Advertisement

Netravati ನದಿ ತೀರದ 22 ಕುಟುಂಬಗಳ ಸ್ಥಳಾಂತರ

11:35 AM Aug 01, 2024 | Team Udayavani |

ಉಳ್ಳಾಲ: ಉಳ್ಳಾಲ ತಾಲೂಕು ವ್ಯಾಪ್ತಿಯ ನೇತ್ರಾವತಿ ನದಿ ತೀರದ ಪಾವೂರು ಗ್ರಾಮವೊಂದರಲ್ಲೇ ಸುಮಾರು 22 ಕುಟುಂಬದ ಸದಸ್ಯರನ್ನು ಮಂಗಳವಾರ ರಾತ್ರಿ ಸ್ಥಳಾಂತರ ಮಾಡಲಾಗಿದೆ. ಬುಧವಾರ ಮಳೆ ಹಾಗೂ ನೆರೆ ಕಡಿಮೆಯಾಗಿದೆ. ಹಾಗಾಗಿ ಕೆಲವು ಮನೆಗಳ ಸದಸ್ಯರು ವಾಪಸ್‌ ಆಗಿದ್ದಾರೆ. ಮಹಿಳೆಯರು ಮಾತ್ರ ವಾಪಸ್‌ ಆಗದೆ ಸುರಕ್ಷಿತ ಪ್ರದೇಶದಲ್ಲಿದ್ದಾರೆ.

Advertisement

ಬುಧವಾರವೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪಗಳು ನಡೆದಿದ್ದು, ಮಂಜನಾಡಿ ಮತ್ತು ಬೋಳಿಯಾರ್‌ನಲ್ಲಿ ಎರಡು ಮನೆಗಳಿಗೆ ತೀವ್ರ ಹಾನಿಯಾಗಿದೆ. ತಾಲೂಕಿನಲ್ಲಿ ಮರ, ಗುಡ್ಡ ಕುಸಿತದಂತಹ ಘಟನೆಗಳು ನಡೆದಿದ್ದು, ಜಿಲ್ಲಾಧಿಕಾರಿ ಹರೇಕಳ ಡ್ಯಾಂ ಮತ್ತು ಅಜೀರು ಉಳಿಯ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಪಾವೂರು ಗ್ರಾಮದಲ್ಲೇ ಹೆಚ್ಚು ನೆರೆ ಹಾವಳಿಯಾಗಿದ್ದು, ಪಾವೂರು ಇನೋಳಿಯಲ್ಲಿ 13 ಮನೆಗಳ ಸದಸ್ಯರನ್ನು ಸ್ಥಳಾಂತರ ಮಾಡಿದ್ದು, ಪಾವೂರು ಅಜೀರು ಉಳಿಯ, ಪಾವೂರು ದೋಟದಲ್ಲಿ ತಲಾ 4 ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಪಾವೂರು ಪಾದೆಯಲ್ಲಿ ಒಂದು ಮನೆಯಲ್ಲಿದ್ದ ಗರ್ಭಿಣಿಯನ್ನು ಮತ್ತು ಹಿರಿಯ ನಾಗರಿಕರೊಬ್ಬರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಉಳ್ಳಾಲದ ಬಂಡಿಕೊಟ್ಯ, ಉಳಿಯ, ಕಲ್ಲಾಪು ಪ್ರದೇಶಗಳಲ್ಲಿಯೂ ನೆರೆನೀರು ಮತ್ತು ಕೃತಕ ನೆರೆಯಾಗಿದೆ.

ಮನೆಗಳಿಗೆ ಹಾನಿ
ಮಂಜನಾಡಿಯ ಕಲ್ಕಟ್ಟದಲ್ಲಿ ಶಾರದಾ ಅವರ ಮನೆಗೆ ಹಾನಿಯಾಗಿದ್ದು, ಬೋಳಿಯಾರು ಕುಕ್ಕೊಟ್ಟಿನ ಶಾರದಾ ಅವರ ಮನೆಗೆ ಹಾನಿಯಾಗಿದೆ. ಸಜಿಪದಲ್ಲಿ ಇಬ್ರಾಹಿಂ ಅವರ ಮನೆಗೆ ಮರ ಬಿದ್ದು ಹಾನಿಯಾಗಿದ್ದು, ಅಕ್ಷರನಗರದಲ್ಲಿ ಶರಿಫ್‌ ಎಂಬವರ ಮನೆ ಆವರಣಗೋಡೆ ಬಿದ್ದು ಹಾನಿಯಾಗಿದೆ.

Advertisement

ಜಿಲ್ಲಾಧಿಕಾರಿ ಭೇಟಿ
ಬುಧವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಹರೇಕಳ ಡ್ಯಾಂ ಮತ್ತು ಅಜೀರು ಉಳಿಯಕ್ಕೆ ಭೇಟಿ ನೀಡಿ ಕಾರ್ಯಚರಣೆಯ ಮಾಹಿತಿ ಪಡೆದರು. ಈ ಸಂದರ್ಭ ಮಾತನಾಡಿದ ಅವರು, ನೇತ್ರಾವತಿ ನದಿ ತಟದ ಜನರು ಕೆಲವು ದಿನಗಳ ಕಾಲ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಬೇಕು. ಗುಡ್ಡ ಕುಸಿತದಂತಹ ಪ್ರದೇಶದಲ್ಲಿ ಮತ್ತು ಅಪಾಯಕಾರಿ ಇರುವ ಪ್ರದೇಶದ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ತಡರಾತ್ರಿವರೆಗೂ ರಕ್ಷಣ ಕಾರ್ಯ
ಪಾವೂರು ಗ್ರಾಮದಲ್ಲಿ ಅಗ್ನಿಶಾಮಕದಳ, ಎನ್‌ ಡಿಆರ್‌ಎಫ್‌ ಸಿಬಂದಿ, ಸಹಾಯಕ ಆಯುಕ್ತ ಹರ್ಷವರ್ಧನ್‌, ತಹಶೀಲ್ದಾರ್‌ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್‌, ಗ್ರಾಮಾಡಳಿತ ಅಧಿಕಾರಿ ನಯನಾ, ಕಾರ್ಯದರ್ಶಿ ಇಸ್ಮಾಯಿಲ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಸಹಿತ ಪಂಚಾಯತ್‌ ಮಾಜಿ ಅಧ್ಯಕ್ಷ ಖಾದರ್‌, ಉಪಾಧ್ಯಕ್ಷ ಆನ್ಸಾರ್‌, ಮೋನು, ಮುಬಾರಕ್‌, ವಿವೇಕ್‌ ರೈ, ಪೊಲೀಸ್‌ ಅಧಿಕಾರಿಗಳು ತಡರಾತ್ರಿ 2 ಗಂಟೆಯವರೆಗೆ ರಕ್ಷಣ ಕಾರ್ಯದಲ್ಲಿ ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next