Advertisement

ಪಾರದರ್ಶಕ ಆಡಳಿತವೇ ಆದ್ಯತೆ

12:57 AM Aug 29, 2019 | Lakshmi GovindaRaj |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಬಿ.ಎಚ್‌.ಅನಿಲ್‌ ಕುಮಾರ್‌ ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಮಂಜುನಾಥ ಪ್ರಸಾದ್‌, ಅನಿಲ್‌ ಕುಮಾರ್‌ ಅವರಿಗೆ ಬೆಳ್ಳಿ ಬ್ಯಾಟನ್‌ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಆಯುಕ್ತ ಅನಿಲ್‌ ಕುಮಾರ್‌, ವಿಶ್ವದ ಪ್ರಮುಖ ನಗರಗಳಲ್ಲಿ ಬೆಂಗಳೂರು ತನ್ನದೇ ಖ್ಯಾತಿ ಗಳಿಸಿದೆ ಇದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಈಗ ಅನಾಹುತ ಸಂಭವಿಸಿದ ಮೇಲೆ ಅದಕ್ಕೆ ಪ್ರತಿಕ್ರಿಯೆ ನೀಡುವ ಕೆಲಸ ನಡೆಯುತ್ತಿದೆ. ಇದಕ್ಕೆ ಬದಲಾಗಿ ಸಮಸ್ಯೆಗಳು ಉದ್ಭವವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.

ಬೆಂಗಳೂರಿನ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಕಾರವೂ ಮುಖ್ಯ. ಅರ್ಜಿ ಸಲ್ಲಿಸುವುದು, ಸೌಲಭ್ಯ ಪಡೆದುಕೊಳ್ಳುವುದು ಹಾಗೂ ಸಮಸ್ಯೆಗಳ ಬಗ್ಗೆ ದೂರು ನೀಡುವುದರ ಜತೆಗೆ ಜನತೆ ಪ್ರಜ್ಞಾವಂತರಾಗಿ ವರ್ತಿಸಬೇಕು. ಸಾರ್ವಜನಿಕರ ಸೇವೆ ಹಾಗೂ ಜನಸ್ನೇಹಿ ಆಡಳಿತ ನೀಡುವುದು ಬಿಬಿಎಂಪಿ ಅಧಿಕಾರಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಿಬಿಎಂಪಿಯಲ್ಲಿ ವಿವಿಧ ಆದಾಯ ಮೂಲಗಳ ಅಭಿವೃದ್ಧಿ, ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ಹಾಗೂ ಆದಾಯ ಸೋರಿಕೆಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗುವುದು. ಆಸ್ತಿ ತೆರಿಗೆ ಮಿತಿಯಿಂದ ಹೊರಗೆ ಉಳಿದಿರುವ ಕೆಲವು ಆಸ್ತಿಗಳ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌; ಅನುದಾನ ನಿರಾಕರಿಸಿದ ಅರ್ಥಿಕ ಇಲಾಖೆ: ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಇದು ಸರ್ಕಾರದ ಯೋಜನೆಯಾಗಿದ್ದು, ಶೇ.50ರಷ್ಟು ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಈ ಮನವಿಯನ್ನು ಆರ್ಥಿಕ ಇಲಾಖೆ ನಿರಾಕರಿಸಿದೆ. ಈಗ ಬಿಬಿಎಂಪಿ ಸಂಪನ್ಮೂಲಗಳಿಂದಲೇ ಇಂದಿರಾ ಕ್ಯಾಂಟೀನ್‌ ನಡೆಸಬೇಕಾಗಿದೆ. ಈ ಬಗ್ಗೆ ಪಾಲಿಕೆ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ನೂತನ ಆಯುಕ್ತರು ಹೇಳಿದರು.

