Advertisement

ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಚುನಾವಣೆಗೆ ಪಾರದರ್ಶಕ ನೀತಿ

04:33 PM May 20, 2022 | Team Udayavani |

ಕಾರವಾರ: ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಪಾರದರ್ಶಕವಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜರುಗಿದ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಅವರು ಮಾತನಾಡಿ, ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿ ಅಗತ್ಯ ಕ್ರಮ ವಹಿಸಲು ತಹಶೀಲ್ದಾರ್‌ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಗಳಿಗೆ ಸೂಚಿಸಿದರು.

ಚುನಾವಣೆ ಆಯೋಗವು ಹೊರಡಿಸಿದ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸಬೇಕು. ಯಾವುದೇ ಗೊಂದಲ ಗಲಭೆಗಳಿಗೆ ಅವಕಾಶ ನೀಡದೇ ಚುನಾವಣೆ ಸುಲಲಿತವಾಗಿ ಸಾಗಲು ಕ್ರಮ ಕೈಗೊಳ್ಳಬೇಕೆಂದರು.

ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ, ಸರಕಾರಿ ನೌಕರರು ಚುನಾವಣೆಯಲ್ಲಿ ಅಭ್ಯರ್ಥಿಯ ಪರವಾಗಿ ನೇರವಾಗಿ ಇಲ್ಲವೇ ಪರೋಕ್ಷವಾಗಿ ಬೆಂಬಲಿಸಿ ಮತದಾರರ ಮೇಲೆ ಪ್ರಭಾವ ಬೀರುವಂತಿಲ್ಲ. ಮಂತ್ರಿ, ಶಾಸಕರು ಚುನಾವಣೆ ಸಭೆಗಳಲ್ಲಿ ಭಾಗವಹಿಸುವಂತಿಲ್ಲವೆಂದು ಹೇಳಿದರು.

ಹೊಸ ಕಾಮಗಾರಿಗೆ ಚಾಲನೆ, ಶಂಕುಸ್ಥಾಪನೆ, ಅಡಿಗಲ್ಲು, ಉದ್ಘಾಟನೆ ಮಾಡುವಂತಿಲ್ಲ. ಮಾಡಿದಲ್ಲಿ ಅಪರಾಧವಾಗುತ್ತದೆ ಎಂದು ತಿಳಿಸಿದರು.

Advertisement

ಪಕ್ಷ ಭೇದವಿಲ್ಲದೇ ಎಲ್ಲ ಪಕ್ಷದ ಅಭ್ಯರ್ಥಿಗಳಿಗೂ ಚುನಾವಣೆ ಸಭೆ ನಡೆಸಲು ಅನುಮತಿ ನೀಡಬೇಕು. ಅಭ್ಯರ್ಥಿಗಳ ಮಧ್ಯೆ ಗಲಾಟೆ ಸಂಭವಿಸದ ರೀತಿಯಲ್ಲಿ ಸೂಕ್ತ ಸಮಯ, ಸ್ಥಳ ನಿಗದಿ ಮಾಡಿಕೊಡಬೇಕೆಂದು ತಹಶೀಲ್ದಾರ್‌ಗೆ ಸೂಚಿಸಿದರು.

ಚುನಾವಣೆ ಸಭೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಅನುಸರಿಸಿ ಅನುಮತಿ ನೀಡಬೇಕು. ಪ್ರತಿಯನ್ನು ಅಭ್ಯರ್ಥಿಗೆ ಹಾಗೂ ಮುಂದಿನ ಕ್ರಮಕ್ಕಾಗಿ ಪೊಲೀಸ್‌ ಅಧಿಕಾರಿಗಳಿಗೆ ಒಂದು ಪ್ರತಿ ನೀಡಬೇಕು. ತಹಶೀಲ್ದಾರರು ಪ್ರತಿ ತಾಲೂಕುಗಳಲ್ಲಿ ವಿಡಿಯೋ ತಂಡ ರಚಿಸಿ, ಪ್ರತಿ ಅಭ್ಯರ್ಥಿಯ ಸಭೆಗಳನ್ನು ವಿಡಿಯೋ ಮಾಡಿಟ್ಟುಕೊಂಡಿರಬೇಕು. ಚುನಾವನಾ ನೀತಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಪ್ರತಿದಿನದ ಚಟುವಟಿಕೆ ಮಾಹಿತಿ ಸಲ್ಲಿಸಬೇಕು. ಪ್ರಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಅಥವಾ ಸ್ವಂತ ಸ್ಥಳದಲ್ಲಿ ಸಭೆ ನಡೆಸಲು, ಬ್ಯಾನರ್‌ ಬಂಟಿಕ್ಸ್‌, ಪ್ಲೆಕ್ಸ್‌ ಹಾಗೂ ಮಾದ್ಯಮ ಬಳಸುವಂತ ಸಂದರ್ಭದಲ್ಲಿ ಮೊದಲೇ ಸೂಕ್ತ ಪ್ರಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾದ್ದರಿಂದ ಆ ಕುರಿತು ನಿಗಾವಹಿಸಲು ಸೂಚಿಸಿದರು.

