Advertisement

ಟ್ರಾನ್ಸ್‌ಫಾರ್ಮರ್‌ ದುರಸ್ತಿ ವಿಳಂಬ:ಅಧಿಕಾರಿಗಳಿಗೆ ತರಾಟೆ

12:18 PM Jun 18, 2019 | Team Udayavani |

ಮಂಡ್ಯ: ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳು ಸಕಾಲದಲ್ಲಿ ದುರಸ್ತಿ ಯಾಗುತ್ತಿಲ್ಲ, ವಿದ್ಯುತ್‌ ಕಾಮಗಾರಿಗಳೂ ವೇಗವಾಗಿ ನಡೆಯುತ್ತಿಲ್ಲ, ಗಾಳಿ-ಮಳೆಯಿಂದ ಹಾನಿಗೊಳಗಾಗಿರುವ ವಿದ್ಯುತ್‌ ಕಂಬಗಳನ್ನು ತಿಂಗಳಾದರೂ ಬದಲಾಯಿಸಿಲ್ಲ, ಬತ್ತಿಹೋದ ಕೊಳವೆ ಬಾವಿಯ ಸ್ಥಳದಿಂದ 300 ಮೀ. ದೂರದಲ್ಲಿ ನಿರ್ಮಿಸಿರುವ ಹೊಸ ಕೊಳವೆ ಬಾವಿಗೆ ವಿದ್ಯುತ್‌ ಸಂಪರ್ಕ ಸ್ಥಳಾಂತರಿಸುವಲ್ಲೂ ವಿಳಂಬ ನೀತಿ.

Advertisement

ಹೀಗೆ ಸೆಸ್ಕ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ತರಾಟೆಗೆ ತೆಗೆದುಕೊಂಡವರು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಪ್ರಕಾಶ್‌ ಹಾಗೂ ಹೆಚ್.ಟಿ.ಮಂಜು.

ನಗರದ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಾಗರತ್ನಸ್ವಾಮಿ ಅಧ್ಯಕ್ಷತೆ ಯಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೆ.ಆರ್‌.ಪೇಟೆ ತಾಲೂಕಿನಲ್ಲಿ ಹಿಂದಿನಿಂದಲೂ ಟ್ರಾನ್ಸ್‌ ಫಾರ್ಮರ್‌ ಕೊರತೆ ನೀಗಿಲ್ಲ. 15 ದಿನಗಳಾದರೂ ಅವುಗಳನ್ನು ದುರಸ್ತಿಪಡಿಸುತ್ತಿಲ್ಲ. ಸರ್ಕಾರದ ಆದೇಶದಂತೆ ಸುಟ್ಟುಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ನಗರ ಪ್ರದೇಶಕ್ಕೆ 24 ಗಂಟೆಯೊಳಗೆ, ಗ್ರಾಮೀಣ ಪ್ರದೇಶಕ್ಕೆ 72 ಗಂಟೆಯೊಳಗೆ ನೀಡಬೇಕು. ಈ ಆದೇಶ ಪಾಲನೆಯಾಗುತ್ತಿಲ್ಲ. ಟ್ರಾನ್ಸ್‌ಫಾರ್ಮರ್‌ ದುರಸ್ತಿ ಕೇಂದ್ರಗಳು ನಾಮಕಾವಸ್ಥೆ ಕೇಂದ್ರಗಳಾಗಿವೆ ಎಂದು ಆಕ್ರೋಶದಿಂದ ನುಡಿದರು.

