ಉಡುಪಿ: ಮೂಲ ಕೃತಿ ರಚನೆ ಸುಲಭ. ಆದರೆ ಅದನ್ನು ಇನ್ನೊಂದು ಭಾಷೆಗೆ ಅನುವಾದಿಸುವುದು ಅತ್ಯಂತ ಕಷ್ಟ. ಮೂಲ ಕೃತಿಯಲ್ಲಿ ಸ್ಥಳೀಯ ಭಾಷೆ, ಸಂಸ್ಕೃತಿ, ಲೇಖಕನ ಆಶಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯ್ಕೆ ಇರುತ್ತದೆ. ಆದುದರಿಂದ ಅನುವಾದಿಸುವಾಗ ಮೂಲ ಕೃತಿಗೆ ಧಕ್ಕೆ ಬಾರದಂತೆ ಅನುವಾದಿಸಬೇಕಾಗುತ್ತದೆ ಎಂದು ಶಿಕ್ಷಣ ತಜ್ಞ ಪ್ರೊ| ಮಹಾಬಲೇಶ್ವರ ರಾವ್ ಅಭಿಪ್ರಾಯಪಟ್ಟರು.
ಎಂಜಿಎಂ ರವೀಂದ್ರ ಮಂಟಪದಲ್ಲಿ ಸೋಮವಾರ ನಡೆದ ಮಣಿಪಾಲ್ ಯುನಿವರ್ಸಲ್ ಪ್ರಸ್ ಪ್ರಕಟಿಸಿದ “ದಿ ಅದರ್ ಫೇಸ್’ ಮತ್ತು “ಎ ಶೆùನ್ ಫಾರ್ ಸರಸಮ್ಮ’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ| ನಾ. ಮೊಗಸಾಲೆ ಅವರ “ಮುಖಾಂತರ’ ಕಾದಂಬರಿ ಅನುವಾದಿತ ಡಾ| ಎನ್. ತಿರುಮಲೇಶ್ವರ ಭಟ್ ಅವರ “ದಿ ಅದರ್ ಫೇಸ್’ ಮತ್ತು ಕೋಟ ಶಿವರಾಮ ಕಾರಂತರ “ಸರಸಮ್ಮನ ಸಮಾಧಿ’ ಕಾದಂಬರಿ ಅನುವಾದಿತ ಡಿ.ಎ. ಶಂಕರ್ ಅವರ “ಎ ಶೆùನ್ ಫಾರ್ ಸರಸಮ್ಮ’ ಕೃತಿಗಳು ಮೂಲಕೃತಿಗಳೇ ಎನ್ನುವಷ್ಟರ ಮಟ್ಟಿಗೆ ಅದ್ಭುತವಾಗಿ ಅನುವಾದಗೊಂಡಿವೆ. ಅನುವಾದ ಕಾಲಹರಣ ಮಾಡುವುದಕ್ಕಲ್ಲ. ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಭಾಗಿಸುತ್ತಿರುವುದು ಆಘಾತಕಾರಿ ಎಂದರು.
ಇತಿಹಾಸತಜ್ಞ ಪ್ರೊ| ಬಿ. ಸುರೇಂದ್ರ ರಾವ್ ಮಾತನಾಡಿ, ಕೃತಿಗಳು ಸಮಾಜಕ್ಕೆ ಬಲವಾದ ಅವಶ್ಯ ಸಂದೇಶಗಳನ್ನು ಸಾರುವ ಮಾಧ್ಯಮ. ಅನ್ಯ ಭಾಷಿಕರಿಗೆ ಕೃತಿಯ ಬಗ್ಗೆ ತಿಳಿಯಲು ಅನುವಾದ ಅನಿವಾರ್ಯ ಎಂದರು. ಸಾಹಿತಿ ಡಾ| ನಾ. ಮೊಗಸಾಲೆ ಮಾತನಾಡಿದರು. ಮಣಿಪಾಲ ಎಂಯುಪಿಯ ಮುಖ್ಯಸ್ಥೆ ಡಾ| ನೀತಾ ಇನಾಂದಾರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ ತಂತ್ರಿ ಸ್ವಾಗತಿಸಿದರು.