ಸರ್ಕಾರದ ಪ್ರಸ್ತುತ ಯೋಜನೆ ಪ್ರಕಾರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಟ್ಟಡ ನಕ್ಷೆ, ಲೇಔಟ್ ನಕ್ಷೆ ಮತ್ತು ಭೂ ಪರಿವರ್ತನೆಗೆ ಏಕ ಗವಾಕ್ಷಿ ಯೋಜನೆ ಜಾರಿಗೊಳ್ಳಲಿದೆ. ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿ ಕಟ್ಟಡ ಬೈಲಾ ಹಾಗೂ ವಲಯ ನಿಯಂತ್ರಣ ನಿಯಮಾವಳಿ ಪ್ರಕಾರ ಇದ್ದರೆ, 30 ದಿನಗಳಲ್ಲಿ ಅರ್ಜಿ ವಿಲೇವಾರಿಗೊಳ್ಳುತ್ತದೆ.
ಭೂವ್ಯವಹಾರ ಕ್ಷೇತ್ರವು ಭ್ರಷ್ಟಾಚಾರದ, ಕಳ್ಳ ವ್ಯವಹಾರದ ಕೂಪವಾಗಿರುವುದು ತಿಳಿಯದಿರುವ ಸಂಗತಿಯೇನಲ್ಲ. ಸ್ವಂತ ಸೂರಿನ ಕನಸು ಹೊತ್ತ ಜನಸಾಮಾನ್ಯರಿಗೆ ಈ ಭ್ರಷ್ಟಾಚಾರದ ಮುಖ ದರ್ಶನವಾದಾಗ ಆಘಾತ, ನಿರಾಸೆ ಉಂಟಾಗುವುದು ಅಷ್ಟೇ ಸಹಜವೂ ಆಗಿದೆ. ಹಾಗೆಂದಾಕ್ಷಣ ಸರ್ಕಾರಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾರದರ್ಶಕತೆ ತರಲು ಕ್ರಮಗಳನ್ನೇ ಕೈಗೊಂಡಿಲ್ಲವೆಂದಲ್ಲ, ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಲೇ ಇವೆ. ಹಂತಹಂತವಾಗಿ ಈ ಕ್ಷೇತ್ರ ಸುಧಾರಣೆ ಕಾಣುತ್ತಿದೆ. ಸೈಟ್, ಫ್ಲಾಟ್ ನೀಡುವುದಾಗಿ ಜನರಿಂದ ಹಣ ಸಂಗ್ರಹಿಸಿ ಬಳಿಕ ಟೋಪಿ ಹಾಕುವ ರಿಯಲ್ ಎಸ್ಟೇಟ್ ಕಂಪನಿಗಳ ಅದೆಷ್ಟೋ ಪ್ರಕರಣಗಳನ್ನು ಕೇಳಿದ್ದೇವೆ. ಅದು ಖಾಸಗಿ ಕಂಪನಿಗಳ ಕಥೆಯಾದರೆ, ಭೂ ಪರಿವರ್ತನೆ, ನೋಂದಣಿ ವಿಚಾರವಾಗಿ ಸರ್ಕಾರಿ ಕಚೇರಿಗಳಲ್ಲೇ ಜನರು ಅನಗತ್ಯ ವಿಳಂಬ ಎದುರಿಸುವುದು, ಲಂಚದ ಹೊಳೆ ಹರಿಸಬೇಕಾಗಿರುವುದು ಕೂಡಾ ಕಂಡುಬರುವ ವಾಸ್ತವಗಳಾಗಿವೆ. ಮಧ್ಯವರ್ತಿಗಳ ಹಾವಳಿಯಂತೂ ವಿಪರೀತವಾಗಿದೆ. ಹೀಗಾಗಿ ಜನ ಸಾಮಾನ್ಯರಿಗೆ ನೇರವಾಗಿ ಅನ್ವಯಿಸುವ ಭೂ ಪರಿವರ್ತನೆ, ವಿಕ್ರಯ, ನೋಂದಣಿ ಪ್ರಕ್ರಿಯೆ ಇನ್ನಷ್ಟು ಸರಳ ಹಾಗೂ ಪಾರದರ್ಶಕವಾಗಬೇಕಾದ ಅವಶ್ಯಕತೆಯಿದೆ.
ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳ ಅಕ್ರಮಗಳಿಗೆ ಕಡಿವಾಣ ಹಾಕಲು ರೆರಾ ಕಾಯ್ದೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದೆ. ಅದರ ಅನುಷ್ಠಾನ ಕರ್ನಾಟಕದಲ್ಲೂ ಆಗುತ್ತಿದೆ. ರೆರಾ ಕಾಯ್ದೆ ಅಡಿಯಲ್ಲಿ ನೋಂ ದಣಿ ಮಾಡಿಕೊಳ್ಳದ 1,626 ಪ್ರೊಜೆಕ್ಟ್ಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿತ್ತು. ಈ ಪೈಕಿ 924 ರಿಯಲ್ ಎಸ್ಟೇಟ್ ಪ್ರೊಜೆಕ್ಟ್ಗಳಿಂದ ಈ ತನಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಇವುಗಳನ್ನು ಕಪ್ಪುಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ರಾಜ್ಯ ಸರ್ಕಾರ ಭೂ ಪರಿವರ್ತನೆಗೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಜಾರಿಗೊಳಿಸಲು ಹೊರಟಿರುವುದು ಸರ್ಕಾರಿ ವ್ಯವಸ್ಥೆಯ ಭ್ರಷ್ಟಾಚಾರ ಮಟ್ಟ ಹಾಕುವ ನಿಟ್ಟಿನಲ್ಲಿ ಹೊಸ ಹೆಜ್ಜೆಯಾಗಲಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆಗೊಳಿಸುವುದು, ವಸತಿ ಉದ್ದೇಶದ ಭೂಮಿಯನ್ನು ವಾಣಿಜ್ಯ ಬಳಕೆಗೆ ಪರಿವರ್ತನೆಗೊಳಿಸುವುದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಪ್ರಸ್ತುತ ನಾಗರಿಕರು ಈ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದರೆ ಹಲವು ಇಲಾಖೆಗಳನ್ನು ದಾಟಿ ಫೈಲ್ ಮುನ್ನಡೆಯಲು ತಿಂಗಳುಗಳೇ ಬೇಕಾಗುತ್ತವೆ. ಕೆಲವೊಂದು ಭೂ ಪರಿವರ್ತನೆಗೆ 14 ಇಲಾಖೆಗಳ ಒಪ್ಪಿಗೆ ಬೇಕಾಗುವುದೂ ಉಂಟು. ಇಲ್ಲೆಲ್ಲ ಅಧಿಕಾರಿಗಳು ಅರ್ಜಿಯನ್ನು ಅಂಗೀಕರಿಸಲು ಲಂಚಕ್ಕೆ ಬೇಡಿಕೆ ಸಲ್ಲಿಸುವುದು ಅಥವಾ ಮಧ್ಯವರ್ತಿಗಳ ಮೂಲಕ ಹೋದರಷ್ಟೇ ಕೆಲಸ ಎಂಬಂಥ ಪರಿಸ್ಥಿತಿ ಇದೆ.
ಸರ್ಕಾರದ ಪ್ರಸ್ತುತ ಯೋಜನೆ ಪ್ರಕಾರ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಟ್ಟಡ ನಕ್ಷೆ, ಲೇಔಟ್ ನಕ್ಷೆ ಮತ್ತು ಭೂ ಪರಿವರ್ತನೆಗೆ ಏಕ ಗವಾಕ್ಷಿ ಯೋಜನೆ ಜಾರಿಗೊಳ್ಳಲಿದೆ. ನಾಗರಿಕರು ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿ ಕಟ್ಟಡ ಬೈಲಾ ಹಾಗೂ ವಲಯ ನಿಯಂತ್ರಣ ನಿಯಮಾವಳಿ ಪ್ರಕಾರ ಇದ್ದರೆ, 30 ದಿನಗಳಲ್ಲಿ ಅರ್ಜಿ ವಿಲೇವಾರಿಗೊಳ್ಳುತ್ತದೆ. ಎಲ್ಲಾ ಇಲಾಖೆಗಳ ನಿರಾಕ್ಷೇಪಣೆ ಪತ್ರವನ್ನು ನಗರಾಭಿವೃದ್ಧಿ ಇಲಾಖೆಯೇ ಪಡೆದುಕೊಳ್ಳಲಿದೆ. ಜನರು ವಿವಿಧ ಇಲಾಖೆಗಳ ಬಾಗಿಲು ಬಡಿಯಬೇಕಿಲ್ಲ. ಮಧ್ಯವರ್ತಿಗಳೂ ಬೇಕಿರುವುದಿಲ್ಲ. ಅರ್ಜಿ ನಿಯಮ ಪ್ರಕಾರ ಇಲ್ಲದೇ ಇದ್ದರೆ, ತಕ್ಷಣವೇ ತಿರಸ್ಕಾರವೂ ಆಗುತ್ತದೆ. ಅರ್ಜಿ ಯಾವ ಹಂತದಲ್ಲಿದೆ ಎಂಬುದು ಮೊಬೈಲ್‌ಗೇ ಅಪ್ಡೆàಟ್ ಆಗುತ್ತದೆ. ಇದೊಂದು ಉತ್ತಮ ನಿರ್ಧಾರವಾಗಿದ್ದು, ಸಮರ್ಪಕವಾಗಿ ಜಾರಿಯಾಗಬೇಕಷ್ಟೆ. ಅನುಷ್ಠಾನದ ಸವಾಲು ಇಲ್ಲಿದೆ. ಏಕಗವಾಕ್ಷಿ ಯೋಜನೆಯ ಸಮರ್ಪಕ ಜಾರಿಗೆ ಅಧಿಕಾರಿಗಳು, ಮಧ್ಯವರ್ತಿ ಮಾಫಿಯಾ ಬಿಡುತ್ತಾ ಅನ್ನೋದು ಇಲ್ಲಿ ಪ್ರಶ್ನೆ. ಯಶಸ್ವಿ ಅನುಷ್ಠಾನಕ್ಕೆ ಸರ್ಕಾರದ ಇಚ್ಛಾಶಕ್ತಿ ತುಂಬಾ ಮುಖ್ಯ.