52 ಟ್ರಾನ್ಸ್‌ಫಾರ್ಮರ್‌ ಭಸ್ಮ: ಸೆಸ್ಕ್ ಇಇ ಶ್ವೇತಾ ಇದಕ್ಕೆ ಪ್ರತಿಕ್ರಿಯಿಸಿ, ಮೇ ತಿಂಗಳಲ್ಲಿ 52 ಟ್ರಾನ್ಸ್‌ಫಾರ್ಮರ್‌ ಸುಟ್ಟುಹೋಗಿದ್ದು, ಅದರಲ್ಲಿ 28 ಬದಲಾಯಿಸಲಾಗಿದೆ. ಅನಧಿಕೃತ ಐಪಿ ಸೆಟ್‌ಗಳಿಂದಾಗಿ ಟ್ರಾನ್ಸ್‌ಫಾರ್ಮರ್‌ಗಳು ಹೆಚ್ಚು ಸುಟ್ಟುಹೋಗುತ್ತಿವೆ. ಆದರೂ ಕುಡಿಯುವ ನೀರಿಗೆ ವಿದ್ಯುತ್‌ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಕೃಷಿಕರಿಗೆ ಒಂದು ವಾರವಾದರೂ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಮಾಡಿಕೊಡುತ್ತಿಲ್ಲ. ದುರಸ್ತಿ ಕೇಂದ್ರಗಳು ಇರುವುದೇಕೆ. ಸಕಾಲದಲ್ಲಿ ದುರಸ್ತಿ ಮಾಡದಿರುವುದಕ್ಕೆ ಇರುವ ತೊಂದರೆಯಾದರೂ ಏನು ಎಂದು ಹೆಚ್.ಟಿ.ಮಂಜು ಪ್ರಶ್ನಿಸಿದರು. ಈ ಬಗ್ಗೆ ಮಾಹಿತಿ ಪಡೆದು ತಿಳಿಸುವುದಾಗಿ ಹೇಳಿದಾಗ, ಸಭೆ ನಡೆದು ಆರು ತಿಂಗಳಾಗಿದೆ. ಇನ್ನೂ ಮಾಹಿತಿ ಪಡೆಯುತ್ತಲೇ ಇದ್ದರೆ ಏನರ್ಥ. ಸಭೆಗೆ ನಾಮಕಾವಸ್ಥೆಗೆ ಬಂದು ಏನೋ ಉತ್ತರ ಕೊಡುವುದಲ್ಲ. ನಿಖರ ಮಾಹಿತಿಯೊಂದಿಗೆ ಬರುವಂತೆ ತರಾಟೆಗೆ ತೆಗೆದುಕೊಂಡರು.

Advertisement

ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಸಮೀಪದ ಸಾದೇನಹಳ್ಳಿಯಲ್ಲಿ ಕೊಳವೆಬಾವಿಯೊಂದು ಸಂಪೂರ್ಣ ಬತ್ತಿದೆ. ಅಲ್ಲಿಂದ 300 ಮೀ. ದೂರದಲ್ಲಿ ಹೊಸ ಕೊಳವೆ ಬಾವಿ ನಿರ್ಮಿಸಿದೆ. ಇದೇ ಸಂಪರ್ಕವನ್ನು ಅಲ್ಲಿಗೆ ಸ್ಥಳಾಂತರಿಸದೆ ವಿಳಂಬ ಮಾಡಲಾಗುತ್ತಿದೆ. ಮೇಲಧಿಕಾರಿ ಕೇಳಿದರೆ ಸ್ಥಳಾಂತರಕ್ಕೆ ಅವಕಾಶವಿಲ್ಲ ಎನ್ನುತ್ತಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಪ್ರಕಾಶ್‌ ಪ್ರಶ್ನಿಸಿದರು. ಇದಕ್ಕೆ ಸೆಸ್ಕ್ ಅಧಿಕಾರಿ ಉತ್ತರಿಸಿ, ಪ್ರತಿ 50 ಮೀಟರ್‌ ದೂರಕ್ಕೆ ಒಂದೊಂದು ಕಂಬ ನೆಡಬೇಕಾಗುತ್ತದೆ. ಅದರಂತೆ 6 ಕಂಬ ನೆಟ್ಟು ವಿದ್ಯುತ್‌ ಸಂಪರ್ಕ ಸ್ಥಳಾಂತರ ಮಾಡಬಹುದು. ಅದರ ಅಂದಾಜು ವೆಚ್ಚ ತಯಾರಿಸಿ ನೀಡುವುದಾಗಿ ಹೇಳಿದರು. ಕೆ.ಆರ್‌.ಪೇಟೆ ತಾಲೂಕಿನ ಹರಳಹಳ್ಳಿಯಲ್ಲಿ 5-6 ಕಂಬ ಗಾಳಿ-ಮಳೆಗೆ ಮುರಿದುಕೊಂಡು ಅಪಾಯಕಾರಿ ಸ್ಥಿತಿಯಲ್ಲಿವೆ. ಒಂದು ತಿಂಗಳಾದರೂ ಅವುಗಳನ್ನು ಸುಸ್ಥಿತಿಗೆ ತರುವ ಪ್ರಯತ್ನ ನಡೆಸಿಲ್ಲ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಪ್ರಶ್ನಿಸಿದರು. ಶೀಘ್ರ ಮಾಹಿತಿ ಪಡೆದು ಅವುಗಳನ್ನು ಸರಿಪಡಿಸುವುದಾಗಿ ಸೆಸ್ಕ್ ಅಧಿಕಾರಿಗಳು ತಿಳಿಸಿದರು.

