡು ಗಂಟು ಇರುವ ಬೆಳೆದ ಕಾಂಡವಾಗಿರಬೇಕು ಎನ್ನುವುದು ಮುಖ್ಯ. ಇದು ಮೃದು ಕಾಂಡ ಕಸಿ ವಿಧಾನದ ಪ್ರಮುಖ ವಿಷಯ. ಅಡಿಕೆ ಮರದ ಬುಡದಲ್ಲೇ ನೆಟ್ಟು ಬೆಳೆಸಿದ ಹಿಪ್ಪಲಿ ತಾಯಿ ಗಿಡ ಕಸಿಗೆ ಅತ್ಯುತ್ತಮ.
Related Articles
Advertisement
ಶರ್ಮಾ ದಂಪತಿ ಕಸಿ ಕಟ್ಟುವುದರಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಹಿಪ್ಪಲಿ ಗಿಡವನ್ನು ಅಡಕೆ ಮರದ ಬುಡದಲ್ಲಿ ನೆಟ್ಟು ಬೆಳೆಸುತ್ತಾ ಅದರ ಮೃದು ಕಾಂಡವನ್ನು ಆಯ್ದು, ದಿನಾಲೂ 10-15 ನಿಮಿಷ ಬಿಡುವು ಮಾಡಿಕೊಂಡು 4-5 ಹಿಪ್ಪಲಿ ಗಿಡಕ್ಕೆ ಕಸಿ ಕಟ್ಟುತ್ತಾರೆ. ಕಸಿ ಕಟ್ಟಿದ ಭಾಗ ಒಣಗಿ ಹೋಗದಂತೆ ಲಾಲಿಯ ಪ್ಲಾಸ್ಟಿಕ್ ತೊಟ್ಟೆಯನ್ನು ಕಟ್ಟಿ ರಕ್ಷಣೆ ಮಾಡುತ್ತಾರೆ.ಇವರು ಕಳೆದ 4 ವರ್ಷಗಳಲ್ಲಿ ಕಸಿ ಮಾಡಿದ ಗಿಡಗಳು ಸುಮಾರು 2 ಸಾವಿರಕ್ಕೂ ಮಿಕ್ಕಿವೆ. ಈ ವರ್ಷ ಇವರಿಗೆ ಉತ್ತಮ ಇಳುವರಿ ದೊರೆತಿದೆ. ಸೊರಗು ರೋಗಕ್ಕೆ ಮದ್ದು
ಹಿಪ್ಪಲಿ ಬಳ್ಳಿ ಮಣ್ಣಿನ ಮೂಲಕ ಬರುವ ಸೊರಗುರೋಗ ಪ್ರತಿರೋಧ ಶಕ್ತಿಯುಳ್ಳ ಸಸ್ಯ. ಹಿಪ್ಪಲಿ ಬಳ್ಳಿ ತಂಪಾದ ಸ್ಥಳದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ಬುಡದಲ್ಲಿ ಗಂಟೆಗಟ್ಟಲೆ ನೀರು ನಿಂತರೂ ಕೊಳೆಯುವ ಭಯವಿಲ್ಲ. ಕ್ವಿಕ್ ವಿಲ್ಟ್ (ಸೊರಗು ರೋಗ) ನಿರೋಧಕ ಶಕ್ತಿ ಹಿಪ್ಪಲಿ ಬಳ್ಳಿಗಿದೆ.
-ಯದುಕುಮಾರ್ ಪುತ್ತೂರು, ಕೃಷಿ ವಿಜ್ಞಾನಿ - ಶಂಕರ್ ಸಾರಡ್ಕ