Advertisement

ನಗರದ ಅಭಿವೃದ್ಧಿಗೆ ತಜ್ಞರ ಸಲಹೆ; ಬೆಂಗಳೂರು-2050 ಮುನ್ನೋಟ: ಬೆಂಗಳೂರಿನ ನಾಗರಿಕರಿಗೆ ಉತ್ತಮ ಆಡಳಿತ ನೀಡುವುದು, ನೀರು ಪೂರೈಕೆ, ಸಾರಿಗೆ ಹಾಗೂ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಸಂಸ್ಥೆಗಳು ಹಾಗೂ ನಗರ ತಜ್ಞರಿಂದ ಸಲಹೆ ಪಡೆಯಲಾಗುವುದು. ನಗರದಲ್ಲಿ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಮುಂದಿನ 20ರಿಂದ 30 ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಮನವಿ: ಗಣೇಶ ಚತುರ್ಥಿಯನ್ನು ಬೆಂಗಳೂರಿನ ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಹಬ್ಬ ಆಚರಣೆ ಮಾಡುವ ಜತೆಗೆ ನಗರದ ಪರಿಸರ ಸಂರಕ್ಷಣೆಗೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಎಲ್ಲವೂ ಎನ್‌ಜಿಟಿ ಹೇಳಿದಂತೆ ನಡೆಯಬೇಕೆಂದರೆ ಹೇಗೆ?: ಬೆಳ್ಳಳ್ಳಿ ಕ್ವಾರಿ ತುಂಬಿದ್ದು, ಇದಕ್ಕೆ ಪರ್ಯಾಯ ಮಾರ್ಗಗಳೇನು ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, “ಮಿಟಗಾನಹಳ್ಳಿ ಮತ್ತು ಮಾರೆನಹಳ್ಳಿ ಕ್ವಾರಿಗಳಲ್ಲಿ ಮಿಶ್ರತ್ಯಾಜ್ಯ ಸುರಿಯಲು ಚಿಂತನೆ ನಡೆಸಿದ್ದು, ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು. ರಾಷ್ಟ್ರೀಯ ಹಸಿರುವ ನ್ಯಾಯಾಧಿಕರಣ (ಎನ್‌ಜಿಟಿ) ಸಹ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು.

ಎಲ್ಲವೂ ತನ್ನ ನಿರ್ದೇಶನದಂತೆ ನಡೆಯಬೇಕು ಎಂದರೆ ಸಾಧ್ಯವಿಲ್ಲ. ನನಗೆ ಜಾದು, ತಂತ್ರ ಗೊತ್ತಿಲ್ಲ. ತ್ಯಾಜ್ಯ ಸಮಸ್ಯೆ ಪರಿಹಾರವಾಗುವವರೆಗೆ ಮಿಶ್ರತ್ಯಾಜ್ಯ ಸುರಿಯುವುದಕ್ಕೆ ಕ್ವಾರಿಗಳನ್ನು ಅವಲಂಬಿಸಬೇಕಿದೆ. ತ್ಯಾಜ್ಯದ ಮೂಲಕ ವಿದ್ಯುತ್‌ ಉತ್ಪಾದನೆ ಮಾಡುವ ಘಟಕ (ವೆಸ್ಟ್‌ ಟು ಎರ್ನಜಿ) ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಲ್ಲವನ್ನೂ ಒಂದೇ ದಿನದಲ್ಲಿ ಮಾಡಲು ಸಾಧ್ಯವಿಲ್ಲ. ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಮಯ ಬೇಕು ಎಂದು ಹೇಳಿದರು.

40 ತಿಂಗಳು ಪೂರೈಸಿದ ಮೊದಲ ಆಯುಕ್ತ: ಮಹಾನಗರ ಪಾಲಿಕೆಯ 70 ವರ್ಷಗಳ ತಿಹಾಸದಲ್ಲಿ ಅತಿ ಹೆಚ್ಚಿನ ಅವಧಿಗೆ ಆಯುಕ್ತರಾಗಿ (40 ತಿಂಗಳು), ನಾಲ್ಕು ಮೇಯರ್‌ಗಳೊಂದಿಗೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಮಂಜುನಾಥ ಪ್ರಸಾದ್‌ ಪಾತ್ರರಾಗಿದ್ದಾರೆ.

40 ತಿಂಗಳ ಅವಧಿಯಲ್ಲಿ ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ರಾಜಕಾಲುವೆ ಅಭಿವೃದ್ಧಿ, ಇಂದಿರಾ ಕ್ಯಾಂಟೀನ್‌ ಯೋಜನೆ ಅನುಷ್ಠಾನ, ಆರ್ಥಿಕ ಶಿಸ್ತು ಹಾಗೂ ಸಾಲದ ಹೊರೆ ಕಡಿತ ಸೇರಿ ಆಡಳಿತಾತ್ಮಕವಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ತೃಪ್ತಿ ಇದೆ.
-ಮಂಜುನಾಥ ಪ್ರಸಾದ್‌, ನಿರ್ಗಮಿತ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next