ನಿತ್ಯ 5000 ಲೀಟರ್‌ ಖಾಸಗಿ ಹಾಲು ಮಾರಾಟ: ಮಂಡ್ಯ ಜಿಲ್ಲೆಯಲ್ಲಿ ನಿತ್ಯ 5000 ಲೀಟರ್‌ ಖಾಸಗಿ ಹಾಲು ಮಾರಾಟವಾಗುತ್ತಿದೆ. ಗ್ಯಾಟ್ ಒಪ್ಪಂದದ ಪ್ರಕಾರ ಲೈಸೆನ್ಸ್‌ ಇಲ್ಲದೆ ಮಾರಾಟ ಮಾಡುವುದಕ್ಕೆ ಕಂಪನಿಗಳಿಗೆ ಅವಕಾಶವಿದೆ. ನಾವೂ ಸಹ ನಂದಿನಿ ಹಾಲಿನ ಬಗ್ಗೆ ಪ್ರಚಾರ ಮಾಡುತ್ತಿರುವುದಾಗಿ ಮನ್‌ಮುಲ್ ಜಂಟಿ ನಿರ್ದೇಶಕ ರಾಜು ಸಭೆಗೆ ತಿಳಿಸಿದಾಗ, ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿರುವಿರಿ ಎಂದು ಪ್ರಭಾರ ಸಿಇಒ ಪ್ರಕಾಶ್‌ ಪ್ರಶ್ನಿಸಿದರು. ಈ ಸಂಬಂಧ ನಾವು ಆಹಾರ ಸಂರಕ್ಷಕ ಮತ್ತು ಕಲಬೆರಕೆ ಸಂಸ್ಥೆಗೆ ಹಾಲಿನ ಪರೀಕ್ಷೆ ನಡೆಸುವಂತೆ ಪತ್ರ ಬರೆದಿದ್ದೇವೆ. ಅವರಿಗಷ್ಟೇ ಇದರ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದರು.

ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಲ್ಲಿ ಪುರುಷರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಉತ್ಪಾದಕರಿಗೂ ಹಾಗೂ ಕಾರ್ಯದರ್ಶಿಗಳಿಗೂ ಘರ್ಷಣೆಯಾಗಿದೆ. ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ, ಮಾರ್ಗ ವಿಸ್ತರಣಾಧಿಕಾರಿಗಳು ಏನು ಮಾಡುತ್ತಿ ದ್ದಾರೆ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಪ್ರಕಾಶ್‌ ಪ್ರಶ್ನಿಸಿದಾಗ, ಈ ಬಗ್ಗೆ ನೋಟಿಸ್‌ ಜಾರಿಗೊಳಿಸಿದ್ದೇವೆ. 538 ಮಹಿಳಾ ಸಂಘಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದಾಗ, ಆಕ್ರೋಶಗೊಂಡ ಡಿ.ಕೆ.ಶಿವಪ್ರಕಾಶ್‌ ನೀವು ಹುದ್ದೆಗೆ ಬಂದು 3 ತಿಂಗಳಾಗಿದೆ ಎಂದಿದ್ದೀರಿ. ಇಲ್ಲಿಯವರೆಗೆ ಮಾಹಿತಿ ಪಡೆದುಕೊಂಡಿಲ್ಲವೇಕೆ ಎಂದು ಹರಿಹಾಯ್ದರು. ಜಿಪಂ ಉಪಾಧ್ಯಕ್ಷೆ ಗಾಯತ್ರಿ, ಮುಖ್ಯ ಯೋಜನಾಧಿಕಾರಿ ಧನುಷ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next