ವಡೋದರಾ: ಏಕತಾ ಪ್ರತಿಮೆ ಇರುವ ನರ್ಮದಾ ನದಿಗೆ ನಿರ್ಮಿಸಲಾಗಿರುವ ಸರ್ದಾರ್ ಸರೋವರ ಅಣೆಕಟ್ಟೆ ಬಳಿಯ 2 ಕೊಳಗಳಲ್ಲಿದ್ದ ಮೊಸಳೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಕೆಲಸವನ್ನು ಗುಜರಾತ್ ಅರಣ್ಯ ಇಲಾಖೆ ಆರಂಭಿಸಿದೆ. ಏಕತಾ ಪ್ರತಿಮೆಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲೆಂದು ಸೀ ಪ್ಲೇನ್ ಸೇವೆ ಜಾರಿಗೆ ಉದ್ದೇಶಿಸಲಾಗಿದ್ದು, ಸೀ ಪ್ಲೇನ್ ಜೆಟ್ಟಿ ನಿರ್ಮಾಣಕ್ಕೆಂದು, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮೊಸಳೆಗಳನ್ನು ಸ್ಥಳಾಂತ ಸಲಾಗುತ್ತಿದೆ ಎಂದು ಸರಕಾರ ತಿಳಿಸಿದೆ. ಕಳೆದ ಮಂಗಳ ವಾರದ ವರೆಗೆ 15 ಮೊಸಳೆಗಳನ್ನು ಸ್ಥಳಾಂತರಿಸಲಾಗಿದೆ. 2 ಕೊಳಗಳಲ್ಲಿ ಕ್ರೊಕೊಡೈಲಸ್ ಪಲು ಸ್ಪ್ರೆ„ಸ್ ಎಂಬ ಜಾತಿಯ ಸುಮಾರು 500 ಮೊಸಳೆಗಳಿವೆ ಎಂದು ಅಂದಾಜಿಸಲಾಗಿದೆ. ಇದು ನಶಿಸುತ್ತಿರುವ ತಳಿಯಾದ್ದರಿಂದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ 1ನೇ ಪರಿಚ್ಛೇದದ ಅಡಿ ಸಂರಕ್ಷಿಸಲಾಗಿದೆ. ಇವುಗಳನ್ನು ಮೀನಿನ ಆಸೆ ತೋರಿಸಿ ಬಲೆಗೆ ಕೆಡವಲಾಗುತ್ತಿದೆ. 1 ಮೊಸಳೆ ಸುಮಾರು 10 ಅಡಿ ಉದ್ದವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಎರಡು ಕೊಳಗಳಲ್ಲಿ ಮೊಸಳೆಗಳಿದ್ದು, ಅವುಗಳನ್ನು ಸರಕಾರವೇ ಸ್ಥಳಾಂತರ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ವಿನಾಶದಂಚಿನಲ್ಲಿರುವ ಮೊಸಳೆಗಳ ಸ್ಥಳಾಂತರಕ್ಕೆ ಹಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.