ಚುನಾವಣಾ ಅಭ್ಯರ್ಥಿಗಳು ಅಕ್ರಮಗಳು ನಡೆಯದಂತೆ ಕ್ರಮವಹಿಸಬೇಕು. ಅಕ್ರಮ ನಡೆದ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಎಫ್‌ಐಆರ್‌ ದಾಖಲಿಸಬೇಕು. ಎಫ್‌ ಐಆರ್‌ ಪ್ರತಿಯನ್ನು ಪಡೆಯಬೇಕು ಎಂದು ತಿಳಿಸಿದರು. ರಾಜಕೀಯ ಪಕ್ಷಗಳು ಜಾತಿ, ಧರ್ಮ, ಭಾಷೆಯ ಮೇಲೆ ಮತ ಕೇಳುವುದು ಅಪರಾಧವಾಗಿದ್ದು, ಅದಕ್ಕೆ ಅವಕಾಶ ನೀಡಬಾರದು. ಶಾಂತಿ ಸುವ್ಯವಸ್ಥೆ ಕದಡುವ ಘಟನೆಗಳಿಗೆ ಆಸ್ಪದ ನೀಡಬಾರದು. ಪ್ರಚಾರಕ್ಕೂ ಮೊದಲು ಫ್ರೀಸರ್ಟಿಫಿಕೇಟ್ ಪಡೆಯುವುದು ಕಡ್ಡಾಯವಾಗಿದೆ ಎಂಬುದನ್ನು ತಿಳಿಸಬೇಕು ಎಂದರು.

ಪ್ರಿಂಟಿಂಗ್‌ ಪ್ರಸ್‌ನವರಿಗೆ ಈ ಕುರಿತಾಗಿ ಮಾಹಿತಿ ನೀಡಬೇಕು. ಜಿಲ್ಲಾಮಟ್ಟದ ಸಮಿತಿಯಿಂದ ಅನುಮತಿ ಪಡೆದ ನಂತರವಷ್ಟೇ ಮುದ್ರಿಸಲು ಅವಕಾಶವಿರುತ್ತದೆ ಎಂಬುದನ್ನು ಸೂಚಿಸಬೇಕೆಂದರು. ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ, ಧಾರ್ಮಿಕ ಸಂಸ್ಥೆಗಳನ್ನು ಬಳಸಿಕೊಂಡು ಮತಪ್ರಚಾರ ನಡೆಸುವಂತಿಲ್ಲ. ಅದು ಅಪರಾಧವಾಗುತ್ತದೆ ಎಂದು ತಿಳಿಸಿದರು.

ಚುನಾವಣಾ ಸಿಬ್ಬಂದಿಗೆ ಸಂಬಂಧಿಸಿದ ಇಲಾಖೆ ವತಿಯಿಂದ ಗುರುತಿನ ಚೀಟಿ ನೀಡಬೇಕು. ಅಭ್ಯರ್ಥಿಗಳು ಮತದಾರರಿಗೆ ಮಾದರಿ ಬ್ಯಾಲೆಟ್‌ ಮುದ್ರಿಸಿ ಮತದಾನದ ಕುರಿತು ಮಾಹಿತಿ ನೀಡಲು ಅವಕಾಶವಿದೆ. ಆದರೆ ನಿಗದಿತ ನಮೂನೆ ಹೋಲಿಕೆಯಾಗದ ರೀತಿಯಲ್ಲಿ ಮುದ್ರಿಸಬೇಕು. ಚುನಾವಣೆಯು ಪಾರದರ್ಶಕ, ಸುಲಲಿತವಾಗಿ ಸಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇನ್ನಿತರ ಅಗತ್ಯ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದರು. ಡಿವೈಎಸ್ಪಿ ವಾಲೈಂಟನ್‌ ಡಿಸೋಜಾ, ಸಹಾಯಕ ವಿಭಾಗಾಧಿಕಾರಿ ಜಯಲಕ್ಷ್ಮೀ  ರಾಯಕೋಡ ಹಾಗೂ ವಿವಿಧ ತಾಲೂಕುಗಳ ತಹಶೀಲ್ದಾರ್‌ ಸೇರಿದಂತೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next