ಪಡುಬಿದ್ರಿ: ಸುಜ್ಲಾನ್ ಯೋಜನಾ ಪಾರದರ್ಶಕತೆಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಸಹಿತ ಹಾಸನದ ಡೆಪ್ಯುಟಿ ಲೇಬರ್ ಕಮಿಷನರ್ ಮೂಲಕ ಮಾಧ್ಯಮಗಳೆದುರು ಸ್ಪಷ್ಟ ತನಿಖೆಯಾಗಬೇಕಿದೆ. ಸುಜ್ಲಾನ್ ಬ್ಲೇಡ್ ತನ್ನ ಉತ್ಪಾದನಾ ಹಂತದಲ್ಲಿ ವಿಷಕಾರಿ ಪ್ಲಾಸ್ಟಿಕ್ ಮೂಲ ಸತ್ವವನ್ನು ಬಳಸಿಕೊಳ್ಳುತ್ತಿರುವುದಾಗಿಯೂ ಅಲ್ಲಿಗೆ ಸಾರ್ವಜನಿಕರ ಪ್ರವೇಶ ನಿರಾಕರಿಸಲಾಗುತ್ತಿದ್ದು ಕಾರ್ಮಿಕರು ತಮ್ಮ ರಕ್ಷಣೆಗೆ ಮಾಸ್ಕ್ ಧರಿಸಿ ಕೆಲಸ ನಿರ್ವಹಿಸುತ್ತಿರುವುದಾಗಿ ರಾಜ್ಯ ಪಂಜಾಯತ್ ಒಕ್ಕೂಟದ ಉಪಾಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ.
ಯುಪಿಸಿಎಲ್‌ಗಿರುವಂತಹ ಮುಕ್ತ ಪ್ರವೇಶ ಸುಜ್ಲಾನ್‌ಗಿಲ್ಲ. ಮತ್ತೆ ಪರಿಸರ ಸಹ್ಯ ಯೋಜನೆ ಎಂಬುದಾಗಿ ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಸ್ಥಳೀಯ ಪೊಲೀಸರಿಗೂ ಒಳ ಪ್ರವೇಶಿಸಲು ಬಿಡದಂತಹ ಮೆಗಾ ಯೋಜನೆಯಲ್ಲಿ ಅಡಗಿರುವಂತಹ ಹುಳುಕುಗಳೇನು ಎಂಬುದನ್ನು ಮೊದಲಾಗಿ ಜಿಲ್ಲಾಡಳಿತ ಬಯಲುಗೊಳಿಸಬೇಕಿದೆ ಎಂದು ಡಾ| ಶೆಟ್ಟಿ ಹೇಳಿದ್ದಾರೆ.
ಕಾರ್ಮಿಕರು ಸಂಕಷ್ಟದಲ್ಲಿ: ಕಾರ್ಮಿಕರಿಗೆ ಜೀವನ ಭದ್ರತೆಯಿಲ್ಲ. ಉದ್ಯೋಗ ಭದ್ರತೆಯಿಲ್ಲ. ಜೀತದಾಳುಗಳಂತೆ ನೋಡಲಾಗುತ್ತಿದೆ. ಅಗ್ನಿ ದುರಂತದಂತಹ ಅಪಾಯದ ಸ್ಥಿತಿಗಳಲ್ಲಿ ಅನುಸರಿಸಬೇಕಾದ ಕಾರ್ಮಿಕರ ರಕ್ಷಣಾ ವಿಧಾನಗಳಲ್ಲಿಯೂ ಇಲ್ಲಿ ವೈಫಲ್ಯವಿದೆ. ಬಳಕೆ ಬಳಿಕ ವಿಷಕಾರಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಾವ ರೀತಿಯಲ್ಲಿ ವಿಲೇವಾರಿ ಮಾಡಿಕೊಳ್ಳಲಾಗುತ್ತದೆ ಎನ್ನುವಂತಹಾ ಮಾಹಿತಿಯನ್ನೂ ಇಲ್ಲಿನ ಅಧಿಕಾರಿಗಳು ಹೊರಗೆಡಹುತ್ತಿಲ್ಲ. ಇದನ್ನೂ ಪರಿಸರ ಇಲಾಖೆಯ ಅಧಿಕಾರಿಗಳ ಮೂಲಕ ತನಿಖೆಗೊಳಪಡಿಸಬೇಕಿದೆ ಎಂಬುದನ್ನು ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಎಸ್‌ಇಝಡ್ ಹೆಸರಲ್ಲಿ ಭೂ ಕಬಳಿಕೆಯ ಆರೋಪಗಳೂ ಸುಜ್ಲಾನ್ ವಿರುದ್ಧವಿದೆ. ಸಿಎಸ್‌ಆರ್ ನಿಧಿಯ ಬಳಕೆಯಲ್ಲೂ ಸುಜ್ಲಾನ್ ಬಹಳಷ್ಟು ಹಿಂದುಳಿದಿದೆ. ಯೋಜನಾ ಪ್ರದೇಶದ ಪಕ್ಕದಲ್ಲಿನ ರಸ್ತೆಗಳ ಸ್ಥಿತಿಯೂ ದೇವರಿಗೆ ಪ್ರಿಯವಾಗಿದ್ದು ಮೂಲಸೌಕರ್ಯ ಅಭಿವೃದ್ಧಿಯಲ್ಲೂ ಸುಜ್ಲಾನ್ ನೆರವು ಏನೇನೂ ಇಲ್ಲ ಎಂದು ಡಾ| ಶೆಟ್ಟಿ ಆರೋಪಿಸಿದ್ದಾರೆ.